Advertisement

ನುಡಿದರೆ ಮುತ್ತಿನ ಹಾರದಂತಿರಬೇಕು ! ನುಡಿಯದಿದ್ದರೆ ಹೇಗಿರಬೇಕು !

03:45 AM Jan 20, 2017 | |

ಬಾಯಿ ಎನ್ನುವುದು ಮನುಷ್ಯನಿಗೆ ಬಹಳ ಮುಖ್ಯವಾದ ಅಂಗ. ವಾಚಾಳಿಗಳಿಗೆ ಬಾಯಿಯೇ ಆಧಾರ. ಹೆಚ್ಚುಕಡಿಮೆ ನಾನು ಈ ಜಾತಿಗೆ ಸೇರಿದವಳು. ಜಗಳವಾಡುವಾಗ, ಹರಟೆ ಹೊಡೆಯುವಾಗ, ಅಧ್ಯಕ್ಷತೆ ವಹಿಸುವುದೇ ಈ ಬಾಯಿ. ಕಣ್ಣು, ಕಿವಿ ಎಲ್ಲಾ ಮೂಕ ಪ್ರೇಕ್ಷಕರು. ಕಣ್ಣು ಕೆಮರಾದಂತೆ ಕೆಲಸವಹಿಸಿದರೆ, ಕಿವಿ ಸಶಬ್ದವಾಗಿ ಎಲ್ಲೆಲ್ಲಿ ಏನೇನು ಹೇಳುತ್ತಾರೆ ಎಂಬಿತ್ಯಾದಿ ವಿಷಯ ಸಂಗ್ರಹಿಸುತ್ತದೆ. ಒಬ್ಬೊಬ್ಬರ ಮಾತಿನಲ್ಲೂ ಒಂದೊಂದು ಬಗೆಯ ಸ್ವಾರಸ್ಯವಿರುತ್ತದೆ. ಒಬ್ಬರು ವಿಮಾನ ವೇಗದಲ್ಲಿ ಮಾತನಾಡಿದರೆ, ಇನ್ನು ಕೆಲವರು ರೈಲಿನ ವೇಗದಲ್ಲಿ ಮಾತಾಡುವರು. ಮತ್ತೆ ಕೆಲವರು ಜಟಕಾ ಬಂಡಿಯಂತೆ ಟಕ ಟಕ… ಹೀಗೆ, ಹತ್ತು ಹಲವು ರೀತಿಯಲ್ಲಿ ಮಾತನಾಡುವರು. 

Advertisement

ನಾನು ಹೀಗೆ ಮಾತಿನ ಆಲೋಚನಾಲಹರಿಯಲ್ಲಿ ಕಳೆದು ಹೋಗಿದ್ದೆ. ಒಮ್ಮೆ ನಾನು ಮೂಕಿಯಾದರೆ ಹೇಗಿರುತ್ತದೆ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿರುವಾಗ ಅಂಥಾದ್ದೊಂದು ಪ್ರಸಂಗ ನನಗೂ ಕೂಡ ಬಂದೇ ಬಿಟ್ಟಿತು. ಅದು ಹೇಗೆ ಏನನ್ನುತ್ತಿರಾ? ಬನ್ನಿ ನೋಡೋಣ. ಆವಾಗಲೇ ನನಗೆ ಅರಿವಾದದ್ದು ಆ ಸ್ಥಿತಿಯ ಕಷ್ಟವೇನೆಂದು! 

