Advertisement
Related Articles
Advertisement
ಇವತ್ತು “ಪುಷ್ಪಕವಿಮಾನ’ ಸಿನಿಮಾದಲ್ಲಿ ಅಪ್ಪನಾಗಿ ನನ್ನ ನಟನೆಯನ್ನು ಜನರು ಇಷ್ಟಪಟ್ಟಿದ್ದಾರೆ ಅಂದರೆ ಅದಕ್ಕೆ ಕಾರಣ ನನ್ನ ಮಗಳು. ಅವಳು ಒಂದೊಂದು ದಿನ ಒಂದೊಂದು ಪಾತ್ರವನ್ನು ನಿರ್ವಹಿಸುತ್ತಾಳೆ. ಹುಷಾರು ತಪ್ಪಿದಾಗ ಡಾಕ್ಟರ್, ಸಾಂತ್ವನ ಹೇಳುವ ಅಮ್ಮ, ತಿದ್ದುವ ಶಿಕ್ಷಕಿ ಹೀಗೇ… ಅದು ನನಗೆ ತುಂಬಾ ಆಶ್ಚರ್ಯ! ಎಷ್ಟೋ ಸಾರಿ ನನಗೇ ಈಗಿನ ಕಾಲದ ಟೆಕ್ನಾಲಜಿಗಳು, ಆಗುಹೋಗುಗಳು ತಿಳಿಯೋಲ್ಲ. ಆ ವಿಚಾರದಲ್ಲಿ ನನಗೆ ಅವಳು ನನಗೆ ಗುರು. ಒಂದ್ಸಲ ಕಂಪ್ಯೂಟರ್‌ನಲ್ಲಿ ಸ್ಪ್ರೆಡ್‌ಶೀಟ್ ಉಪಯೋಗಿಸುವಾಗ ಏನೋ ಎಡವಟ್ಟು ಮಾಡಿಕೊಂಡು ಅರ್ಧ ಗಂಟೆ ಸುಮ್ಮನೇ ಕೂತಿದ್ದೆ. ಅವಳು ಬಂದವಳೇ “ಅಯ್ಯೋ ಅಪ್ಪಾ, ಇದು ತುಂಬಾ ಸುಲಭ’ ಅಂತ ಪಟ್ಟಂತ ಸರಿ ಮಾಡಿ ಹೋದಳು.
ನಾನು ಸಿನಿಮಾ, ಪ್ರೋಗ್ರಾಮು ಅಂತ ಬ್ಯುಸಿಯಾಗಿರುವುದರಿಂದ ಹೊರಗಡೆ ಏನು ನಡೆಯುತ್ತಿದೆ ಅಂತಲೇ ಗೊತ್ತಾಗೋದಿಲ್ಲ. ಅದು ಗೊತ್ತಾಗೋದು ನನ್ನ ಮಗಳಿಂದ. ನನಗೂ ಈ ಪೀಳಿಗೆಗೂ ನಡುವಿನ ಸಂಪರ್ಕ ಸೇತು ಅವಳು. ಅವಳಿಂದ ತುಂಬಾ ಕಲಿತಿದ್ದೀನಿ. ಅವಳಿಂದ ಕಲಿತದ್ದು, ಸಿನಿಮಾ ವಿಷಯದಲ್ಲಿ ನಾನು ಅಪ್‌ಡೇಟ್ ಆಗಲೂ ಸಹಾಯ ಮಾಡಿದೆ. ಸಾಫ್ಟ್ವೇರುಗಳಲ್ಲಿ ವಿಂಡೋಸ್ 7, ವಿಂಡೋಸ್ 10 ಥರಾ… ಹೊಸ ವರ್ಷನ್‌ಗಳಿರುತ್ತವೆ. ಅದೇ ರೀತಿ ಮಗಳು ನನ್ನದೇ ಹೊಸ ವರ್ಷನ್! ಅವಳನ್ನು “ರಮೇಶ್ 2.0′ ಅಥವಾ “ರಮೇಶ್ 2017′ ಅಂತ ಹೇಳಬಹುದು!ನನ್ನ ಮಗಳಿಗೀಗ 24 ವರ್ಷ. ತುಂಬಾ ಜಾಣೆ. ಅಷ್ಟೇ ಅಲ್ಲ ಒಬೀಡಿಯಂಟ್ ಮತ್ತು ಡೆಡಿಕೇಟೆಡ್ ಕೂಡಾ. ಅದು ರೇರ್ ಕಾಂಬಿನೇಷನ್. ಕಂಪನಿಯೊದರಲ್ಲಿ ಕೆಲಸಕ್ಕೆ ಹೋಗುತ್ತಾಳೆ. ತನ್ನ ಬದುಕನ್ನು ತಾನೇ ಸರಿದೂಗಿಸಿಕೊಳ್ಳಬಲ್ಲಳು. ಒಬ್ಬ ಆಪ್ಪನಿಗೆ ಇದಕ್ಕಿಂತ ಇನ್ನೇನು ಬೇಕು? ಐ ಆ್ಯಮ್ ಹ್ಯಾಪಿ.
