ಕಾಸರಗೋಡು: ಅಂದಂದು ದುಡಿದು ವೃದ್ಧ ತಂದೆ ಸಹಿತ ಕುಟುಂಬದ ಹೊಟ್ಟೆ ಹೊರೆಯುತ್ತಿದ್ದ ಯುವಕ…..ಸತ್ತೇ ಹೋದನೆಂದು ಬಗೆದ ಮನೆಮಂದಿ…. ಅದೋ, ಎರಡು ವರ್ಷಗಳ ಬಳಿಕ ಆ ಮಗ ಅನಿರೀಕ್ಷಿತವಾಗಿ ಗುಡಿಸಲನ್ನೇರಿದ್ದಾನೆ. ದೀನ ಕುಟುಂಬಕ್ಕೆ ಆದ ಆನಂದ ವರ್ಣನಾತೀತ. ಇತ್ತ, ದಕ್ಷಿಣ ಭಾರತದಲ್ಲಿರುವ “ಸ್ನೇಹಾಲಯ’ವೆಂಬ ಅಭಯ ಕೇಂದ್ರವು ತಮ್ಮ ಮಗನನ್ನು ಬದುಕಿಸಿ, ಸಾಕಿ – ಸಲಹಿ, ಆತನ ಮನೋ ಕಾಯಿಲೆಯನ್ನು ವಾಸಿಗೊಳಿಸಿ ತಮ್ಮ ಮಡಿಲಿಗೊಪ್ಪಿಸಿರುವ ಕಥೆಯನ್ನರಿತ ವೃದ್ಧ ತಾಯ್ತಂದೆಯರಿಗೆ ಏನು ಹೇಳಬೇಕೋ ತೋಚಲಿಲ್ಲ….. ಇದಕ್ಕಿಂತ ಮೇಲಿನ ಪುಣ್ಯವೇನು, ಕೋಟಿ ನಮನಗಳು ಸ್ನೇಹಾಲಯಕ್ಕೆ ಎಂದು ಆನಂದ ಕಣ್ಣೀರು ಹರಿಸಿದರು.
2019 ರ ಮೇ 29. ಮಂಗಳೂರು ನಗರದ ಪದವಿನಂಗಡಿ ಆಸುಪಾಸಿನಲ್ಲಿ ಪೂರ್ಣ ಹುಚ್ಚನಾಗಿ ತಿರುಗಾಡುತ್ತಾ, ಹೊಟ್ಟೆ ಬೆನ್ನಿಗಂಟಿದ ಸ್ಥಿತಿಯಲ್ಲಿ ಉಪವಾಸ ಮರಣವನ್ನು ಇದಿರು ನೋಡುತ್ತಿದ್ದ ಯುವಕನನ್ನು ಮಂಜೇಶ್ವರ ಸ್ನೇಹಾಲಯದ ಅಭಿಮಾನಿಗಳು ಕಂಡು ಸ್ನೇಹಾಲಯ ಮುಖ್ಯಸ್ಥ ಜೋಸೆಫ್ ಕ್ರಾಸ್ತಾರನ್ನು ಸಂಪರ್ಕಿಸಿ ಅವರ ನಿರ್ದೇಶದಂತೆ ಆ ಮತಿ ವಿಕಲನನ್ನು ಸ್ನೇಹದ ಬೀಡಿಗೆ ಸೇರಿಸುತ್ತಾರೆ. ಆತನಿಗೆ ಉನ್ನತ ಚಿಕಿತ್ಸೆಯ ಅನಿವಾರ್ಯವನ್ನು ಮನಗಂಡ ಸ್ನೇಹಾಲಯ ಮರುದಿನವೇ ಮಂಗಳೂರಿನ ಯೇನಪೊಯ ಆಸ್ಪತ್ರೆಯಲ್ಲಿ ದಾಖಲಿಸಿ, ಒಂದು ತಿಂಗಳ ತಜ್ಞ ಚಿಕಿತ್ಸೆಯನ್ನು ಒದಗಿಸಿದೆ. ಸಹಜಾವಸ್ಥೆಗೆ ಬಂದ ಮೇಲೆ ಅಭಯ ಕೇಂದ್ರಕ್ಕೆ ಮರಳಿಸಿ ಆತನಿಗೆ ಆಶ್ರಯ, ಆರೈಕೆ ನೀಡಿದೆ.
