Advertisement

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

11:31 AM Aug 13, 2022 | Team Udayavani |

ಭಾರತದ ಸ್ವಾತಂತ್ರ್ಯಕ್ಕೆ ಇದು ಅಮೃತಕಾಲ. 75 ವಸಂತಗಳ ಸಂಭ್ರಮದಲ್ಲಿರುವ ಭಾರತದ 20 ಕೋಟಿಗೂ ಅಧಿಕ ಮನೆ, ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವುದಕ್ಕೆ ಕೇಂದ್ರಹರ್ಘರ್ತಿರಂಗಾಅಭಿಯಾನ ಆರಂಭಿಸಿದೆ. 13 ಬೆಳಗ್ಗೆ ನಿಮ್ಮ ಮನೆಯ ಮುಂದೆ ಹಾರಿಸಿದ ಧ್ವಜವನ್ನು 15 ಸಂಜೆ ಇಳಿಸಿ. ನೀವೂ ಧ್ವಜ ಹಾರಿಸಿ; ಹಾರಿಸುವಾಗ ಕೆಳಗಿನ ಅಂಶಗಳನ್ನು ಮರೆಯಬೇಡಿ.

Advertisement

 

  • ಭಾರತದ ತ್ರಿವರ್ಣದ ಧ್ವಜಾರೋಹಣ ಮಾಡುವಾಗ ಯಾವಾಗಲೂ ಕೇಸರಿ ಬಣ್ಣ ಮೇಲೆ ಬರುವಂತೆ, ಹಸುರು ಬಣ್ಣ ಕೆಳಗೆ ಬರುವಂತೆ ನೋಡಿಕೊಳ್ಳಿ
  • ಯಾವುದೇ ಕಾರಣಕ್ಕೂ ಹರಿದಿರುವ ಹಾಗೂ ಅಶುಭ್ರ ಧ್ವಜ ಹಾರಿಸುವಂತಿಲ್ಲ.
  • ಯಾವುದೇ ಕಾರಣಕ್ಕೆ ತ್ರಿವರ್ಣ ಧ್ವಜಕ್ಕಿಂತ ಎತ್ತರದಲ್ಲಿ ಅಥವಾ ಅದಕ್ಕೆ ಸರಿ ಸಮನಾಗಿ ಬೇರೆ ಇನ್ನು ಯಾವುದೇ ಧ್ವಜವನ್ನು ಹಾರಿಸುವುದು ನಿಷಿದ್ಧ.
  • ಧ್ವಜವನ್ನು ಆಲಂಕಾರಿಕ ವಸ್ತುವಾಗಿ ಯಾವುದೇ ಕಾರಣಕ್ಕೆ ಬಳಸಕೂಡದು.
  • ತೊಡುವ ಬಟ್ಟೆಯಲ್ಲಿ ಸೊಂಟಕ್ಕಿಂತ ಕೆಳಭಾಗದಲ್ಲಿ ಧ್ವಜವಿರುವಂತಿಲ್ಲ.
  • ಒಂದೇ ದಾರದಲ್ಲಿ ಎರಡು ಧ್ವಜ ಹಾರಿಸುವಂತಿಲ್ಲ. ನೆಲಕ್ಕೆ ತಾಕಿಸುವಂತಿಲ್ಲ.
  • ಯಾವುದೇ ಕಾರಣಕ್ಕೂ ತ್ರಿವರ್ಣ ಧ್ವಜವನ್ನು ಬಂಡಲ್‌ ರೀತಿ ಬಳಸುವಂತಿಲ್ಲ.
  • ಶ್ವೇತ ವರ್ಣದ ಮಧ್ಯ 24 ಗೆರೆಗಳ ನೀಲಿ ಬಣ್ಣದ ಅಶೋಕ ಚಕ್ರವಿರಬೇಕು.
  • ಧ್ವಜದ ಮೇಲೆ ಬರಹ ಇರಬಾರದು; ಧ್ವಜವನ್ನು ಜಾಹೀರಾತಿಗೆ ಬಳಸಬೇಡಿ
  • ಧ್ವಜವನ್ನು ಹಾರಿಸುವ ಕಂಬ/ಸ್ತಂಭದ ಮೇಲೆ ಜಾಹೀರಾತು ಇರಬಾರದು.
  • ಅಸುರಕ್ಷಿತ ಅಥವಾ ಧ್ವಜಕ್ಕೆ ಹಾನಿಯುಂಟಾಗಬಹುದಾದ ಸ್ಥಳದಲ್ಲಿ ಧ್ವಜಾರೋಹಣ ಮಾಡುವಂತಿಲ್ಲ.