2. ರೇಖಾ ನನ್ನ ತಾಯಿ! -ಅಶೋಕ್ ಕಶ್ಯಪ್
ಏನೇನೆಲ್ಲಾ ಆಗಿ ಹೋಯಿತು ನನ್ನ ಬದುಕಿನಲ್ಲಿ! ಒಂಚೂರೂ ಬೇಜಾರಿಲ್ಲ. ಆಗಿದ್ದೆಲ್ಲಾ ಒಳ್ಳೇದಕ್ಕೆ! ಹೇಳಬೇಕೆಂದರೆ, ಇಟ್ ವಾಸ್ ಒನ್ ಹೆಲ್ ಆಫ್ ಎ ರೈಡ್! ಅಂತರಿಕ್ಷದಲ್ಲಿ ಅಪಘಾತಕ್ಕೊಳಗಾಗಿ, ಭೂಮಿಗೆ ಸುರಕ್ಷಿತವಾಗಿ ಹಿಂದಿರುಗಲು ಶತಪ್ರಯತ್ನ ನಡೆಸುವ ಗಗನಯಾನಿ ಹೆಣ್ಣು ಮಗಳೊಬ್ಬಳು ಹೇಳುವ ಈ ಸಾಲು “ಗ್ರಾÂವಿಟಿ’ ಸಿನಿಮಾದಲ್ಲಿ ಬರುತ್ತೆ. ಭೂಮಿಗೆ ವಾಪಸ್ಸಾಗುವ ಕಟ್ಟ ಕಡೆಯ ಪ್ರಯತ್ನದಲ್ಲಿ ಆಕೆಗೆ ಸೋಲಾಗಬಹುದು, ಇಲ್ಲಾ ಯಶ ಸಿಗಬಹುದು ಅನ್ನೋ ಪರಿಸ್ಥಿತಿ. ಆ ಸಂದರ್ಭದಲ್ಲೇ ಆಕೆ ಸ್ವಗತ ಹೇಳುವುದು: “ಏನೇ ಆದರೂ ಇಟ್ ವಿಲ್ ಬಿ ಒನ್ ಹೆಲ್ ಆಫ್ ಎ ರೈಡ್!’. ಸ್ವಲ್ಪ ಯೋಚಿಸಿದರೆ ಒಂದು ಸಮಯದಲ್ಲಿ ನನ್ನದೂ ಅದೇ ಪರಿಸ್ಥಿತಿ ಇತ್ತು. ಒಂದೇ ವ್ಯತ್ಯಾಸವೆಂದರೆ ನಾನು ಪುಣ್ಯವಂತ. ನನ್ನ ಜೊತೆ ನನ್ನ ಹೆಂಡತಿಯಿದ್ದಳು! ಆ ದಿನ ನನಗೆ ಚೆನ್ನಾಗಿ ನೆನಪಿದೆ. ಹುಷಾರಿಲ್ಲ ಅಂತ ಡಾಕ್ಟ್ರ ಬಳಿ ಹೋಗಿದ್ದೆ. ಅವರು ರಿಪೋರ್ಟ್ ನೋಡಿ ಲುಕೇಮಿಯಾ ಇದೆ ಅಂದರು. ನನಗೋ… ಹಾಗಂದರೇನೆಂದೇ ತಿಳಿಯದು. ಶೀತ, ನೆಗಡಿ ಥರದ್ದೇನೋ ಒಂದಿರಬಹುದು ಅಂತ ಅಂದುಕೊಂಡು ವಾಪಸ್ ಬರುತ್ತಾ ಕಾರಿನಿಂದಲೇ ರೇಖಾಗೆ ಕಾಲ್ ಮಾಡಿ ಕೇಳಿದೆ. “ಲುಕೇಮಿಯಾ ಅಂದರೆ ಏನೇ? ನನಗೆ ಅದಿದೆಯಂತೆ’ ಅಂತ. ಪಾಪ, ಆ ಶಾಕ್‌ಗೆ ಅವಳು ಮೂಛೆì ಹೋಗಿಬಿಟ್ಟಿದ್ದಾಳೆ. ನನಗೇನು ಗೊತ್ತು ಲುಕೇಮಿಯಾ ಅಂದರೆ ಬ್ಲಿಡ್‌ಕಾÂನ್ಸರ್ ಅಂತ? ಮನೆಗೆ ಬಂದು ಕೊನೆಯ ಬಾರಿ ಅವಳನ್ನು