Advertisement

ಹೊಸ ವರ್ಷದ ಶುಭಾಶಯಗಳು: 2023 ಭರತ ವರ್ಷವಾಗಲಿ

01:00 AM Jan 01, 2023 | Team Udayavani |

2022ರ ಮಗ್ಗಲು ಬದಲಿಸಿ 2023ರ ಮಡಿಲಿಗೆ ಬಂದು ಸೇರಿದ್ದೇವೆ. ವರ್ಷವಿಡೀ ತಣ್ಣಗಿದ್ದ ಕೊರೊನಾ ವರ್ಷಾಂತ್ಯದ ವೇಳೆಗೆ ಅಲ್ಪ ಭೀತಿ ಹುಟ್ಟಿಸಿದ್ದು ಸುಳ್ಳಲ್ಲ. ಆದರೂ ಭಾರತದಲ್ಲಿ ಅಷ್ಟೇನೂ ಅಪಾಯವಿಲ್ಲ ಎಂಬ ತಜ್ಞರ ಸಮಾಧಾನದ ಮಾತು ನಿಟ್ಟುಸಿರು ಬಿಡುವಂತೆ ಮಾಡಿತು. ಈಗ 2022ರ ಕಹಿನೆನಪುಗಳನ್ನು ಮರೆತು 2023ರ ಹೊಂಗನಸನ್ನು ಕಾಣುತ್ತ ಹೆಜ್ಜೆ ಇರಿಸೋಣ.

Advertisement

ಇಡೀ ಜಗತ್ತು ಒಂದಲ್ಲ ಒಂದು ಕಾರಣಕ್ಕಾಗಿ ಅಸ್ಥಿರತೆಯನ್ನೇ ಹೊದ್ದುಕೊಂಡಿರುವಾಗ ಭಾರತ ಎಲ್ಲರ ಆಶಾಕಿರಣವಾಗಿ ಹೊಮ್ಮುತ್ತಿರುವುದು ಹೆಮ್ಮೆಯ ಸಂಗತಿ. 2023ರಲ್ಲಿ ದೇಶ ಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನು ಬೀರಿ ತನ್ನ ಪತಾಕೆಯನ್ನು ಜಗದಗಲ ಪಟಪಟಿಸುತ್ತದೆ ಎಂಬುದು ನಿರೀಕ್ಷೆ. ಅರ್ಥ ಜಗತ್ತು, ಕ್ರೀಡಾ ವಿಚಾರ ಹಾಗೂ ರಾಜ ತಾಂತ್ರಿಕತೆಯ ವಿಷಯ ಬಂದಾಗ ಭಾರತ ತನ್ನ ಗಟ್ಟಿತನವನ್ನು ಮತ್ತಷ್ಟು ಪ್ರಖರಗೊಳಿಸು ತ್ತದೆ ಎಂಬ ಕಾತರ ನಮ್ಮದು.

ಜಿ20 ದೇಶಗಳ ನಾಯಕತ್ವವನ್ನು ವಹಿಸಿರುವ ನಮ್ಮ ಮುಂದೆ ಜಾಗತಿಕ ನಾಯಕತ್ವದ ಸವಾಲುಗಳು ಇವೆ. ಈಗಾಗಲೇ ಜಾಗತಿಕ ರಾಜತಾಂತ್ರಿಕತೆಯಲ್ಲಿ ಸಾಕಷ್ಟು ಮುಂದೆ ಹೋಗಿರುವ ಭಾರತವು ರಷ್ಯಾ- ಉಕ್ರೇನ್‌ ಯುದ್ಧದ ಸಂದರ್ಭದಲ್ಲಿ ಚಾತುರ್ಯವನ್ನು ಪ್ರದರ್ಶಿಸಿತ್ತು. ಅಮೆರಿಕ, ಯುನೈಟೆಡ್‌ ಕಿಂಗ್‌ಡಮ್‌ ಹಾಗೂ ಐರೋಪ್ಯ ದೇಶಗಳೂ ಭಾರತದ ರಾಜತಾಂತ್ರಿಕತೆಗೆ ಮಾರು ಹೋಗಿವೆ. ಪ್ರಧಾನಿ ಮೋದಿ ಅವರ “ಇದು ಯುದ್ಧದ ಕಾಲವಲ್ಲ’ ಎಂಬ ಘೋಷವಾಕ್ಯ ಜಾಗತಿಕ ಮನ್ನಣೆ ಪಡೆದಿದ್ದು, ಈ ವರ್ಷ ಉಕ್ರೇನ್‌ -ರಷ್ಯಾ ಯುದ್ಧ ನಿಲ್ಲಿಸಿದರೆ ಭಾರತದ ಹೆಸರು ಅಜರಾಮರವಾಗುತ್ತದೆ. ದಕ್ಷಿಣ ಏಷ್ಯಾದಲ್ಲಿ ಬಹುತೇಕ ರಾಷ್ಟ್ರಗಳು ಆರ್ಥಿಕ ಸಂಕಷ್ಟದಿಂದ ನರಳುತ್ತಿವೆ. ಇದರಿಂದಾಗಿ ಈ ದೇಶಗಳಲ್ಲಿ ಆಂತರಿಕ ಘರ್ಷಣೆಗಳೂ ಉಂಟಾಗುವ ಸಾಧ್ಯತೆಗಳು ಕೂಡ ಇವೆ. ಭಾರತ ಈ ಭಾಗದಲ್ಲಿ ತನ್ನ ಪ್ರಾಬಲ್ಯ ಮತ್ತು ಔದಾರ್ಯ ಪ್ರದರ್ಶಿಸಲು ಇದು ಸಕಾಲ.

