Advertisement

ಹ್ಯಾಪಿ ಲವಿಂಗ್‌ ಹ್ಯಾಪಿ ಲಿವಿಂಗ್‌ ಕ್ಯಾಂಪಸ್ಸಲ್ಲಿರೋರಿಗೆ ಕಿವಿಮಾತು

03:45 AM Jan 31, 2017 | Team Udayavani |

ಇವತ್ತಿನ ಬಹುತೇಕ ಪ್ರೇಮಕತೆಗಳು ಸೋಲುತ್ತವೆ. ಬರೀ ಪ್ರೇಮಿಗಳ ಕುರಿತೇ ಮಾತನಾಡುತ್ತಿದ್ದೇನೆ ಅಂತಂದುಕೊಳ್ಳಬೇಡಿ. ಬಹುತೇಕ ಜೋಡಿಗಳು ಮದುವೆಯಾದ ಕೆಲವೇ ವರ್ಷಕ್ಕೆ ಮದುವೆ ಮುರಿದುಕೊಳ್ಳುತ್ತಿದ್ದಾರೆ. ಇವತ್ತಿನ ಕಾಲದ ಮದುವೆಗಳಿಗೆ ದೀರ್ಘಾಯುಷ್ಯವಿಲ್ಲ ಅಂತ ಜನ ಮಾತಾಡಿಕೊಳ್ಳೋ ಥರ ಆಗಿದೆ. ಯಾಕೆ ಹೀಗಾಗ್ತಿದೆ? ಯಾಕೆ ಮದುವೆಗಳು ಸೋಲುತ್ತಿವೆ?

Advertisement

ಈಕ್ಷಣದಲ್ಲಿ ಹಳೇ ಕಾಲದ ದಂಪತಿಗಳು ನೆನಪಾಗುತ್ತಾರೆ. ಪ್ರೇಮಿಗಳು ನೆನಪಾಗುತ್ತಾರೆ. ಇಪ್ಪತ್ತು ಮೂವತ್ತು ವರ್ಷ ಹಿಂದಿನವರ ಪ್ರೇಮಕತೆಗಳು ಯಾಕೆ ಸಕ್ಸಸ್‌ ಆಗುತ್ತಿದ್ದವು? ಅವರೆಲ್ಲಾ ಮದುವೆಯಾಗಿ ಈಗಲೂ ಹೇಗೆ ಸುಖ ಸಂಸಾರ ಸಾಗಿಸುತ್ತಿದ್ದಾರೆ?

ಯೋಚಿಸುತ್ತಾ ಹೋದರೆ ಮಧುರ ಕಾವ್ಯದ ಸಾಲುಗಳು ಅರ್ಥವಾಗುತ್ತಾ ಹೋಗುತ್ತವೆ. ಒಬ್ಬೊಬ್ಬ ಪ್ರೇಮಿಯೂ ಹಲವಾರು ವರ್ಷಗಳ ಕಾಲ ಕಾದಿದ್ದು, ಆಮೇಲೆ ಗಟ್ಟಿ ಮನಸ್ಸು ಮಾಡಿ ಒಂದಾಗುತ್ತಿದ್ದರು. ಜಗಳಗಳಾಗುತ್ತಿದ್ದವು. ಕೆಲವೇ ಸಮಯದಲ್ಲಿ ಜಗಳ ಮರೆತು ಒಂದಾಗುತ್ತಿದ್ದರು. ಪ್ರೀತಿ ಗೆಲ್ಲುತ್ತಿತ್ತು. ಸಹನೆ ನಗುತ್ತಿತ್ತು. 

ಆದರೆ ಈಗ ಮೈಲೇಜ್‌ ಕಮ್ಮಿ. ಹುಡ್ಗರಿಗೆ ದೇವದಾಸ್‌ ಆಗೋ ಹುಚ್ಚು. ಹುಡ್ಗಿಯರಿಗೆ ಇನ್‌ಸೆಕ್ಯುರಿಟಿ ಫೀಲಿಂಗು. ಅದೆರಡರ ನಡುವೆ ಅರೆಜೀವ ಪ್ರೀತಿ. 

