Advertisement

ಇಂಗ್ಲೆಂಡ್‌ನ‌ಲ್ಲಿ ಶನಿವಾರ ಗೆಲ್ಲುವ ಖುಷಿಯೇ ಬೇರೆ: ಗಂಗೂಲಿ

11:11 PM Jul 05, 2020 | Sriram |

ಹೊಸದಿಲ್ಲಿ: ಇಂಗ್ಲೆಂಡ್‌ನ‌ ಚಾರಿತ್ರಿಕ ಲಾರ್ಡ್ಸ್ ಅಂಗಳದಲ್ಲಿ ಶನಿವಾರ ಸಾಧಿಸುವ ಗೆಲುವು ವಿಶೇಷವಾದುದು, ಇದರ ಖುಷಿಯೇ ಬೇರೆ ಎಂಬುದಾಗಿ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ. ಮಾಯಾಂಕ್‌ ಅಗರ್ವಾಲ್‌ ಜತೆಗಿನ ಆನ್‌ಲೈನ್‌ ಶೋ ಒಂದರಲ್ಲಿ ದಾದಾ ಈ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಸೌರವ್‌ ಗಂಗೂಲಿ ಇಂಥದೊಂದು ಹೇಳಿಕೆ ನೀಡಲು ಕಾರಣ, 2002ರ ನಾಟ್‌ವೆಸ್ಟ್‌ ಫೈನಲ್‌. ಇಂಗ್ಲೆಂಡ್‌ ನಿಗದಿ ಪಡಿಸಿದ ಬೃಹತ್‌ ಮೊತ್ತವನ್ನು ಯುವ ರಾಜ್‌ ಸಿಂಗ್‌ ಮತ್ತು ಮೊಹಮ್ಮದ್‌ ಕೈಫ್ ಸಾಹಸದಿಂದ ಬೆನ್ನಟ್ಟಿಕೊಂಡು ಹೋದ ಭಾರತ, ಅಮೋಘ ಗೆಲುವು ಸಾಧಿಸಿತ್ತು. ಈ ಲಾರ್ಡ್ಸ್‌ ಕದನ ಶನಿವಾರ ನಡೆದಿತ್ತು. ಇನ್ನೂ ಹಿಂದಕ್ಕೆ ಹೋಗುವುದಾದರೆ ಭಾರತ 1983ರಲ್ಲಿ ತನ್ನ ಚೊಚ್ಚಲ ವಿಶ್ವಕಪ್‌ ಜಯಿಸಿದ್ದು ಕೂಡ ಶನಿವಾರವೇ, ಅದೂ ಲಾರ್ಡ್ಸ್‌ ಅಂಗಳದಲ್ಲೇ.

“ಇಂಗ್ಲೆಂಡಿನಲ್ಲಿ, ಅದೂ ಲಾರ್ಡ್ಸ್‌ ಅಂಗಳದಲ್ಲಿ ಶನಿವಾರ ಗೆಲ್ಲುವುದೊಂದು ವಿಶೇಷ ಅನುಭವ. ಆ ಖದರ್‌, ಆ ಖುಷಿಯೇ ಬೇರೆ. ಅಂದು ಸ್ಟೇಡಿಯಂ ಕಿಕ್ಕಿರಿದು ತುಂಬಿರುತ್ತದೆ. ಇಂಥ ವಾತಾ ವರಣದಲ್ಲಿ ಅಂಗಳಕ್ಕಿಳಿಯುವುದು, ಪ್ರತಿಷ್ಠಿತ ಪಂದ್ಯವನ್ನು ಗೆಲ್ಲುವುದು ನಿಜಕ್ಕೂ ರೋಮಾಂಚನ ಮೂಡಿಸುತ್ತದೆ. ಸಹಜವಾಗಿಯೇ ಇದರ ಸಂಭ್ರಮವನ್ನು ದೊಡ್ಡ ಮಟ್ಟದಲ್ಲಿ ಆಚರಿಸಲಾಗುತ್ತದೆ. ಇದು ನಾನು ಪಾಲ್ಗೊಂಡ ಶ್ರೇಷ್ಠ ಕ್ರಿಕೆಟ್‌ ಪಂದ್ಯ’ ಎಂದು 2002ರ ಜಯಭೇರಿ ಮೊಳಗಿದ ಬಳಿಕ ಲಾರ್ಡ್ಸ್‌ ಬಾಲ್ಕನಿಯಲ್ಲಿ ಅಂಗಿ ಕಳಚಿ ಸಂಭ್ರಮಿಸಿದ ಗಂಗೂಲಿ ಹೇಳಿದರು.