ಧ್ವಜ ಹೇಗಿರಬೇಕು?:

ತ್ರಿವರ್ಣ ಧ್ವಜವು ಆಯತಾಕಾರದಲ್ಲಿಯೇ ಇರಬೇಕು. ಅದರಲ್ಲೂ ಧ್ವಜದ ಗಾತ್ರ 3:2 (ಅಗಲ:ಉದ್ದ) ಅನುಪಾತದಲ್ಲಿಯೇ ಇರಬೇಕು. ಧ್ವಜವು ಕೈಯಲ್ಲಿ ನೇಯ್ದಿರುವ ಉಣ್ಣೆ, ಹತ್ತಿ ಅಥವಾ ರೇಷ್ಮೆ ಬಟ್ಟೆಯದ್ದೇ ಆಗಿರಬೇಕು ಎನ್ನುವ ನಿಯಮ ಈ ಹಿಂದೆ ಇತ್ತಾದರೂ ಇತ್ತೀಚೆಗೆ ಇದರಲ್ಲಿ ಬದಲಾವಣೆ ತರಲಾಗಿದೆ. ಪಾಲಿಸ್ಟರ್‌ ಧ್ವಜಕ್ಕೂ ಅನುಮತಿ ಸಿಕ್ಕಿದೆ. ಹಾಗೆಯೇ ಮಿಷನ್‌ಗಳಲ್ಲಿ ನೇಯ್ದಿರುವ ಬಟ್ಟೆಯ ಧ್ವಜಕ್ಕೂ ಅನುಮತಿ ನೀಡಲಾಗಿದೆ.

ಧ್ವಜ ಮಡಚುವುದು ಹೇಗೆ? :

Advertisement

ಧ್ವಜವನ್ನು ಸ್ವತ್ಛ, ಸಮತಟ್ಟಾದ ಸ್ಥಳದಲ್ಲಿ ಇಟ್ಟುಕೊಳ್ಳಿ. ಮೊದಲಿಗೆ ಕೇಸರಿ ಮತ್ತು ಹಸುರು ಬಣ್ಣದ ಬಟ್ಟೆಯನ್ನು ಬಿಳಿ ಬಣ್ಣದ ಬಟ್ಟೆಯ ಕೆಳಗೆ ಮಡಚಿ. ಆಯತಾ ಕಾರಾದಲ್ಲಿರುವ ಬಿಳಿ ಬಣ್ಣದ ಬಟ್ಟೆಯಲ್ಲಿ ಕೇವಲ ಅಶೋಕ ಚಕ್ರ ಕಾಣುವಂತೆ ಇನ್ನೆರೆಡು ತುದಿಗಳನ್ನು ಮಡಚಿ.

ಧ್ವಜಾರೋಹಣ ಹೇಗೆ? :

ಧ್ವಜವನ್ನು ಅತ್ಯಂತ ಗೌರವಯುತವಾಗಿ ಹಾರಿಸಬೇಕು. ಧ್ವಜವನ್ನು ಸ್ತಂಭಕ್ಕೆ ಏರಿಸುವಾಗ ವೇಗವಾಗಿ ಏರಿಸಬೇಕು ಹಾಗೆಯೇ ಸ್ತಂಭದಿಂದ ಇಳಿಸುವಾಗ ನಿಧಾನವಾಗಿ ಇಳಿಸಬೇಕು.

ಹರಿದರೆ ಏನು ಮಾಡಬೇಕು? :

ಒಂದು ವೇಳೆ ಧ್ವಜವು ಹರಿದರೆ ಅಥವಾ ಬಳಸಲಾರದ ಸ್ಥಿತಿಗೆ ಬಂದರೆ, ಅದನ್ನು ಖಾಸಗಿ ಯಾಗಿ ಗೌರವಯುತವಾಗಿ ಸುಟ್ಟು ಹಾಕಬೇಕು. ಹಾಗೆಯೇ ವಿಶೇಷ ದಿನಗಳಂದು(ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನ) ಪೇಪರ್‌ ಧ್ವಜಗಳನ್ನು ಬಳಸಬಹುದು. ಅವುಗಳನ್ನೂ ಕೂಡ ಅಷ್ಟೇ ಗೌರವಯುತವಾಗಿ ಖಾಸಗಿಯಾಗಿ ಸುಟ್ಟು ಹಾಕಬೇಕು.