ನಿತ್ಯ ಚಟುವಟಿಕೆಗಳ ಫಲವಾಗಿ ಶೀಘ್ರ ಚೇತರಿಸಿದ ಆತ ಈಗ ಲವಲವಿಕೆಯ ಯುವಕನಾಗುತ್ತಾನೆ. ದುಡಿಮೆಯಲ್ಲಿ ಆತ ಎತ್ತಿದ ಕೈ, ಹಾಗೆ, ಅಲ್ಲಿನ ಕೃಷಿ ತೋಟದಲ್ಲಿ ಕೆಲಸ ಮಾಡುತ್ತಾ ಸಂತೋಷದ ದಿನಗಳನ್ನು ಆಸ್ವಾದಿಸುತ್ತಾನೆ. ಹೀಗಿರಲೊಂದು ದಿನ ಕೇಂದ್ರದ ಮುಖ್ಯಸ್ಥರ ಬಳಿಗೆ ತೆರಳಿ ಊರಿಗೆ ತೆರಳುವ ಬಯಕೆ ವ್ಯಕ್ತಪಡಿಸುತ್ತಾನೆ. ತನ್ನ ಹೆಸರು ಸೋಮನಾಥ ಸಿಂಗ್ ಎಂದೂ ಒರಿಸ್ಸಾದ ಬಾಳೇಶ್ವರ ಜಿಲ್ಲೆಯಲ್ಲಿ ಮನೆಯಿರುವುದಾಗಿಯೂ ತಿಳಿಸುತ್ತಾನೆ.
ಆತನು ಸಂಪೂರ್ಣ ಆರೋಗ್ಯವಂತನಾಗಿರುವುದನ್ನು ಗುರುತಿಸಿದ ಸ್ನೇಹಾಲಯವು ಕಳೆದ ವಾರ ಸೋಮನಾಥ ಸಿಂಗ್‌ನನ್ನು ಮುಂಬಯಿಯಿ ಶ್ರದ್ಧಾ ಪುನಶ್ಚೇತನ ಕೇಂದ್ರಕ್ಕೆ ಕಳುಹಿಸಿ ಅವರ ಮೂಲಕ ಆತನ ವಿಳಾಸ ಪತ್ತೆ ಹಚ್ಚಿ ಬಾಳೇಶ್ವರ ಜಿಲ್ಲೆಯ ಮಾಹೇಶ³ಥ ತಾಲೂಕು ಕಾತಕೊಚ್ಚಿ ಗ್ರಾಮದಲ್ಲಿರುವ ಆತನ ಮನೆಗೆ ಸುರಕ್ಷಿತವಾಗಿ ತಲುಪಿಸುತ್ತಾರೆ. ಆ ಮನೆಯ ಸ್ಥಿತಿ ಶೋಚನೀಯ ಎನ್ನುತ್ತಾರೆ ಶ್ರದ್ಧಾ ಕಾರ್ಯಕರ್ತರು. ಕುರುಚಲು ಗುಡಿಸಲು ಅವರದ್ದಾಗಿತ್ತು. ದೂರವಾಣಿ ಸಂಪರ್ಕ ಯಾ ಮೊಬೈಲ್ ಅವರಿಗೆ ಇಲ್ಲವಾಗಿತ್ತು. ವಿದ್ಯುತ್ ಸಂಪರ್ಕ ಇಲ್ಲ, ಪಾಯಿಖಾನೆ ಕೂಡಾ ಇಲ್ಲದ ದಯನೀಯತೆ. ಈ ಕುಟುಂಬದ ಏಕೈಕ ಆಸರೆಯಾಗಿದ್ದ ಸೋಮನಾಥ. ದಿನಕೂಲಿ ಕಾರ್ಮಿಕ. ಎರಡು ವರ್ಷಗಳ ಹಿಂದೆ ಕೆಲಸ ಅರಸಿ ತೆರಳಿದಾತ ಬಳಿಕ ಮನೆ ಸೇರಿದ್ದು ಈಗ. ಮನೆ ಮಂದಿ ಹುಡುಕಾಡದ ಸ್ಥಳವಿರಲಿಲ್ಲ. ದೂರದ ನಿರೀಕ್ಷೆಯನ್ನೂ ಕೈಬಿಟ್ಟಿದ್ದರು. ಆದರೆ, ದೇವರು ಈ ಕುಟುಂಬದ ಕೈ ಬಿಟ್ಟಿರಲಿಲ್ಲ. ಸ್ನೇಹಾಲಯದ ಪುಣ್ಯಕಾರ್ಯದಿಂದ ಹಾಗೆ ಮತ್ತೂಂದು ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.