2003ರ ವಿಶ್ವಕಪ್‌ ಫೈನಲ್‌
ಮುಂದಿನ ವರ್ಷವೇ ದಕ್ಷಿಣ ಆಫ್ರಿಕಾ ದಲ್ಲಿ ನಡೆದ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸೌರವ್‌ ಗಂಗೂಲಿ ಸಾರಥ್ಯದ ಭಾರತ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿತು. 1983ರ ಬಳಿಕ ಭಾರತ ಕಂಡ ಮೊದಲ ವಿಶ್ವಕಪ್‌ ಫೈನಲ್‌ ಇದಾಗಿತ್ತು. ಆದರೆ ಭಾರತವಿಲ್ಲಿ ಆಸ್ಟ್ರೇಲಿಯಕ್ಕೆ ಸೋತು ಪ್ರಶಸ್ತಿಯಿಂದ ದೂರವೇ ಉಳಿಯಿತು.

ಈ “ಶೋ’ ವೇಳೆ 2003ರ ವಿಶ್ವಕಪ್‌ ಫೈನಲ್‌ ಪ್ರಸ್ತಾವವೂ ಬಂತು. “ಆಗ ಆಸ್ಟ್ರೇಲಿಯ ಅತ್ಯುತ್ತಮ ತಂಡವಾಗಿತ್ತು. ಇಡೀ ಕೂಟದಲ್ಲಿ ನಾವು ಸೋತದ್ದು ಆಸೀಸ್‌ ಪಡೆಗೆ ಮಾತ್ರ. ನಮ್ಮದು ನಿಜಕ್ಕೂ ಅತ್ಯುತ್ತಮ ಸಾಧನೆ’ ಎಂದರು.

Advertisement

ಇಂದಿನ ಮೂವರು…
ಭಾರತದ 2019ರ ವಿಶ್ವಕಪ್‌ ತಂಡದ ಮೂರು ಆಟಗಾರರನ್ನು 2003ರ ನಿಮ್ಮ ವಿಶ್ವಕಪ್‌ ತಂಡಕ್ಕೆ ಸೇರಿಸಿಕೊಳ್ಳುವುದಾದರೆ ಯಾರನ್ನು ಆರಿಸುತ್ತೀರಿ ಎಂಬ ಕುತೂ ಹಲಭರಿತ ಪ್ರಶ್ನೆಯೊಂದನ್ನು ಅಗರ್ವಾಲ್‌ ಗಂಗೂಲಿಯವರತ್ತ ತೂರಿಬಿಟ್ಟರು.

“ಅದು ದಕ್ಷಿಣ ಆಫ್ರಿಕಾದಲ್ಲಿ ಆಡ ಲಾದ ಪಂದ್ಯಾವಳಿ. ಬೌಲಿಂಗ್‌ನಲ್ಲಿ ಬುಮ್ರಾ ಪರಿಣಾಮ ಬೀರುತ್ತಿದ್ದರು. ಹಾಗೆಯೇ ಬ್ಯಾಟಿಂಗ್‌ ವಿಭಾಗದಲ್ಲಿ ರೋಹಿತ್‌ ಶರ್ಮ ಮತ್ತು ವಿರಾಟ್‌ ಕೊಹ್ಲಿ ನನ್ನ ಆಯ್ಕೆ. ಇದನ್ನು ಸೆಹವಾಗ್‌ ಕೇಳಿಸಿಕೊಳ್ಳುತ್ತಿದ್ದಾರೋ ಏನೋ… ಅವರ ಜತೆ ನಾಳೆ ಮಾತಾಡುತ್ತೇನೆ’ ಎಂದು ಗಂಗೂಲಿ ಚಟಾಕಿ ಹಾರಿಸಿದರು!

Advertisement

Udayavani is now on Telegram. Click here to join our channel and stay updated with the latest news.

Next