ಹೀಗೆ ಹೇಳಿದರೆ ಹೇಗೆ ಮಾರಾಯಾ, ಪ್ರೇಮಿಗಳನ್ನು ಒಂದಾಗಿಸಬಾರದೇ ಅಂತ ಪ್ರೇಮಿಗಳ ಗೆಳೆಯರೆಲ್ಲಾ ಒಕ್ಕೊರಲಿಂದ ಕೇಳಿದರೆ ಪ್ರೀತಿಯಾಣೆ ಬ್ರೇಕಪ್‌ ಆಗದೇ ಇರುವಂತೆ ಮಾಡಬಹುದು. ಪ್ರೀತಿ ಸೋಲದಂತೆ ಕಾಯಬಹುದು. ಮತ್ತೆ ಮತ್ತೆ ಮಳೆಹೊಯ್ಯುವಂತೆ ಮಾಡಬಹುದು. 

Advertisement

ಸೈಕಾಲಾಜಿಸ್ಟ್‌ಗಳು ಕೊಟ್ಟ ಈ ಗೆಲುವಿನ ಮಂತ್ರ ಇರುವುದು ಎರಡೇ ಪದಗಳಲ್ಲಿ. ಅದು ಸ್ಲೋ ಲವ್‌.

ಸ್ಲೋ ಲವ್‌
You cant hurry love
You must have to wait
Love dont come easy
Its game of give and take
ಹಳೆಯದೊಂದು ಸಾಂಗು. ಪ್ರೇಮಿಗಳಿಗೆ, ದಂಪತಿಗಳಿಗೆ ಅಮೃತ ಬಳ್ಳಿ ಕಷಾಯ. ಕೇಳುತ್ತಿದ್ದರೆ ಪ್ರೀತಿ ಸದಾ ನಳನಳಿಸುತ್ತಿರಬೇಕು. ಸೈಕಾಲಜಿಸ್ಟ್‌ಗಳು ಹೇಳಿದ್ದು ಕೂಡ ಇದನ್ನೇ.

ಈಗಿರುವುದು ಹೈ ಸ್ಪೀಡ್‌ ಟೆಕ್ನಾಲಜಿಕಲ್‌ ಲೈಫ‌ು. ಅಲ್ಲಿ ಭಾವುಕತೆ ಕಮ್ಮಿ, ಟೆಕ್ನಿಕಲ್‌ ಫೀಲ್ಡಿಗೆ ಹೆಚ್ಚು ಪ್ರಾಮುಖ್ಯತೆ. ಇಂಥಾ ಜಗತ್ತಲ್ಲಿ ಅಟ್ಯಾಚ್‌ಮೆಂಟ್‌ ಇಲ್ಲವಾಗುತ್ತಿದೆ. ಪ್ರೀತಿ ಸೋಲುತ್ತಿದೆ. ಮತ್ತೆ ಮತ್ತೆ ಸೋಲುತ್ತಿದೆ. ಅದರಿಂದ ಬ್ರೇಕಪ್‌ ಆಗುವುದಷ್ಟೇ ಅಲ್ಲ. ಡಿವೋರ್ಸುಗಳಾಗುತ್ತಿವೆ. ಮದುವೆಗಳು ಮುರಿದು ಬೀಳುತ್ತಿವೆ. ಇವೆಲ್ಲವೂ ಫಾಸ್ಟ್‌ ಲವ್ವು ಮತ್ತು ಟೆಕ್ನಾಲಜಿಕಲ್‌ ಲೈಫಿನ ಬಹುದೊಡ್ಡ ಕೊಡುಗೆ.

ಈ ಅವಸರದಿಂದ ಮಂದಿ ಸಿಕ್ಕಾಪಟ್ಟೆ ಗುಂಡಿ ಅಗೆಯುತ್ತಾರೆ. ಇಲ್ಲಿ ನೀರು ಸಿಗದಿದ್ದರೆ ಮತ್ತೂಂದು. ಅಲ್ಲೂ ಸಿಗದಿದ್ದರೆ ಮಗದೊಂದು. ಒಂದೇ ಕಡೆ ಅಗೆದಿದ್ದರೆ ಬಾವಿಯಾಗುತ್ತಿರಲಿಲ್ಲವೇ? ಸ್ವಲ್ಪ ಲೇಟಾದರೂ ಸರಿಯೇ ನೀರು ಸಿಗುತ್ತಿರಲಿಲ್ಲವೇ?

