ಹರಪನಹಳ್ಳಿ: ಲಾಕ್‌ಡೌನ್ ನಂತರ ಮಂಗಳವಾರ ಪಟ್ಟಣದ ಹರಪನಹಳ್ಳಿ ಬಸ್ ಡಿಪೋದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಆರಂಭವಾಗಿದೆ. ಆದರೆ ಗ್ರಾಮೀಣ ಪ್ರದೇಶಕ್ಕೆ ಮೊದಲ ದಿನದಂದು ಯಾವುದೇ ಬಸ್ ಸಂಚರಿಸಿಲ್ಲ ಹಾಗೂ ಖಾಸಗಿ ಬಸ್‌ಗಳ ಸಂಚಾರ ಕೂಡ ಇರಲಿಲ್ಲ.
ಆರಂಭದಲ್ಲಿ ಮಂಗಳವಾರ ಬೆಳಗ್ಗೆ ಒಟ್ಟು 10 ಬಸ್‌ಗಳು ಪ್ರಯಾಣಿಕರನ್ನು ಹೊತ್ತು ಸಂಚರಿಸಿವೆ. ಗರ್ಭಿಣಿಯರು, 60 ವರ್ಷ ಮೇಲ್ಪಟ್ಟ, 10 ವರ್ಷದ ಕೆಳಗಿನವರಿಗೆ ಪ್ರಯಾಣಕ್ಕೆ ಅವಕಾಶವಿಲ್ಲ. ಪ್ರಯಾಣಿಕರ ಲಭ್ಯತೆಯನ್ನು ಆಧರಿಸಿ ವಿವಿಧ ಊರುಗಳಿಗೆ ಬಸ್ ಓಡಿಸಲಾಗುತ್ತಿದೆ. ಬೇಡಿಕೆ ತಕ್ಕಂತೆ ಹಂತ ಹಂತವಾಗಿ ಬಸ್ ಸಂಚಾರ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಆದರೆ ಖಾಸಗಿ ಬಸ್‌ಗಳು ಮಾತ್ರ ರಸ್ತೆಗೆ ಇಳಿದಿಲ್ಲ.
ಪಟ್ಟಣದ ಡಿಪೋದಲ್ಲಿ ಒಟ್ಟು 64 ಬಸ್‌ಗಳಿದ್ದು, ಒಟ್ಟು 56 ರೂಟ್‌ಗಳಿವೆ. ಮಂಗಳವಾರ 10 ಬಸ್ ಬಿಟ್ಟು ಹೊರಗೆ ಬಿಡಲಾಗಿದ್ದು, ಒಟ್ಟು 8 ಬಸ್‌ಗಳು ಮಾತ್ರ ಪ್ರಯಾಣಿಕರನ್ನು ಹೊತ್ತು ಸಂಚರಿಸಿವೆ. 1-ಬೆಂಗಳೂರು, 2-ಕೂಡ್ಲಿಗಿ, 1-ಹೊಸಪೇಟೆ, 4 ಬಸ್ ಹರಿಹರ-ದಾವಣಗೆರೆಗೆ ತೆರಳಿವೆ. ಪ್ರತಿ ಬಸ್‌ನಲ್ಲಿಯೂ ಒಟ್ಟು 30 ಮಂದಿ ಪ್ರಯಾಣ ಬೆಳಸಿದ್ದಾರೆ. ಆದರೆ ವಾಪಾಸ್ ಬರುವಾಗ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗ್ಗೆ 7 ಗಂಟೆಗೆ ಬಸ್ ನಿಲ್ದಾಣಕ್ಕೆ ಆಗಮಿಸಿ ಎಲ್ಲ ರೀತಿಯಿಂದಲೂ ಮುಂಜಾಗ್ರತ ಕ್ರಮಗಳನ್ನು ಪರಿಶೀಲನೆ ನಡೆಸಿದ್ದೇವೆ. ಬಸ್ ನಿಲ್ದಾಣದಲ್ಲಿ ಪ್ರತಿಯೊಬ್ಬ ಪ್ರಯಾಣಿಕರಿಗೂ ಕೈ ತೊಳೆಯಲು ವ್ಯವಸ್ಥೆ ಮಾಡಲಾಗಿದೆ. ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಪ್ರತಿಯೊಬ್ಬರ ವಿಳಾಸ, ಮೊಬೈಲ್ ಸಂಖ್ಯೆ ಪಡೆಯಲಾಗುತ್ತಿದೆ. ಗ್ರಾಮಾಂತರ ಪ್ರದೇಶಕ್ಕೆ ತೆರಳಲು ಪ್ರಯಾಣಿಕರ ಬೇಡಿಕೆ ಇಲ್ಲದಿರುವುದರಿಂದ ಬಸ್ ಓಡಿಸಲಾಗಿಲ್ಲ. ಹಳೇ ದರಲ್ಲಿಯೇ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ಬಸ್ ಡಿಪೋ ವ್ಯವಸ್ಥಾಪಕ ಸಚಿನ್ ಗೌಡ ಮಾಹಿತಿ ನೀಡಿದ್ದಾರೆ.
ಬಸ್ ಸಂಚಾರ ಆರಂಭವಾಗುವ ಹಿನ್ನಲೆಯಲ್ಲಿ ಬಸ್ ನಿಲ್ದಾಣ ಹಾಗೂ ಡಿಪೋಗೆ ತಹಶೀಲ್ದಾರ್ ಡಾ| ನಾಗವೇಣಿ, ತಾಲೂಕು ಆರೋಗ್ಯಾಧಿಕಾರಿ ಶಿವಕುಮಾರ್, ಪಿಎಸ್‌ಐ ಸಿ. ಪ್ರಕಾಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಪ್ರಯಾಣಿಕರಿಗೆ ಮುಂಜಾಗ್ರತ ಕ್ರಮಗಳ ಕುರಿತು ಮಾಹಿತಿ ನೀಡಿದರು. ಮಾಸ್ಕ್ ಇಲ್ಲದೇ ಪ್ರಯಾಣಿಕರಿಗೆ ಪ್ರಯಾಣಕ್ಕೆ ಅವಕಾಶ ಕಲ್ಪಿಸದಂತೆ ಹಾಗೂ ಸಾಮಾಜಿಕ ಅಂತರ ಕಾಪಾಡುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.