Advertisement

ಹರಣಶಿಕಾರಿ ಸೂರಿನ ಕನಸು ಹರೋಹರ!

04:26 PM Feb 25, 2021 | Team Udayavani |

ಗದಗ: ರಾಜ್ಯದಲ್ಲೇ ಮೊದಲ ಬಾರಿಗೆ ಹರಣಶಿಕಾರಿ ಸಮುದಾಯದ ಬಡ ಕುಟುಂಬಗಳಿಗಾಗಿ “ಪ್ರಗತಿ ಬಡಾವಣೆ’ ನಿರ್ಮಿಸಲಾಗಿದೆ. ಆದರೆ, ಮನೆಗಳ ನಿರ್ಮಾಣ ಅಪೂರ್ಣಗೊಂಡಿದ್ದರೂ, ಪರಿಪೂರ್ಣತೆ ಪ್ರಮಾಣಪತ್ರ ಹಾಗೂ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ.

Advertisement

ಆದರೆ ಮನೆ ನಿರ್ಮಾಣ ಪೂರ್ಣಗೊಳ್ಳುವವರೆಗೆ ಗೃಹ ಪ್ರವೇಶ ಮಾಡುವುದಿಲ್ಲವೆಂದು ಫಲಾನುಭವಿಗಳು ಪಟ್ಟು ಹಿಡಿದಿದ್ದಾರೆ. ಪರಿಣಾಮ ಮನೆಗಳು ಪಾಳು ಬಿದ್ದಿವೆ. ಕಣ್ಮುಂದೆ ಕನಸಿನ ಮನೆಗಳು ತಲೆ ಎತ್ತಿದ್ದರೂ ಅವುಗಳಲ್ಲಿ ವಾಸಿಸುವ ಭಾಗ್ಯ ಇಲ್ಲದಂತಾಗಿದೆ. ಅಲೆಮಾರಿ ಸಮುದಾಯಕ್ಕೆ ಸೇರಿದ ಹರಣಶಿಕಾರಿ ಜನರನ್ನು ಬ್ರಿಟಿಷ್‌ ಅವ ಧಿಯಲ್ಲೇ ಬೆಟಗೇರಿ ಗಾಂಧಿ  ನಗರದಲ್ಲಿ ನೆಲೆಗೊಳಿಸಿತ್ತು. ಅವರಿಗೆ ವಸತಿಗಾಗಿ ಜಮೀನನ್ನೂ ನೀಡಿತ್ತು. ಆದರೆ, ಹೊಟ್ಟೆ, ಬಟ್ಟೆಗೆ ಸಾಕಾಗುತ್ತಿದ್ದು, ಸ್ವಂತ ಸೂರು ಎಂಬುದು ಕನಸಿನ ಮಾತಾಗಿತ್ತು. ಇವರ ದಯನೀಯ ಸ್ಥಿತಿ ಕಂಡು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್‌.ಕೆ. ಪಾಟೀಲ ಪ್ರಯತ್ನದಿಂದ ವಿಶೇಷ ವಸತಿ ಯೋಜನೆ ಜಾರಿಗೆ ಬಂದಿತ್ತು.

ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮ ಯೋಜನೆಯಡಿ ಗದಗ- ಬೆಟಗೇರಿ ಅವಳಿ ನಗರದ ವಸತಿ ರಹಿತರಿಗೆ ಸೂರು ಕಲ್ಪಿಸುವ ಯೋಜನೆ ಇದಾಗಿದೆ. ಅದಕ್ಕಾಗಿ ಬೆಟಗೇರಿಯ 5.10 ಎಕರೆ ಒಪ್ರದೇಶದಲ್ಲಿ ಒಟ್ಟು 143 ನಿವೇಶನ ರಚಿಸಿ, ಅದರಲ್ಲಿ 109 ಹರಣಶಿಕಾರಿ ಸಮುದಾಯವರಿಗೆ ಹಾಗೂ 34 ಖಂಜರಭಾಟ ಸಮುದಾಯದವರಿಗೆ ಮನೆ ಒದಗಿಸುವುದು ಇದರ ಉದ್ದೇಶ. ಅಲ್ಲದೇ,ಹರಣಶಿಕಾರಿ ಸಮುದಾಯದವರಿಗಾಗಿ ನಿರ್ಮಿಸಿದ ಮೊದಲ ಬಡಾವಣೆ ಎನ್ನಲಾಗಿದೆ.