ಸಂತೈಸಿದೆ. ಕೊನೆಯ ಬಾರಿ ಏಕೆಂದರೆ, ಆಮೇಲೆ ಅವಳನ್ನು ಸಂತೈಸುವ ಪ್ರಮೇಯವೇ ಬರಲಿಲ್ಲ. ಅಸಾಧ್ಯವಾದುದನ್ನು ಸಾಧಿಸಲು ಅವಳಾಗಲೇ ತಯಾರಾಗಿ ನಿಂತಿದ್ದಳು. ಆಗ ತಾನೇ ನಾನೂ ರೇಖಾ ಮದುವೆಯಾಗಿದ್ದೆವು. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ, ಬದುಕು ಸುಖಕರವಾಗಿತ್ತು. ಎಲ್ಲವೂ ಸರಿಯಾಗಿದ್ದ ಹೊತ್ತಿನಲ್ಲೇ ನಾನು ಮಾರಣಾಂತಿಕ ಖಾಯಿಲೆಗೆ ತುತ್ತಾಗಿದ್ದೆ. ಹೀಗಾಗಿ ನನ್ನವಳ ಬದುಕನ್ನು ಹಾಳು ಮಾಡಿದೆ ಅನ್ನೋ ತಪ್ಪಿತಸ್ಥ ಭಾವನೆ ಬಂದುಬಿಟ್ಟಿತು. ಸಾಲದ್ದಕ್ಕೆ ಕೈಹಿಡಿದ ಕೆಲಸಗಳೆಲ್ಲ ಕೈಬಿಟ್ಟವು, ಕೈ ಹಿಡಿಯುತ್ತಾರೆಂದು ನಂಬಿಕೊಂಡವರು ಬಚ್ಚಿಟ್ಟುಕೊಂಡರು. ಉಳಿಸಿದ್ದ ಅಷ್ಟಿಷ್ಟು ಹಣ ಖರ್ಚಾಗಿ ಬಿಟ್ಟಿತ್ತು. ಕ್ಯಾನ್ಸರ್ ಟ್ರೀಟ್‌ಮೆಂಟ್ ಅಂದರೆ ಸುಮ್ಮನೆಯೇ? ಲಕ್ಷಾಂತರ ದುಡ್ಡು ಸೇರಿಸಬೇಕು. ಅದೂ ಗ್ಯಾರೆಂಟಿ ಕೊಡದ ಚಿಕಿತ್ಸೆಗೆ! ನಾನಂತೂ ಬದುಕೋ ಆಸೆಯನ್ನೇ ಬಿಟ್ಟಿದ್ದೆ. “ಸುಮ್ಮನೆ ಯಾಕೆ ಖರ್ಚು ಮಾಡುತ್ತೀಯಾ, ನನ್ನನ್ನು ಊರಲ್ಲಿ ಬಿಟ್ಟುಬಿಡು. ಅಲ್ಲಿಯೇ ಆರಾಮಾಗಿ ಕೊನೆಯುಸಿರೆಳೆಯುತ್ತೇನೆ’ ಎಂದಿದ್ದೆ. ಆಗ ನನ್ನ ಕಣ್ಣಲ್ಲಿ ಕಣ್ಣಿಟ್ಟು ರೇಖಾ ಹೇಳಿದ್ದು ಒಂದೇ ಮಾತು, “ಕೋಟಿ ಕೊಟ್ಟಾದರೂ ಸರಿಯೇ ನಿಮ್ಮನ್ನ ಉಳಿಸ್ಕೋತೀನಿ!’ ಹೇಳಿದಂತೆ ನನ್ನ ಪತ್ನಿ ನನ್ನನ್ನ ಉಳಿಸಿಕೊಂಡಳು. ಈಗ ನಾನು ಕ್ಯಾನ್ಸರ್ ಮುಕ್ತನಾಗಿದ್ದೇನೆ. ಆರೋಗ್ಯವಾಗಿದ್ದೇನೆ. ಹಿಂದೆಂದಿಗಿಂತಲೂ ಹೆಚ್ಚು ಕ್ರಿಯಾಶೀಲನಾಗಿದ್ದೇನೆ. ಕ್ಯಾನ್ಸರ್ ಬರೋ ಮುಂಚೆ ಪತ್ನಿಯಾಗಿದ್ದ ರೇಖಾ, ಈಗ ನನ್ನ ತಾಯಿ! ಅವಳ ಕುರಿತು ಎಷ್ಟು ಮಾತಾಡಿದರೂ ಕಡಿಮೆಯೇ.
