ಹೆತ್ತ ತಾಯಿಯನ್ನು ಕಂಡೊಡನೆ ಪ್ರಯಾಣದ ಆಯಾಸವೆಲ್ಲ ಪರಾರಿ. ಮನಸ್ಸಿನದು ಅಂಬೆ ಕರುವಿನ ಸ್ಥಿತಿ! ಆಕೆಯ ನೇವರಿಕೆಯ ಸ್ಪರ್ಶ, ಆ ಸುಖ… ಸ್ವರ್ಗ. ಒಳಗದುಮಿಟ್ಟ ದುಗುಡ ದುಮ್ಮಾನಗಳಿಗೆ ಹೊರಗಿಂಡಿಯಾಗುತ್ತಾಳೆ ತಾಯಿ. ಅವಳ ಅಭಯ, ಅನುಭವೀ ಸಲಹೆಗಳು ತುಂಬುತ್ತವೆ ಹೊಸ ಶಕ್ತಿ. ಆಕೆಯ ಅಕ್ಕರೆಯ ಆರೈಕೆಯಲ್ಲಿ ಮುಂದೆ ಕಳೆಯುವ ಒಂದೊಂದು ದಿನವೂ ಚೇತೋಹಾರಿ.
Advertisement
ಇದು ತನುಮನಗಳಿಗೆ ಸಿಗುವ ಸುಖಚಿಕಿತ್ಸೆಯಲ್ಲದೆ ಮತ್ತೇನು? ಹೌದು. ಮಗಳನ್ನು ತವರಿಗೆ ಆಹ್ವಾನಿಸುವ ಆಷಾಢ (ಆಟಿ, ಕರ್ಕಟ) ದ ಸಂಪ್ರದಾಯದ ಹಿಂದೆ ಒಂದು ಸದುದ್ದೇಶವಿದೆ, ವಿಜ್ಞಾನವಿದೆ ಅನಿಸುತ್ತಿಲ್ಲವೆ?
ಪಂಚಭೂತಗಳಿಂದ ಸೃಷ್ಟಿಯಾದ ಮಾನವ ಶರೀರವು ವಾತ, ಪಿತ್ತ, ಕಫಗಳೆಂಬ ತ್ರಿದೋಷಗಳಿಂದ ಕೂಡಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಶರೀರ ಗುಣಧರ್ಮವೂ ಭಿನ್ನವಾಗಿರುವಂತೆ, ತ್ರಿದೋಷಗಳ ಮಟ್ಟವೂ ಭಿನ್ನವಾಗಿರುತ್ತದೆ. ಬೇಸಿಗೆಯ ಕಾಲದಲ್ಲಿ ಶರೀರದಲ್ಲಿ ಸಂಗ್ರಹವಾಗುವ ಈ ತ್ರಿದೋಷಗಳು, ಮಳೆಗಾಲದಲ್ಲಿ ಎಗ್ಗಿಲ್ಲದೆ ವೃದ್ಧಿಸುತ್ತದೆ. ಈ ಪರಿಣಾಮವಾಗಿ ಶರೀರದಲ್ಲಿ ಅನೇಕ ರೀತಿಯ ಭಾದೆಗಳು ಕಂಡುಬರುತ್ತವೆ. ಇಂತಹ ದೋಷಗಳನ್ನು ಆಯುರ್ವೇದದ ಶೋಧನ, ರಸಾಯನ, ಪಂಚಕರ್ಮ ಮುಂತಾದ ವಿವಿಧ ಚಿಕಿತ್ಸಾ ಕ್ರಮಗಳಿಂದ ನಿವಾರಿಸಬಹುದಾಗಿದೆ. ಕೇರಳದ ಕರ್ಕಟ ಮಾಸ ಆಚರಣೆಯ ಮೂಲ ಉದ್ದೇಶವೂ ಅದೇ .