ಎಲ್ಲೆಂದರಲ್ಲಿ ಎಸೆಯಬೇಡಿ :

ಹಾರಿಸಿದಷ್ಟೇ ಗೌರವಯುತವಾಗಿ ಅದನ್ನು ಸಂರಕ್ಷಿಸುವುದೂ ಮುಖ್ಯ. ಮಡಚಿರುವ ಧ್ವಜವನ್ನು ಒಂದೇ ಕೈನಲ್ಲಿ ಹೇಗಾದರೂ ಹಾಗೆ ಹಿಡಿದುಕೊಳ್ಳುವಂತಿಲ್ಲ. ಗೌರವಪೂರ್ವಕವಾಗಿ ಧ್ವಜವನ್ನು ಎರಡೂ ಅಂಗೈಗಳ ಮೇಲೆ ಇಟ್ಟುಕೊಳ್ಳಬೇಕು. ಅದನ್ನು ನಿಮ್ಮ ಮನೆಯ ಭದ್ರ ಸ್ಥಳದಲ್ಲಿ ಇಡಬೇಕು. ಧ್ವಜದ ಗೌರವಕ್ಕೆ ಧಕ್ಕೆಯಾಗುವಂತಹ ಸ್ಥಳದಲ್ಲಿ ಅದನ್ನು ಇರಿಸುವಂತಿಲ್ಲ. ಇಷ್ಟ ಬಂದಾಗಲೆಲ್ಲ ಅದನ್ನು ಹೊರತೆಗೆದು ಬಳಕೆ ಮಾಡುವಂತೆಯೂ ಇಲ್ಲ.

ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ: ವ್ಯತ್ಯಾಸವೇನು? :

ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜ ಹಾರಿಸಲಾಗುತ್ತದೆಯಾದರೂ ಈ ಎರಡೂ ದಿನಗಳ ಧ್ವಜಾರೋಹಣದ ಮಧ್ಯೆ ವ್ಯತ್ಯಾಸವಿದೆ.

ಭಾರತಕ್ಕೆ 1947ರ ಆ. 15ರಂದು ಸ್ವಾತಂತ್ರ್ಯ ಸಿಕ್ಕ ನೆನಪಿಗಾಗಿ ಪ್ರತೀ ಆ.15ಕ್ಕೆ ಧ್ವಜಾರೋಹಣ ಮಾಡಲಾಗುತ್ತದೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಸಂವಿಧಾನ ರಚನೆಯಾಗಿರಲಿಲ್ಲ ಹಾಗೂ ರಾಷ್ಟ್ರಪತಿ ಚುನಾಯಿತರಾಗಿರಲಿಲ್ಲ. ಆ ಹಿನ್ನೆಲೆ ಸ್ವಾತಂತ್ರ್ಯ ದಿನಕ್ಕೆ ಪ್ರಧಾನಿ ಅವರೇ ಧ್ವಜಾರೋಹಣ ಮಾಡುತ್ತಾರೆ. ಹಾಗೆಯೇ 1950ರ ಜ. 26ರಂದು ಸಂವಿಧಾನ ರಚನೆಯಾದ ನೆನಪಿಗಾಗಿ ನಡೆಸಲಾಗುವ ಗಣರಾಜ್ಯೋತ್ಸವಕ್ಕೆ ರಾಷ್ಟ್ರಪತಿಗಳೇ ಧ್ವಜಾರೋಹಣ ನಡೆಸುತ್ತಾರೆ.