3. ಅಮ್ಮ ನನ್ನ ಅಪ್ಪ! – ಬಿ.ಸುರೇಶ್
ಸಾಮಾನ್ಯವಾಗಿ ಅಮ್ಮ ಅಮ್ಮನೇ ಆಗಿರುತ್ತಾಳೆ. ಆದರೆ ನನಗೆ ನನ್ನ ಅಮ್ಮ “ಅಪ್ಪ’ ಕೂಡಾ ಹೌದು! ಈ ದಿನ ನಾನೇನಾಗಿದ್ದೇನೋ, ನನ್ನ ನಿಲುವುಗಳೇನಿವೆಯೋ ಎಲ್ಲವೂ ಬಂದಿರೋದು ಅಮ್ಮನಿಂದ. ಗೂಡಲ್ಲಿ ತಾಯಿಹಕ್ಕಿ ಮರಿಗಳಿಗೆ ಗುಟುಕು ನೀಡುತ್ತಾ ಹಾರಲು ಕಲಿಸುತ್ತದೆ. ಅದೇ ರೀತಿ ನನನ್ನ ತಾಯಿ ಬದುಕಿನಲ್ಲಿ ನನಗೆ ಹಾರಲು ಕಲಿಸಿದಳು. ನನ್ನಮ್ಮ ಪತ್ರಕರ್ತೆಯಾಗಿದ್ದಳು. ಸಿನಿಮಾ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪತ್ರಕರ್ತೆ. ನಾನು ಪ್ರಪಂಚವನ್ನು ನೋಡಿದ್ದು ಅವಳ ಕಣ್ಣುಗಳಿಂದ. ಮನೆಯಲ್ಲಿ ಮಾಸ್ತಿಯವರಿಂದ ಹಿಡಿದು ದೇವನೂರರವರೆಗಿನ ಬರಹಗಾರರ ಪುಸ್ತಕಗಳಿರುತ್ತಿದ್ದವು. ಓದಿದೆ. ಅಮ್ಮ ಸಿನಿಮಾ ಪತ್ರಕರ್ತೆಯಾದ್ದರಿಂದ ಎಪ್ಪತ್ತರ ದಶಕದ ಸಿನಿಮಾ ಚಳವಳಿ ಕುರಿತು ತಿಳಿದುಕೊಳ್ಳುವಂತಾಯಿತು. ಸಿನಿಮಾರಂಗದ ದೊಡ್ಡ ದೊಡ್ಡ ವ್ಯಕ್ತಿಗಳೊಡನೆ ಸಿನಿಮಾಗಳನ್ನು ನೋಡಿದೆ. ನನ್ನಮ್ಮನಿಂದಲೇ ರಂಗಭೂಮಿಯೂ ಪರಿಚಯವಾಯಿತು. ನಾನು ಬರೆಯುತ್ತಿದ್ದ ನಾಟಕಗಳು, ಸಿನಿಮಾ ಸ್ಕ್ರಿಪ್ಟ್ಗಳನ್ನು ಮೊದಲು ಓದುತ್ತಿದ್ದವಳು ಅಮ್ಮ. ಹೀಗಾಗಿ ಆಕೆಯೇ ನನ್ನ ಮೊದಲ ವಿಮರ್ಶಕಿ ಎನ್ನಬಹುದು. ಇವತ್ತೂ ಅದು ಮುಂದುವರಿದಿದೆ. ಅಮ್ಮನಿಂದ ನೇರವಾಗಿ ಮತ್ತು ಪರೋಕ್ಷವಾಗಿ ಕಲಿತ ಪಾಠಗಳು ಅನೇಕ. ಕೆಲವನ್ನು ಹೆಸರಿಸುವುದಾದರೆ ಕಾಯಕ ನಿಷ್ಠೆ, ಒಪ್ಪಿಕೊಂಡ ಕೆಲಸ ಪೂರ್ತಿ ಏನೇ ಆದರೂ ಪೂರ್ತಿ ಮಾಡುವುದು, ನೈತಿಕತೆ. ನಾಲ್ಕು ಜನರಿಗೆ ಸಹಾಯವಾಗುವಂತೆ ಬದುಕುವುದು. ಇವೆಲ್ಲವೂ ಆಕೆಯಿಂದಲೇ ಕಲಿತದ್ದು. ಅಮ್ಮನ ಹಲವಾರು ಶೇಡ್‌ಗಳನ್ನ ನೋಡಿದ್ದೇನೆ. ಹಣೆಗೆ ಕಾಸಗಲ ಬೊಟ್ಟಿಟ್ಟು, ಕಟ್ಟಾ ಸಂಪ್ರದಾಯವಾದಿಯಂತೆ ದ್ವಾದಶಿ ಆಚರಣೆಗಳಲ್ಲಿ ಶ್ರದ್ಧೆಯಿಂದ ಪಾಲ್ಗೊಳ್ಳುವುದನ್ನು ಕಂಡಿದ್ದೇನೆ. ಪರಿಸ್ಥಿತಿಯ ಕಾರಣದಿಂದ ಆಸ್ತಿಕತೆಯಿಂದ ದೂರವಾಗುತ್ತಾ ನಾಸ್ತಿಕತೆಗೆ ಹತ್ತಿರವಾದ ಅಮ್ಮನನ್ನೂ ಕಂಡಿದ್ದೇನೆ. ಅವಳು ಅತ್ತಾಗ ನಾನೂ ಅತ್ತಿದ್ದೇನೆ. ಆಕೆಗೆ ಆರೋಗ್ಯ ಸರಿ ಇಲ್ಲದಾಗ, ಆಕೆಗೆ ಯಾಕೆ ಹಾಗಾಯ್ತು ಎಂದು ಸಿಟ್ಟುಗೊಂಡಿದ್ದೇನೆ. ಚಿಕ್ಕಂದಿನಲ್ಲಿ ಒಂದು ದಿನ ನಾನು ಪಕ್ಕದ ಮನೆಯ ಹುಡುಗನಿಗೆ ಏನೋ ತರಲೆ ಮಾಡಿದೆ. ಅವನಮ್ಮ ಅವನನ್ನು ಕರೆದುಕೊಡು ಸೀದಾ ನಮ್ಮ ಮನೆಗೆ ಬಂದು ಅಮ್ಮನ ಕಿವಿ ಊದಿದರು. ಅದೆಲ್ಲಿತ್ತೋ ಅಮ್ಮನ ಸಿಟ್ಟು ನನ್ನನ್ನು ಅನಾಮತ್ತಾಗಿ ಎತ್ತಿ ಬೀದಿಗೆ ಎಸೆದಿದ್ದಳು. ಹೀಗೆ ನನಗೆ “ಅಮ್ಮ’ ಎನ್ನುವ ಪದ ನೂರಾರು ಅರ್ಥಗಳನ್ನು ಹೊಳೆಯಿಸುತ್ತೆ. (ಮೇಲಿನ ಮೂರು ಬರಹಗಳಿಗೆ ಸೇರಿಸಿ)ನಿರೂಪಣೆ – ಹರ್ಷವರ್ಧನ್ ಸುಳ್ಯ
4. ಜ್ಯೋತಿ: ನಮ್ಮ ಮನೆಯ ಬೆಳಕು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಮಂಜುನಾಥ ಮತ್ತು ತಿಪ್ಪಮ್ಮ ದಂಪತಿಯ 2ನೇ ಮಗಳು ಜ್ಯೋತಿ. 8 ವರ್ಷದ ಹಿಂದೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಶ್ರೀನಿವಾಸ್ ಅವರನ್ನು ವಿವಾಹವಾಗಿದ್ದಾರೆ. 