Related Articles
ಜುಲೈ ತಿಂಗಳ ಮಧ್ಯದಿಂದ ಆಗಸ್ಟ್ ತಿಂಗಳ ಮಧ್ಯಭಾಗದವರೆಗೆ ಕರ್ಕಟ ಮಾಸ ಎನಿಸುತ್ತದೆ. (ಈ ವರ್ಷ ಜುಲೈ 17 ರಿಂದ ಆಗಸ್ಟ್ 17) ಇದು ಮಳೆ ಅತ್ಯಂತ ಗಾಢವಾಗಿರುವ ಕಾಲ.
Advertisement
ಆಯುರ್ವೇದ ಪದ್ಧತಿಯು ಚಿಕಿತ್ಸೆಯ ಜತೆಗೆ ಪಥ್ಯಕ್ಕೂ ಪ್ರಾಮುಖ್ಯ ನೀಡುತ್ತದೆ. ಕರ್ಕಟ ಮಾಸವೆಂದರೆ ಜಡಿಮಳೆಯ ಕಾಲವಾದ್ದರಿಂದ ನಾವು ಸೇವಿಸಿದ ಆಹಾರವು ಜೀರ್ಣವಾಗದೆ ಹೊಟ್ಟೆಯಲ್ಲೆ ಉಳಿದು ಹುಳಿಯುವ ಸಾಧ್ಯತೆ ಹೆಚ್ಚು. ಈ ಸ್ಥಿತಿ ಕ್ರಮೇಣ ಅಸಿಡಿಟಿ ತೊಂದರೆ ತರುವುದು. ಹೀಗಾಗಿ ಆಯುರ್ವೇದವು ಈ ಋತುವಿನಲ್ಲಿ ಹುಳಿ ಪದಾರ್ಥಗಳ ಸೇವನೆಯನ್ನು ಕಡಿತಗೊಳಿಸುವಂತೆ ಸೂಚಿಸುತ್ತದೆ. ಸುಲಭವಾಗಿ ಜೀರ್ಣವಾಗುವ ಲಘು ಆಹಾರ ಅಪೇಕ್ಷಣೀಯ. ಪ್ರತಿವ್ಯಕ್ತಿಯ ತ್ರಿದೋಷ ಮಟ್ಟ ಭಿನ್ನವಾಗಿರುವುದರಿಂದ ಪಥ್ಯದಲ್ಲೂ ವ್ಯತಾಸವಿರುವುದು. ವ್ಯಕ್ತಿಯ ತ್ರಿದೋಷ ಮಟ್ಟವನ್ನು ಆಯುರ್ವೇದ ತಜ್ಞ ವೈದ್ಯರಷ್ಟೇ ಗುರುತಿಸಬಲ್ಲರು.
ಕೇರಳದ ಜನ ಕರ್ಕಟ ಮಾಸದಲ್ಲಿ ಔಷಧೀಯ ಗಂಜಿಯನ್ನು ಸೇವಿಸುವುದರ ಉದ್ದೇಶವೂ ತ್ರಿದೋಷಗಳ ನಿಗ್ರಹ ಮತ್ತು ಆರೋಗ್ಯ ವರ್ಧನೆಯೇ ಆಗಿದೆ. ನವರಕ್ಕಿಳಿ ಎಂಬ ಒಂದು ವಿಶಿಷ್ಟ ಅಕ್ಕಿಯನ್ನು ಕೇರಳಿಗರು ಇದಕ್ಕಾಗಿಯೇ ಬೆಳೆಯುತ್ತಾರೆ. ಪೌಷ್ಠಿಕಾಂಶಗಳಿಂದ ಶ್ರೀಮಂತವಾಗಿರುವ ಈ ತಳಿಯು ಅಕ್ಕಿಗಳ ರಾಜ ಎನಿಸಿದೆ. ಈ ಅಕ್ಕಿಯನ್ನು ಬೇಯಿಸಿ, ಕೆಲವು ಗಿಡಮೂಲಿಕೆಗಳ ಪುಡಿಯನ್ನು ಬೆರೆಸಿ ತಯಾರಿಸುವ ಗಂಜಿ (ಕಂಜಿ) ಯನ್ನು ಸೇವಿಸುವುದು ಕರ್ಕಟ ಮಾಸ ಆಚರಣೆಯ ಒಂದು ಮುಖ್ಯ ಭಾಗ ಎನಿಸಿದೆ. ಇದನ್ನು ಸೇವಿಸುವುದರಿಂದ ಬಲವರ್ಧನೆ, ಒತ್ತಡ ನಿವಾರಣೆ, ಶರೀರದ ತೂಕದ ನಿರ್ವಹಣೆ, ತ್ವಚೆಗೆ ಕಾಂತಿ, ಜೀರ್ಣಕ್ರಿಯೆ, ರೋಗನಿರೋಧಶಕ್ತಿ ಹೆಚ್ಚುವುದು. ಶರೀರವನ್ನು ಪುನಶ್ಚೇತನಗೊಳಿಸುವುದು.
ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ತಯಾರಿಸುವ ವಿವಿಧ ಪುಡಿಗಳು ಮಾರಾಟಕ್ಕೆ ದೊರೆಯುವಂತೆ, ಮೈಸೂರು ಬೆಂಗಳೂರುಗಳಲ್ಲಿ ಸಂಕ್ರಾಂತಿಗೆ ಬೀರುವ ಎಳ್ಳು ಸಾಮಗ್ರಿಗಳು ದೊರೆಯುವಂತೆ, ಕೇರಳದಲ್ಲಿ ಕರ್ಕಟ ನವರಕ್ಕಿ ಕಂಜಿ ಮಿಕ… ದೊರೆಯುತ್ತದೆ !
ಶರೀರ ಶುದ್ಧಿ , ಅಭ್ಯಂಗ, ನವರಕ್ಕಿಳಿ, ಪಿಳಿಚ್ಚಿಲ…, ತಲಂ (ತಲೆಗೆ ಹಾಕುವ ವಿವಿಧ ಲೇಪಗಳು) ಮುಂತಾದವು ಕರ್ಕಟ ಚಿಕಿತ್ಸೆಯ ವೈಶಿಷ್ಟ್ಯ. ಇದನ್ನು ಸುಖಚಿಕಿತ್ಸೆ ಎಂತಲೂ ಕರೆಯುತ್ತಾರೆ.
ಕೇರಳಿಗರ ಈ ವಾರ್ಷಿಕ ಚಿಕಿತ್ಸೆಯು ಈಗ ಆ ರಾಜ್ಯದ ಪರಿಧಿಯನ್ನು ಮೀರಿ, ಬೆಂಗಳೂರನ್ನೂ ಸೇರಿದಂತೆ, ದೇಶದ ಪ್ರಮುಖನಗರಗಳ ಆಸ್ಪತ್ರೆಗಳನ್ನು ಆವರಿಸಿಕೊಂಡು, ಇದೀಗ ವಿದೇಶಗಳಲ್ಲಿರುವ ಆಯುರ್ವೇದ ಆಸ್ಪತ್ರೆಗಳಿಗೂ ಲಗ್ಗೆ ಇಟ್ಟಿದೆ!
ದಿನಕ್ಕೊಂದು ಸೇಬು ವೈದ್ಯರನ್ನು ದೂರವಿರಿಸುವ ಭರವಸೆ ಇಲ್ಲ. ಏಕೆಂದರೆ ವಿಷಪೂರಿತ ಸಿಂಪಡಣೆಯನ್ನೆ ಹೀರಿ ಬೆಳೆದ ಸೇಬು ಅದು! ಆದರೆ, ವರ್ಷಕ್ಕೊಮ್ಮೆ ಪಡೆಯಬಹುದಾದ ಇಂಥ ಸುಖ ಚಿಕಿತ್ಸೆಯಿಂದ ನಿಮ್ಮ ಆರೋಗ್ಯ ವೃದ್ಧಿಸುವುದಂತೂ ದಿಟ!
ಆಷಾಢ ಮಾಸ ಬಂದಿತವ್ವ… ಆರೋಗ್ಯದ ಖಾಸಾ ಖಯಾಲಿ ಇರಲವ್ವ !
– ಮನೋರಮಾ ಹೆಜಮಾಡಿ