ಸ್ವಾತಂತ್ರ್ಯೋತ್ಸವದಂದು ಧ್ವಜವನ್ನು ಕೆಳಗೇ ಕಟ್ಟಿರಲಾಗುತ್ತದೆ. ಹಾಗೆಯೇ ಪ್ರಧಾನಿ ಅವರು ಅದನ್ನು ನಿಧಾನವಾಗಿ ಮೇಲಕ್ಕೇರಿಸಿ, ಧ್ವಜ ಬಿಚ್ಚುತ್ತಾರೆ. ಆದರೆ ಗಣರಾಜ್ಯೋತ್ಸವದಂದು ಧ್ವಜವನ್ನು ಮೊದಲಿಗೇ ಮೇಲೆಯೇ ಕಟ್ಟಲಾಗಿರುತ್ತದೆ. ಅದನ್ನು ರಾಷ್ಟ್ರಪತಿ ಬಿಚ್ಚುತ್ತಾರಷ್ಟೇ. ಇಲ್ಲಿ ಧ್ವಜವನ್ನು ಮೇಲೇರಿಸುವ ಪ್ರಶ್ನೆ ಇರುವುದಿಲ್ಲ. ಇಂಗ್ಲಿಷ್‌ನಲ್ಲಿ ಸ್ವಾತಂತ್ರ್ಯೋತ್ಸವ ದ ಧ್ವಜಾರೋಹಣವು ‘ ‘Flag Hoisting’ ಎಂದು ಗುರುತಿಸಿಕೊಂಡರೆ, ಗಣರಾಜ್ಯೋತ್ಸವದ ಧ್ವಜಾರೋಹಣವು Flag Unfurling’ ‘ ಎಂದು ಗುರುತಿಸಿಕೊಳ್ಳುತ್ತದೆ.

ಸ್ವಾತಂತ್ರ್ಯೋತ್ಸವದಂದು ಧ್ವಜವನ್ನು ಹೊಸದಿಲ್ಲಿ ಕೆಂಪು ಕೋಟೆಯಲ್ಲಿ ಹಾರಿಸಲಾಗುತ್ತದೆ.  ಗಣರಾಜ್ಯೋತ್ಸವದಂದು ರಾಜಪಥದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಜರಗುತ್ತದೆ.

ವಾಹನದ ಮೇಲೆ ಬಳಸುವುದಕ್ಕೂ ಮುನ್ನ… :

ತ್ರಿವರ್ಣ ಧ್ವಜವನ್ನು ವಾಹನದ ಮೇಲೆ ಬಳಸುವುದಕ್ಕೆ ಎಲ್ಲರಿಗೂ ಅನುಮತಿಯಿಲ್ಲ. ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲರುಗಳು, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ ನ್ಯಾಯಮೂರ್ತಿಗಳು, ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿ ಹಾಗೂ ನ್ಯಾಯ ಮೂರ್ತಿಗಳು, ಕೇಂದ್ರ ಸಚಿವರು ಮತ್ತು ಸಹಾ ಯಕ ಸಚಿವರು, ಭಾರತದ ಕಾರ್ಯಾಚರಣೆಗಳ ಮುಖ್ಯಸ್ಥರು, ಕೇಂದ್ರ ಮಟ್ಟದ ಉಪ ಮಂತ್ರಿಗಳು, ಮುಖ್ಯಮಂತ್ರಿಗಳು, ಲೋಕ ಸಭೆಯ ಸ್ಪೀಕರ್‌, ರಾಜ್ಯಸಭೆಯ ಉಪಾಧ್ಯಕ್ಷರು,  ಲೋಕಸಭೆಯ ಉಪ ಸಭಾಧ್ಯಕ್ಷರು, ರಾಜ್ಯ ವಿಧಾನ ಪರಿಷತ್‌ಗಳ ಅಧ್ಯಕ್ಷರು, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಯ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಮಾತ್ರವೇ ತಮ್ಮ ಕಾರಿನ ಮುಂಭಾಗದಲ್ಲಿ ಧ್ವಜ ಇರಿಸಿಕೊಳ್ಳುವುದಕ್ಕೆ ಅವಕಾಶವಿದೆ.

ಎಲ್ಲರೂ ಧ್ವಜ ಹಾರಿಸಬಹುದು: 

ಹಿಂದೆ ಪ್ರಮುಖ ಹುದ್ದೆಯಲ್ಲಿದ್ದವರಿಗೆ ಮಾತ್ರ ರಾಷ್ಟ್ರೀಯ ಧ್ವಜ ಹಾರಿಸಲು ಅವಕಾಶ ಇತ್ತು. ಹರ್‌ಘರ್‌ ತಿರಂಗಾ ಅಭಿಯಾನಕ್ಕಾಗಿ ಧ್ವಜಸಂಹಿತೆಗೆ ತಿದ್ದುಪಡಿ ತರಲಾಗಿದ್ದು, ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೂ ಹಾರಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next