Advertisement
ಮನುಷ್ಯನಿಗೆ ಸದಾ ಎದುರಾಗುವ ದೊಡ್ಡ ಸವಾಲು ಎಂದರೆ ಸಂಬಂಧಗಳ ನಿಭಾವಣೆ. “ಎಷ್ಟು ಕಷ್ಟವೋ ಹೊಂದಿಕೆ ಎನ್ನುವುದು ನಾಲ್ಕು ದಿನದ ಬಾಳಿನಲಿ’ ಎಂಬ ಕವಿವಾಣಿಯೇ ಇದೆಯಲ್ಲ!ವ್ಯಕ್ತಿಗೆ ಶಿಕ್ಷಣ ಇರಲಿ, ಇಲ್ಲದೇ ಇರಲಿ, ಜೀವನಾನುಭವದ ಆಧಾರದ ಮೇಲೆ ಪ್ರತಿಯೊಬ್ಬರಲ್ಲಿಯೂ ತಮ್ಮದೇ ಆದ ಅಭಿಪ್ರಾಯಗಳು ರೂಪುಗೊಳ್ಳುತ್ತ ಹೋಗುತ್ತವೆ. ಎಲ್ಲರ ಅಭಿಪ್ರಾಯವೂ ಒಂದೇ ತೆರನಾಗಿ ಇಲ್ಲದೇ ಇರುವಾಗ ವೈಮನಸ್ಯಕ್ಕೆ ಅವಕಾಶ ಸೃಷ್ಟಿಯಾಗುತ್ತದೆ. ಇದಕ್ಕಿರುವ ಒಂದೇ ಪರಿಹಾರವೆಂದರೆ ಮನುಷ್ಯರು ಇದ್ದ ಹಾಗೆಯೇ ಅವರನ್ನು ಒಪ್ಪಿಕೊಳ್ಳುವುದು. ಆದರೆ, ಅದು ಸುಲಭವಾದ ವಿಚಾರವೇನೂ ಅಲ್ಲ. ಆದ್ದರಿಂದ ವ್ಯಾವಹಾರಿಕವಾಗಿ ಅಥವಾ ಭಾವನಾತ್ಮಕವಾಗಿ ವ್ಯಾಜ್ಯಗಳು ಸೃಷ್ಟಿಯಾದಾಗ ಪರಿಹಾರಕ್ಕಾಗಿ ನ್ಯಾಯಾಲಯಗಳು ದಾರಿ ತೋರುತ್ತವೆ.
Related Articles
Advertisement
ಆಸ್ತಿ ತಗಾದೆ, ದಾಯಾದಿ ಜಗಳ: ದಾಯಾದಿ ಮತ್ಸರ, ದಾರಿಗಾಗಿ ಜಾಗ ಕೊಡದೇ ಇರುವವರ ವಿರುದ್ಧ ಜಗಳ, ಸರ್ವೆ ನಂಬರ್‌ಗಳ ವಿವಾದ, ನೀರಿಗಾಗಿ ಜಗಳ, ದೇವರ ನೆಪದಲ್ಲಿ ಜಗಳಗಳು ಸೃಷ್ಟಿಯಾದಾಗ ನ್ಯಾಯಾಲಯವೇ ಕೊನೆಯ ನಿಲ್ದಾಣವಾಗಿಬಿಡುತ್ತದೆ. ಮನೆಗೆ ದಾರಿ ಸಮರ್ಪಕವಾಗಿಲ್ಲದೇ ಇದ್ದಾಗ ಜೀವನ ನಿರ್ವಹಿಸುವುದಕ್ಕೆ ಕಷ್ಟವಾಗಿ ಕೊನೆಗೆ ನ್ಯಾಯಾಲಯದ ತೀರ್ಪಿಗಾಗಿ ಕಾಯುವ ಸಾವಿರಾರು ಕುಟುಂಬಗಳಿವೆ. ಎರಡೂ ಕಡೆಯವರು ಮಾನವೀಯವಾಗಿ ಯೋಚಿಸಿ ಒಂದು ಕ್ಷಣದಲ್ಲಿ ಬಗೆಹರಿಸಬಹುದಾದ ಸಮಸ್ಯೆಯು ನ್ಯಾಯಾಲಯದಲ್ಲಿ ವರ್ಷಗಟ್ಟಲೆ ವಿಚಾರಣೆಗೆ ಒಳಗಾಗುತ್ತಾ, ಎರಡೂ ಕಡೆಯವರು ಮಾನಸಿಕ ತಲ್ಲಣವನ್ನು ಅನುಭವಿಸಬೇಕಾಗಿ ಬರುತ್ತದೆ.