ನೋವಿನ ವಿಷಯವೆಂದರೆ ಈ ಗುಂಡಿಗಳ ಗುರುತು ಮನಸ್ಸಲ್ಲಿ ಉಳಿಯುತ್ತವೆ. ಜೀವಗಳು ನೋಯುತ್ತವೆ. 

ಹುಡ್ಗನಿಗೆ ಒಂದು ಹುಡ್ಗಿ ಕಂಡ ಕೂಡಲೇ ಕ್ರಶ್‌ ಆಗುತ್ತದೆ. ಯಾವುದೋ ಹುಡ್ಗ ಗ್ಲಾಸ್‌ ಹಾಕ್ಕೊಂಡು ಬಂದು ಕಣ್ಣು ಹೊಡೆದರೆ ಅವನೇ ಜೀವದ ಗೆಳೆಯ ಅನ್ನಿಸುತ್ತದೆ. ಒನ್‌ ಫೈನ್‌ ಸಂಡೇ ಹೊರಗಡೆ ಹೋಗುತ್ತಾರೆ. ಪ್ರೀತಿ ಆಯಿತು ಅಂದುಕೊಳ್ಳುತ್ತಾರೆ. ಒಬ್ಬರು ಇನ್ನೊಬ್ಬರಿಗೆ ಅರ್ಥ ಆಗಿರುವುದಿಲ್ಲ. ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿಯೂ ಇರುವುದಿಲ್ಲ. ಅವಸರ ಅವಸರ ಅವಸರ. ತಿಂಗಳಾಚೆ ಅಥವಾ ವರ್ಷದಾಚೆ ಬ್ರೇಕಪ್‌. ಅದಾಗಿ ತಿಂಗಳುಗಟ್ಲೆ ಅವನು ದೇವದಾಸ್‌, ಅವಳು ಪಾರು. ರಾತ್ರಿ ಹೊತ್ತು ಕಣ್ಣಲ್ಲಿ ನೀರೋ ನೀರು.

ನೀರು ಹಾಕೋ ಟೈಮನ್ನು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ಕೊಟ್ಟುಬಿಡಿ, ಸಿಂಪಲ್‌ ಲೈಫ‌ು ಅಂತ ನಗುತ್ತಲೇ ಹೇಳುತ್ತಿರುವವರು ಸೈಕಾಲಜಿಸ್ಟ್‌ಗಳು. ಸ್ಪೀಡಾಗಿ ಹೋಗುತ್ತಿರುವ ಲವ್‌ ಗಾಡಿಗೆ ಬ್ರೇಕ್‌ ಹಾಕಲು ಅವರು ನಾಲ್ಕೈದು ಪಾಯಿಂಟ್‌ಗಳನ್ನು ಕೊಡುತ್ತಾರೆ.

– ಕೆಲವೇ ದಿನಕ್ಕೆ ಅಥವಾ ಕೆಲವೇ ವಾರಕ್ಕೆ ಇವರೇ ನನ್ನ ಗರ್ಲ್ಫ್ರೆಂಡು ಅಥವಾ ಬಾಯ್‌ಫ್ರೆಂಡ್‌ ಅಂತಂದುಕೊಳ್ಳಬೇಡಿ.

– ದಿನಕ್ಕೆ ಹಲವಾರು ಬಾರಿ ಪದೇ ಪದೇ ಕಾಲ್‌ ಮಾಡಬೇಡಿ.

– ಜೊತೆಯಾದ ತಕ್ಷಣ ಫ್ರೆಂಡುಗಳನ್ನು ದೂರ ಮಾಡಬೇಡಿ. ಫ್ರೆಂಡ್ಸ್‌ಗಳಿಗೆ ಕೊಡುವ ಟೈಮ್‌ ಕಟ್‌ ಮಾಡಬೇಡಿ.