100 ಮೀ. ಮತ್ತು 200 ಮೀ. ಓಟ, ರಿಲೇ ಓಟಗಾರ್ತಿಯಾದ ಜ್ಯೋತಿ,. ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್, ಫೆಡರೇಷನ್ ಕಪ್, ಏಷ್ಯನ್ ಅಥ್ಲೆàಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದಿದ್ದಾರೆ. ಈ ವರ್ಷ ನಡೆದ ಕರ್ನಾಟಕ ರಾಜ್ಯ ಒಲಿಂಪಿಕ್ಸ್‌ನಲ್ಲಿ 2 ಚಿನ್ನ ಗೆದ್ದು ಶ್ರೇಷ್ಠ ಅಥ್ಲೀಟ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅವರ ಬಗ್ಗೆ ಪತಿ ಮತ್ತು ಕೋಚ್ ಆಗಿರುವ ಶ್ರೀನಿವಾಸ್ ಹೇಳುವ ಮಾತುಗಳಿವು. “ಮಹಿಳೆಯರ ಸಾಧನೆಗೆ ಅಡ್ಡಿ ಆತಂಕಗಳೇ ಹೆಚ್ಚು. ಅದನ್ನು ಮೆಟ್ಟಿ ನಿಂತು ಸಾಧನೆ ಮಾಡುವುದು ಸುಲಭವಲ್ಲ. ಒಮ್ಮೆ ನಾನು ಪುರುಷನಾಗಿ ಹುಟ್ಟಿದ್ದರೆ, ನಾನೀಗ ಮಾಡಿರುವ ಸಾಧನೆ ಎಷ್ಟೋ ವರ್ಷದ ಹಿಂದೆಯೇ ಆಗಿರುತ್ತಿತ್ತು’
ಇದು 23 ಗ್ರ್ಯಾನ್ ಸ್ಲಾಮ್ ವಿಜೇತೆ, ಜಗತ್ತು ಕಂಡ ಶ್ರೇಷ್ಠ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮಾತು. ಅಮೆರಿಕದ ಸೆರೆನಾ ವಿಲಿಯಮ್ಸ್ ಹೇಳಿರುವ ಮಾತು ಕ್ರೀಡಾಕ್ಷೇತ್ರದಲ್ಲಿ ಮಹಿಳೆಯರಿಗಿರುವ ಅಡಿ ಆತಂಕಗಳನ್ನು ಸೂಚಿಸುತ್ತದೆ. ಇದೇ ನಿಟ್ಟಿನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಸೇರಿದಂತೆ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿರುವ ರಾಜ್ಯದ ಟ್ರಾಕ್ ಅಂಡ್ ಫೀಲ್ಡ್‌ನ ಅಥ್ಲೀಟ್ ಎಚ್.ಎಂ.