ನಾನು ಮನೆಗೆ ಹೋಗದೆ ಮೂರು-ನಾಲ್ಕು ತಿಂಗಳುಗಳೇ ಕಳೆದು ಹೋಗಿದ್ದವು. ನನ್ನ ದೊಡ್ಡ ಪರೀಕ್ಷೆ ಮುಗಿಸಿ ಹಾಸ್ಟೆಲಿನಿಂದ ಮನೆಗೆ ಹೋದೆ. ಮೊದಲೇ ನನಗೆ ಸ್ವಲ್ಪ ಕೆಮ್ಮು, ಶೀತವಿತ್ತು. ಅದರ ಜೊತೆಗೆ ಸಾಲದಕ್ಕೆ ಗಂಟಲ ಕೆರೆತ ಬೇರೆ. ಅದರಲ್ಲೂ ನನ್ನ ಅಮ್ಮ, ಮಗಳು ಗಂಡನ ಮನೆಯಿಂದ ತವರು ಮನೆಗೆ ಬಂದ ರೀತಿಯಲ್ಲಿ ಉಪಚರಿಸಿದರು. “ತಿನ್ನು ತಿನ್ನು’ ಅಂತಾ ಮಾಡಿ ಹಾಕಿದ್ದೇ ಹಾಕಿದ್ದು.ಅದರಲ್ಲೂ ವಿಶೇಷವಾಗಿ ಎಣ್ಣೆಯಲ್ಲಿ ಕರಿದ ತಿಂಡಿ-ತಿನಿಸುಗಳು. ಇವು ನನ್ನ ಶೀತಕ್ಕೆ ಗೊಬ್ಬರದಂತೆ ಕೆಲಸ ಮಾಡಿತ್ತು. 

ಮಾರನೆಯ ದಿನ ಬೆಳಿಗ್ಗೆ ಒಂದೇ ಒಂದು ಸ್ವರ ಬರಲಿಲ್ಲ ಗಂಟಲಿನಿಂದ. ಎಷ್ಟು ಪ್ರಯತ್ನಿಸಿದರೂ ಅಷ್ಟೇ ದಪ್ಪ ದಪ್ಪ ಸ್ವರ. ಮತ್ತೆ ತುಂಬಾ ಪ್ರಯತ್ನಿಸಿ, ಮಾತನಾಡಲಾಗದೆ ಸುಸ್ತಾಗಿ ಬಿದ್ದೆ.

ಅದೇ ದಿನ ಸಾಲದ್ದ‌ಕ್ಕೆ ಸಂಬಂಧಿಕರ ಯಾರದೋ ಮಗಳ ಮದುವೆಯ ಕಾರ್ಯಕ್ರಮ. ನಾನು ಎಷ್ಟು ಹೇಳಿದರೂ ಕೇಳದೆ ನನ್ನನ್ನು ಎಳೆದು ಕೊಂಡು ಹೋದರು. ಪಾಪ ! ಅಮ್ಮನವರಿಗೊ ಮಗಳು ಮನೆಗೆ ಅಪರೂಪಕ್ಕೆ ಬಂದಿದ್ದಾಳೆ, ಸಂಬಂಧಿಕರಿಗೆಲ್ಲರಿಗೂ ಪರಿಚಯ ಮಾಡಿಕೊಡಬೇಕೆನ್ನುವ ಆಸೆ. ನನಗೋ ಫ‌ಜೀತಿ. ಅಂತೂ ಇಂತೂ ಸುಧಾರಿಸಿಕೊಂಡು ಹೇಗೋ ಹೋದೆ. 

Advertisement

ಅಲ್ಲಿ ನನ್ನ ಗೆಳತಿಯರ ಒಂದು ದಂಡೇ ನನಗಾಗಿ ಕಾಯುತ್ತಿತ್ತು. ನನಗೆ ಈಗ ಬಂತು ಕಷ್ಟದ ಕೆಲಸ. ಎಷ್ಟೋ ಸಮಯದ ನಂತರ ಸಿಕ್ಕ ಗೆಳತಿಯರೊಡನೆ ಮಾತನಾಡುವ ಆಸೆ. ಆದರೆ ಎಲ್ಲಿ ನಾನು ಬಾಯಿ ತೆಗೆದರೆ ಅವರು ಓಡಿ ಹೋಗುತ್ತಾರೋ ಎಂಬ ಭಯ. ಅಂತೂ ಆ ಸಂದರ್ಭವೂ ಬಂದೇ ಬಿಟ್ಟಿತು. 