– ಅರ್ಥವಾಗದೆ, ಅವನು ಅಥವಾ ಅವಳು ನನಗಾಗಿ ಅಂತನ್ನಿಸದೇ ಹೋದರೆ ಯಾವತ್ತೂ ಹತ್ತಿರಾಗಬೇಡಿ.

– ಪ್ರೀತಿ ಅಂತನ್ನಿಸಿದ ಕೂಡಲೇ ಹತ್ತು ವರ್ಷದ ನಂತರ ಏನಾಗಬಹುದು ಅಂತ ಯೋಚಿಸಿ. ಆಗಲೂ ನೀವಿಬ್ಬರೂ ಜೊತೆಗಿರಬಹುದು ಅಂತ ಅನ್ನಿಸಿದರೆ ಮಾತ್ರ ಮುಂದಿನ ಯೋಚನೆ.

–  ನಮ್ಮದು ಭಾವುಕ ಪ್ರೀತಿ. ಪಾಶ್ಚಾತ್ಯರಂತೆ ದೇಹದ ಪ್ರೀತಿಯಲ್ಲ. ಭಾವುಕವಾಗಿ ಒಂದಾಗದೆ ಬೇರೇನೂ ಬೇಡ. 

–  ರೊಮ್ಯಾಂಟಿಕ್‌ ಬಂಧವಿರಲಿ. ಮಳೆ, ಲಾಂಗ್‌ಡ್ರೈವ್‌, ಗೊತ್ತಿಲ್ಲದೂರಿಗೆ ಪಯಣ ಎಲ್ಲವೂ ಪ್ರೀತಿಯನ್ನು ಮತ್ತೆ ಚಿಗುರಿಸುತ್ತದೆ. ಆದರೆ ಅವೆಲ್ಲವೂ ನಿಧಾನಕ್ಕಾಗ್ಲಿ.

– ಮಾತಾಡುವಾಗ ಎಚ್ಚರವಿರಲಿ. ಕೋಪ ಬಂದಾಗ ಎಷ್ಟು ಕಮ್ಮಿ ಮಾತಾಡುತ್ತಿರೋ ಅಷ್ಟು ಒಳ್ಳೇದು.

– ಹ್ಯಾಪ್ಪಿಯಾಗಿರಿ. ಹ್ಯಾಪ್ಪಿಯಾದಾಗ ಜಗತ್ತು ಚೆಂದ ಕಾಣುತ್ತದೆ, ಜಗಳವೂ.

– ಅಡುಗೆ ಮಾಡುವಾಗ ಬೆಂಕಿ ನಿಧಾನಕ್ಕೆ ಉರಿಯಬೇಕು. ಒಂದೇ ಥರ ಬೆಂಕಿ ಉರಿಯುತ್ತಿದ್ದರೆ ಅಡುಗೆ ಚೆನ್ನಾಗಾಗುತ್ತದೆ. ಹಾಲು ಕಾಯಲಿಕ್ಕಿಟ್ಟ ತಕ್ಷಣ ಉಕ್ಕಿ ಬರುವುದಿಲ್ಲ, ತಾಳ್ಮೆಯಿಂದ ಒಲೆ ಮುಂದೆ ನಿಲ್ಲಲೇಬೇಕು. ಅನಂತರ ಕೆನೆಕೆನೆಯಾದ ಸವಿಹಾಲು. ಲವ್ವು ಕೂಡ ಹೀಗೇ ಇರಬೇಕು. ಅವಸರ ಮಾಡಿದರೆ ತಿಂಡಿ ಹಾಳಾಗುತ್ತದೆ. ಲವ್ವಲ್ಲಿ ಅವಸರ ಮಾಡಿದರೆ ಬದುಕು ಹಾಳಾಗುತ್ತದೆ.

– ಸಿದ್ದಾರ್ಥ ನಾರಾಯಣ್‌

Advertisement

Udayavani is now on Telegram. Click here to join our channel and stay updated with the latest news.

Next