ವಿಶ್ವಸಂಸ್ಥೆಯ ಭದ್ರತ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕಾಗಿ ಕಾತರಿಸುತ್ತಿರುವ ದೇಶ ಈ ವರ್ಷ ಹೊಸ ಮೆಟ್ಟಿಲನ್ನೇರಲಿ ಮತ್ತು ಜಿ7 ದೇಶಗಳ ಗುಂಪಿಗೆ ಭಾರತವೂ ಸೇರ್ಪಡೆಯಾಗಲಿ ಎಂಬುದು 2023ರ ಮೇಲೆ ಎಲ್ಲರೂ ಇಟ್ಟಿರುವ ಭರವಸೆ. ಕೋವಿಡ್‌ ಕಾಲದಲ್ಲಿ ತನ್ನ ಸಾಮರ್ಥ್ಯ ತೋರಿರುವ ಭಾರತ ದುರಿತ ಕಾಲದಲ್ಲಿ ರಷ್ಯಾ-ಅಮೆರಿಕದ ಜತೆ ಬಾಂಧವ್ಯದ ಸಮತೋಲನ ಸಾಧಿಸಿರುವುದು ಮತ್ತು ಚೀನಕ್ಕೆ ಸೆಡ್ಡು ಹೊಡೆದಿರುವುದು ಮಹತ್ವದ ಬೆಳವಣಿಗೆಗಳು.

ಈಗಾಗಲೇ ಕ್ರೀಡಾ ಲೋಕದಲ್ಲಿ ಭರವಸೆಯ ಬೆಳಕನ್ನು ಬೀರಲಾರಂಭಿಸಿರುವ ದೇಶ ಈ ಕ್ಷೇತ್ರದಲ್ಲಿ ಮತ್ತಷ್ಟು ಹೊಸ ಹೆಜ್ಜೆಗಳನ್ನು ಇಡಬೇಕಿದೆ. ಇದೇ ವರ್ಷ ಕ್ರಿಕೆಟ್‌ ಏಕದಿನ ವಿಶ್ವಕಪ್‌ ಭಾರತದಲ್ಲೇ ನಡೆಯುತ್ತಿರುವುದು ಸಂಭ್ರಮದ ವಿಷಯ.

Advertisement

ಆರ್ಥಿಕ ವಿಚಾರದಲ್ಲಿ ಮಾತ್ರ 2023 ತೀರಾ ಎಚ್ಚರಿಕೆಯಿಂದಲೇ ಇರಬೇಕಾದ ವರ್ಷ. 2022ರಲ್ಲೇ ಆರಂಭವಾಗಿರುವ ಅಮೆರಿಕ ಸೇರಿದಂತೆ ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಮಹಾಕುಸಿತ ಪ್ರಕ್ರಿಯೆ 2023ರಲ್ಲಿ ವಿಸ್ತರಣೆಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಈಗಾಗಲೇ ಈ ಬಿಸಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ತಗಲಿದೆ. ಆದರೆ ಇದು ಭಾರತಕ್ಕೆ ತಟ್ಟುವ ಸಾಧ್ಯತೆಗಳು ಕಡಿಮೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ಈ ಆಶಯ ನಿಜವಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next