ಹಳ್ಳಹಿಡಿದಿದೆ ರಾಜ್ಯದ ಮೊಲದ ಯೋಜನೆ: ಯೋಜನೆಯಡಿ ಸರ್ಕಾರದಿಂದ 5.50 ಲಕ್ಷ ರೂ. ಮೊತ್ತದಲ್ಲಿ ಮೊದಲ ಹಂತದಲ್ಲಿ 40 ಮನೆ ನಿರ್ಮಿಸಲಾಗಿದೆ. ಆದರೆ, ಕೆಲ ಮನೆಗಳಿಗೆ ಅಂತಿಮ ಹಂತದ ಸಣ್ಣ, ಪುಟ್ಟ ಕಾಮಗಾರಿಗಳು ಬಾಕಿ ಇದ್ದರೂ, ಕಳೆದ 2020ರ ಜ.5ರಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮೂಲಕ ಲೋಕಾರ್ಪಣೆಗೊಳಿಸಲಾಗಿದೆ. ಮನೆಗಳು ಉದ್ಘಾಟನೆ ಗೊಂಡು ವರ್ಷ ಕಳೆದರೂ, ಅಡುಗೆ ಮನೆಯಲ್ಲಿ ಸಿಂಕ್‌, ಕೆಲ ಮನೆಗಳಿಗೆ ಬಾಗಿಲುಗಳನ್ನೇ ಕೂರಿಸಿಲ್ಲ. ಒಳಚರಂಡಿ ಸಂಪರ್ಕ ಕಲ್ಪಿಸಿಲ್ಲ. ರಸ್ತೆ, ಕುಡಿವ ನೀರು ಮತ್ತು ಚರಂಡಿ ಎಂಬುದು ಮರೀಚಿಕೆಯಾಗಿವೆ. ಬಡಾವಣೆಯಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಆದರೂ, ಅಧಿಕಾರಿಗಳು ಮಾತ್ರ ಮನೆಗಳಿಗೆ ಪೂರ್ಣ ಪ್ರಮಾಣಪತ್ರ ಮತ್ತು ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಬಾಕಿ ಇರುವ ಅಲ್ಪಸ್ವಲ್ಪ ಕಾಮಗಾರಿಗಳನ್ನು ತಮ್ಮ ಖರ್ಚಿನಲ್ಲೇ ಮಾಡಿಕೊಳ್ಳುವಂತೆ ಸೂಚಿಸುತ್ತಿದ್ದಾರೆ. ಮನೆಗಳು ಹೊರಗೆ ಅಂದ, ಒಳಗೆ ಏನೂ ಇಲ್ಲ ಎಂಬುದು ಫಲಾನುಭವಿಗಳ ಆರೋಪ.

ಸೌಲಭ್ಯಗಳ ಕೊರತೆ ಹಾಗೂ ಕಾಮಗಾರಿ ಅರ್ಧಂಬರ್ಧ ಆಗಿದ್ದರಿಂದ ಫಲಾನುಭವಿಗಳು ಗೃಹ ಪ್ರವೇಶಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಮನೆಗಳು ವರ್ಷದಿಂದ ಪಾಳು ಬಿದ್ದಿದ್ದು, ಹುಳು-ಹುಪ್ಪಡಿ ಆವಾಸ ತಾಣವಾಗುತ್ತಿವೆ ಎನ್ನಲಾಗಿದೆ. ಅಲ್ಲದೇ, ಶೋಷಿತ ಜನರ ಪರವಾಗಿ ಹೊಸ ಯೋಜನೆಗೆ ಕಾರಣರಾದ ಶಾಸಕ ಎಚ್‌.ಕೆ. ಪಾಟೀಲ ಆಗಿರುವ ಲೋಪದೋಷ ಸರಿಪಡಿಸಬೇಕು. ಬಡ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂಬುದು ಫಲಾನುಭವಿಗಳಾದ ಶಾರವ್ವ, ನೀಲವ್ವ ಹಳ್ಳಿಗುಡಿ, ಲಕ್ಷ್ಮಣ ದೊಡ್ಡಮನಿ, ಗೋಪಿ ಚವ್ಹಾಣ ಒತ್ತಾಯ.

Advertisement

ವೀರೇಂದ್ರ ನಾಗಲದಿನ್ನಿ

 

Advertisement

Udayavani is now on Telegram. Click here to join our channel and stay updated with the latest news.

Next