ಜ್ಯೋತಿ ಬಗ್ಗೆ ಅವರ ಪತಿ ಶ್ರೀನಿವಾಸ್ ಮಾತನಾಡಿದ್ದಾರೆ. ನಾನು ಜ್ಯೋತಿಗೆ ವೈಯಕ್ತಿಕ ಕೋಚ್ ಕೂಡ ಹೌದು. ಆಕೆಗೆ ಈಗ 32 ವರ್ಷವಾಗಿದೆ. ನಮಗೆ 5 ವರ್ಷದ ಮಗಳು ದೃತಿ ಇದ್ದಾಳೆ. ವಯಸ್ಸು, ಮದುವೆ, ಮಗು ಯಾವುದೂ ಜ್ಯೋತಿಯ ಮೇಲೆ ಪರಿಣಾಮ ಬೀರಿಲ್ಲ. ಕ್ರೀಡೆಯ ಮೇಲೆ ಎಷ್ಟು ಪ್ರೀತಿ ಇದೆಯೋ ಅದೇ ಪ್ರೀತಿಯನ್ನು ಮಗಳು ಮತ್ತು ಕುಟುಂಬದ ಮೇಲೂ ತೋರಿಸುತ್ತಾಳೆ. ಒಮ್ಮೆ ಸಾಧನೆಯ ಬಗ್ಗೆ ತೀರ್ಮಾನಿಸಿದರೆ ಹಿಂದೆ ಸರಿಯುವವಳಲ್ಲ. ಶೇ.100 ರಷ್ಟು ಶ್ರಮ ಹಾಕುತ್ತಾಳೆ. ಇದೇ ಆಕೆಯ ಯಶಸ್ಸಿಗೆ ಕಾರಣ.
ನನ್ನ ಮಾರ್ಗದರ್ಶನದಲ್ಲಿಯೇ ಕಠಿಣ ಅಭ್ಯಾಸ ನಡೆಸುತ್ತಾಳೆ. ಎಷ್ಟೋ ಬಾರಿ ಅಭ್ಯಾಸದ ವೇಳೆ ಸುಸ್ತಾಗಿ ಬೀಳುತ್ತಾಳೆ. ವಾಂತಿ ಮಾಡಿಕೊಳ್ಳುತ್ತಾಳೆ. ಅಂತಹ ಸಂದರ್ಭದಲ್ಲಿ ಹೊಟ್ಟೆಯಲ್ಲಿ ತಳಮಳ ಉಂಟಾಗುತ್ತದೆ. ಮನಸ್ಸಿಗೆ ನೋವು ಆಗುತ್ತದೆ. ಆದರೆ ಸಾಧನೆಗೆ ಅನ್ಯಮಾರ್ಗವಿಲ್ಲ. ಅಭ್ಯಾಸ ನಡೆಸಲೇಬೇಕು. ಹೀಗಾಗಿ ಎಷ್ಟೋ ಬಾರಿ ಮನಸ್ಸು ಗಟ್ಟಿಮಾಡಿಕೊಂಡಿದ್ದೇನೆ. ಆಕೆಗೆ ಸ್ಫೂರ್ತಿ ತುಂಬುವ ಮಾತುಗಳನ್ನು ಆಡಿದ್ದೇನೆ. ಈ ಹಿಂದೆ ಕ್ರೀಡೆಯಿಂದ ನಿವೃತ್ತಿ ಪಡೆಯಲು ಒಮ್ಮೆ ಚರ್ಚಿಸಿದ್ದೆವು. ಆದರೆ ಈ ವಯಸ್ಸು ಪುನಃ ಬರುವುದಿಲ್ಲ. ಹೀಗಾಗಿ ದೇಹ ಎಲ್ಲಿಯವರೆಗೂ ಸ್ಪಂದಿಸುತ್ತದೆಯೋ ಅಲ್ಲಿಯವರೆಗೂ ಗುರಿ ಸಾಧಿಸಲು ಪ್ರಯತ್ನಿಸುತ್ತೇನೆ ಎನ್ನತ್ತಾಳೆ. ಆಕೆಯ ಗುರಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು. ಇದಕ್ಕೆ ಬೆಂಬಲವಾಗಿ ನಾನು ನನ್ನ ಕುಟುಂಬ ನಿಂತಿದ್ದೇವೆ. – ನಿರೂಪಣೆ: ಮಂಜು ಮಳಗುಳಿ