ಉದ್ಯೋಗ ಕ್ಷೇತ್ರದ ಸಮಸ್ಯೆ: ಉದ್ಯೋಗ ಕ್ಷೇತ್ರದಲ್ಲಿ ಉದ್ಯೋಗದಾತರು ಮತ್ತು ಉದ್ಯೋಗಿಗಳ ನಡುವೆ ಸಮಸ್ಯೆಗಳು ಸೃಷ್ಟಿಯಾದಾಗಲೂ ನ್ಯಾಯಾಲಯದ ಮೆಟ್ಟಿಲೇರುವುದು ಅನಿವಾರ್ಯವಾಗುತ್ತದೆ. ಉದ್ಯೋಗದಾತರು ಕೆಲಸಗಾರರ ಶೋಷಣೆ ನಡೆಸದಂತೆ ಉದ್ಯೋಗಿಗಳ ಮೂಲಭೂತ ಹಕ್ಕುಗಳನ್ನು ರಕ್ಷಿಸುವಂತೆ ಕಾರ್ಮಿಕ ಕಾನೂನುಗಳು ನೆರವಾಗುತ್ತವೆ. ಸಾಮಾನ್ಯವಾಗಿ ಒಂದು ಕಂಪೆನಿ ಅಥವಾ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದವರು ಕಾರ್ಮಿಕ ಕಾಯಿದೆಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ.
ಹಕ್ಕು, ಕರ್ತವ್ಯಗಳ ಅರಿವಿರಲಿಜಾತಿನಿಂದನೆ, ಮಹಿಳೆಯರ ಹಕ್ಕುಗಳ ರಕ್ಷಣೆ ಹಾಗೂ ವೈಯಕ್ತಿಕ ಕಾನೂನುಗಳ ಸಣ್ಣಮಟ್ಟಿನ ಅರಿವು ಮೂಡಿಸಿಕೊಳ್ಳಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಮಹಿಳೆಯರು ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಬಾರದು. ಬೇಸರದ ವಿಷಯವೆಂದರೆ ವಿದ್ಯಾವಂತರಾದರೂ, ಇಂತಹ ಮೂಲಭೂತ ವಿಚಾರಗಳನ್ನು ತಿಳಿದುಕೊಳ್ಳುವ ಗೊಡವೆಗೆ ಹೋಗುವುದಿಲ್ಲ. ಕೊನೆಗೆ ಯಾವುದಾದರೂ ಸಮಸ್ಯೆಯ ಸುಳಿಯಲ್ಲಿ ಸಿಲುಕಿದಾಗ ವಕೀಲರು ಹೇಳಿದ್ದನ್ನೇ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ತಮಗೆ ಅನ್ಯಾಯ ಆದಾಗ, ಅದರ ವಿರುದ್ಧ ಕಾನೂನು ಹೋರಾಟ ನಡೆಸಬೇಕು ಎಂಬ ಅರಿವು ಇದ್ದರೆ ತಾನೆ ವಕೀಲರನ್ನು ಭೇಟಿಯಾಗಲು ಸಾಧ್ಯ ಆಗುವುದು. ಲೋಕ್‌ಅದಾಲತ್, ಕೌಟುಂಬಿಕ ನ್ಯಾಯಾಲಯ, ಸ್ಥಳೀಯ ನ್ಯಾಯಾಲಯಗಳು, ಉಚ್ಚ ನ್ಯಾಯಾಲಯ, ಹಸಿರು ಪೀಠ, ವಿಭಾಗೀಯ ಪೀಠ, ಸುಪ್ರೀಮ್‌ಕೋರ್ಟ್ ಇತ್ಯಾದಿಗಳ ಕಾರ್ಯ ವ್ಯಾಪ್ತಿಯ ಸರಿಯಾದ ಅರಿವು ನಮ್ಮಲ್ಲಿ ಇರಬೇಕಾಗುತ್ತದೆ. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ಪ್ರಕಾರ, “ಕಾನೂನಿನ ಸಮರ್ಪಕ ಬಳಕೆ ಮತ್ತು ತಿಳಿವಳಿಕೆಗಳ ಅರಿವಿಲ್ಲದಿರುವಿಕೆಯೇ ಮನುಷ್ಯನ ದೊಡ್ಡ ದೌರ್ಬಲ್ಯವಾಗಿದೆ’. ಪ್ರಕರಣಗಳು ನ್ಯಾಯಾಲಗಳ ಮೆಟ್ಟಿಲೇರಿದ ಬಳಿಕವೂ, ಕೆಲವೊಮ್ಮೆ ಎರಡೂ ಕಡೆಯವರು ಪರಸ್ಪರ ಸಂವಾದ ನಡೆಸಿ ರಾಜೀಸೂತ್ರದ ಮೂಲಕ ಸಮಸ್ಯೆ ಬಗೆಹರಿಸುವ ಅವಕಾಶವನ್ನು ನ್ಯಾಯಾಲಯವೇ ಕಲ್ಪಿಸುತ್ತದೆ. ಇದು ಉತ್ತಮ ವಿಧಾನವಾದರೂ, ದುರ್ಬಲರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ವಕೀಲರ ಹೆಗಲಮೇಲಿರುತ್ತದೆ. ಲೋಕ್ ಅದಾಲತ್‌ಗಳಲ್ಲಿ ಕ್ಷಿಪ್ರವಾಗಿ ಪ್ರಕರಣಗಳ ವಿಲೇವಾರಿ ನಡೆಯುವುದೂ ಉಂಟು. ಏನೇ ಆಗಲಿ, ನಮ್ಮ ಹಿರಿಯ ತಲೆಮಾರಿನವರಂತೂ ಪೊಲೀಸ್ ಠಾಣೆ ಮತ್ತು ನ್ಯಾಯಾಲಯದ ಮೆಟ್ಟಿಲೇರುವ ಸಂದರ್ಭಗಳನ್ನು ತಪ್ಪಿಸುತ್ತಿದ್ದರು. ಆಣೆಪ್ರಮಾಣಗಳು, ಅಥವಾ ದೇವರ ಪ್ರಸಾದ ಕೇಳುವ ಪದ್ಧತಿಯನ್ನು ಅನುಸರಿಸುತ್ತಿದ್ದರು. ಇದು ಎರಡು ಕುಟುಂಬಗಳ ನಡುವೆ ಕಹಿ ಭಾವನೆಯನ್ನು ಸೃಷ್ಟಿಸುವುದಿಲ್ಲ. ಅಲ್ಲದೆ ವಾದಿ-ಪ್ರತಿವಾದಿಗಳಿಗೆ ಆರ್ಥಿಕ ಹೊರೆಯನ್ನೂ ಉಂಟುಮಾಡುವುದಿಲ್ಲ. ಸಂಬಂಧಗಳೂ ಶಿಥಿಲವಾಗುವುದಿಲ್ಲ. ಇಂದು ಪರಿಸ್ಥಿತಿ ಬದಲಾಗಿದೆ. ಆದ್ದರಿಂದ ಸಾಮಾನ್ಯ ಸಮಸ್ಯೆಗಳಿಗೆ ಕಾನೂನಿನಲ್ಲಿ ಏನು ಪರಿಹಾರ ಇದೆ ಎಂದು ಓದಿ ತಿಳಿಯುವುದೂ ಅನಿವಾರ್ಯವಾಗಿದೆ. ವನಿತಾ ರಾಮಚಂದ್ರ ಕಾಮತ್