Advertisement

ಹೈಕ ಅನುದಾನ ಸಮರ್ಪಕ ಬಳಕೆಯಾಗಲಿ

06:16 PM Sep 18, 2019 | Team Udayavani |

ಹರಪನಹಳ್ಳಿ: ಹೈದ್ರಾಬಾದ್‌ ಕರ್ನಾಟಕ ಅನುದಾನ ಸಮರ್ಪಕ ಬಳಕೆ, ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು ಹಾಗೂ ಬಳಿಗನೂರು ಗ್ರಾಮದಲ್ಲಿನ ಅಕ್ರಮ ಮದ್ಯ ಮಾರಾಟ ತಡೆಗಟ್ಟುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪಟ್ಟಣದಲ್ಲಿ ಮಂಗಳವಾರ ಭಾರತ ಕಮ್ಯೂನಿಸ್ಟ್‌ ಪಕ್ಷ (ಸಿಪಿಐ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಹೈದ್ರಾಬಾದ್‌ ಕರ್ನಾಟಕವು ಚಾರಿತ್ರಿಕವಾಗಿ ಸಂಪದ್ಭರಿತ ಸಂಸ್ಕೃತಿ ಹೊಂದಿದೆ. 1947ರಲ್ಲಿ ಸ್ವಾತಂತ್ರ್ಯ ಲಭಿಸಿದ್ದರೂ 1948ರ ಸೆ. 17ಕ್ಕೆ ಹೈಕ ಸ್ವಾತಂತ್ರ್ಯಗೊಂಡಿದೆ. ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ವರದಿಗಳ ಆಧಾರದ ಮೇಲೆ ಸರ್ಕಾರಗಳು ಕಳೆದ ಐದಾರು ದಶಕಗಳಿಂದ ರೂಪಿಸಿದ ಯೋಜನೆಗಳು ಜನರ ಸಂಕಟಗಳಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿವೆ.

ಜನಾಂದೋಲನದ ಪರಿಣಾಮವಾಗಿ ಜಾರಿಗೆ ಬಂದ ಸಂವಿಧಾನದ 371(ಜೆ) ಕಲಂ ತಿದ್ದುಪಡಿಯ ನಂತರವೂ ಪ್ರಾದೇಶಿಕ ಅಸಮಾನತೆ ಮುಂದುವರೆದಿದೆ. ಈ ಭಾಗದ ಜನಪ್ರತಿನಿಧಿಗಳ ಅನುಷ್ಠಾನಾಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಚಾರ ಅಭಿವೃದ್ಧಿಗೆ ಅಡ್ಡಿಯಾಗಿವೆ. ಹೈದ್ರಾಬಾದ್‌ ಕರ್ನಾಟಕ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅಭಿವೃದ್ಧಿ ಮಾಡಬೇಕು ಎಂದು ಒತ್ತಾಯಿಸಿದರು.

ತಾಲೂಕಿನಲ್ಲಿ ಸತತ ಬರಗಾಲಕ್ಕೆ ತುತ್ತಾಗಿರುವ ಎಲ್ಲಾ ರೈತರಿಗೆ ಬೆಳೆ ನಷ್ಟ ಪರಿಹಾರಕ್ಕೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ಹೈ.ಕ. ಭಾಗದ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನ ಮಾಡಬೇಕು. ಹೈ.ಕ. ಭೌಗೋಳಿಕ ಹಾಗೂ ವಾತಾವರಣ ಸನ್ನಿವೇಶಕ್ಕೆ ಅನುಗುಣವಾಗಿರುವ ಕಿರು ನೀರಾವರಿ ವಿಶೇಷ ಸೌಲಭ್ಯ ಒದಗಿಸಬೇಕು. ಕೃಷಿ ಸಂಬಂಧಿತ ಉಪಕಸುಬುಗಳಾದ ಹೈನುಗಾರಿಕೆ, ಕುರಿ, ಕೋಳಿ, ಸಾಕಾಣಿಕೆಗಳಂಥ ಯೋಜನೆಗಳು ಹಾಗೂ ಕೃಷಿ ಸಂಬಂಧಿತ ಕೈಗಾರಿಕೆ ಸ್ಥಳಗಳನ್ನು ಸ್ಥಾಪಿಸಬೇಕು.

ಹೈಕ ಭಾಗದ ನಿರುದ್ಯೋಗ ಸಮಸ್ಯೆಗೆ ನಿವಾರಣೆ ವಿಶೇಷ ಆದ್ಯತೆ ಯೋಜನೆ ಪ್ಯಾಕೇಜ್‌ ಘೋಷಿಸುವುದು. ಮೈದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಬಳಿಗನೂರು ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮರಾಟಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

Advertisement

ಸಿಪಿಐ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್‌, ಸಹ ಕಾರ್ಯದರ್ಶಿ ಎಚ್.ಎಂ. ಸಂತೋಷ್‌, ಮುಖಂಡರಾದ ಎಸ್‌.ರಾಜಶೇಖರ್‌, ಬಳಿಗನೂರು ಕೊಟ್ರೇಶ್‌, ಬಸವರಾಜ್‌, ವಿಶಾಲಮ್ಮ, ಎ.ಡಿ.ದ್ವಾರಕೀಶ್‌, ಭರಮಪ್ಪ, ಮರುಳಸಿದ್ದಪ್ಪ, ಪೂರ್ಯನಾಯ್ಕ, ಬಿ.ಕಾಶಿನಾಥ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next