ಅವರು ಕೇಳಿದ ಪ್ರಶ್ನೆಗೆ ಬರಿ ಸ್ವರಗಳಲ್ಲೇ ಉತ್ತರಿಸಿದೆ. ಅವರು “ಯಾಕೆ ಹೀಗಿದ್ದಿಯಾ ? ಮಾತಾಡು ಏನಾಯಿತು’ ಎಂದು ನಾನಾ ಪ್ರಶ್ನೆ ಕೇಳಿದಾಗ ಅನಿವಾರ್ಯವಾಗಿ ಮಾತಾಡಲೇಬೇಕಾಯಿತು. ಅವರು ಆ ದಿನಪೂರ್ತಿ ನನ್ನ ಕೀಟಲೆ ಮಾಡಿದ್ದೇ ಮಾಡಿದ್ದು. ನಾನು ಅವರ ಮಾತನ್ನು ಕೇಳುತ್ತ ನನ್ನ ಪರಿಸ್ಥಿತಿಗೆ ಮನಸ್ಸಿನಲ್ಲೇ ವ್ಯಥೆಪಡುತ್ತ ಮೌನಧಾರಣೆ ಮಾಡಿದ್ದೆ. ಬಾಯಿ ತೆರೆಯದೆ, ತುಟಿ ಬಿಚ್ಚದೆ, ಸುಮ್ಮನೆ ಗೊಂಬೆಯಂತೆ ಕುಳಿತುಕೊಂಡಿದ್ದೆ. ಅವರಿಗೆ ಮಜಾ, ನನಗೆ ಸಜಾ. 

ಅಂತೂ ಇಂತು ಕಾರ್ಯಕ್ರಮ  ಮುಗಿಸಿ ಮನೆಗೆ ಬಂದರೆ ಅಮ್ಮ ಅವರ ಹರಿಕಥೆ ಶುರು ಮಾಡಿದರು, ಯಾರ ಹತ್ರಾನೂ ಸರಿ ಮಾತಾಡಿಲ್ಲ ಅದೂ ಇದೂ ಎಂದು. ಆಗ ನನಗೆ ಬಂದ ಸಿಟ್ಟಿನಲ್ಲಿ  ಗಂಟಲು ಸರಿಯಾಗಿ ಇದ್ದಿದ್ದರೆ ! ಬಿಡಿ, ಅದರ ಕತೆನೇ ಬೇರೆಯಾಗಿತ್ತು. ಮನೆಗೆ ಹಂಚು ಇದಿದ್ದರೆ ಅದು ತೂತಾಗುತ್ತಿತ್ತೇನೊ ನನ್ನ ಆರ್ಭಟಕ್ಕೆ. ನನ್ನ ಅದೃಷ್ಟಕ್ಕೆ ಅಪ್ಪ ಭದ್ರವಾದ ಕಾಂಕ್ರೀಟಿನ ಮನೆಯನ್ನೇ ಮಾಡಿಸಿದ್ದಾರೆ. ಅವರಿಗೆ ಬಹುಶಃ ಮೊದಲೇ ಇದರ ಸುಳಿವಿತ್ತಿರಬೇಕು.

ನೀವು ಏನೇ ಹೇಳಿ, ಏನು ಬೇಕಾದರೂ ಸಹಿಸಬಹುದು, ಆದರೆ ಮಾತನಾಡದೆ ಇರುವುದಂತೂ ಸಹಿಸಲಾಗದು.  ಇಂತಹ ಸಂದರ್ಭ ವಾಚಾಳಿಗಳಿಗೆ ಬರಬಾರದೆಂದು ಆ ದೇವರಲ್ಲಿ ವಿನಂತಿ. ನನಗಂತೂ ಇದು ಅಸಾಧ್ಯ. ಏನಂತೀರಾ ನೀವೆಲ್ಲ ! 

– ಸ್ವಾತಿ ನಾೖಕ್‌

Advertisement

Udayavani is now on Telegram. Click here to join our channel and stay updated with the latest news.

Next