Advertisement

ಕೂಡಿ ಕೊಟ್ಟರೆ ಸ್ವರ್ಗ ಸುಖ

03:32 PM May 05, 2020 | mahesh |

ಲಾಕ್‌ಡೌನ್‌ ಶುರುವಾದ ಮೇಲೆ, ಜಗತ್ತೇ ಸೇವೆಯಲ್ಲಿ ತೊಡಗಿಕೊಂಡಿತು. ಆಹಾರ ಧಾನ್ಯಗಳನ್ನು ಅಂಗಡಿಯಿಂದ ತಂದು ಎಲ್ಲರಿಗೂ ತಲುಪಿಸುವ ಸಂಘಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಕೆಂಗೇರಿಯ ಸುಶೀಲ್‌ ಸಾಗರ್‌ ಕೂಡ ಸುಮ್ಮನೆ ಕೂರಲಿಲ್ಲ. ಗೆಳೆಯರಾದ ಸುಂದರ್‌,  ಶ್ರೀನಿವಾಸ್‌ ಅವರನ್ನು ಜೊತೆಮಾಡಿಕೊಂಡು, ದಿನಕ್ಕೆ 50 ಜನಕ್ಕಾದರೂ ಸಹಾಯ ಮಾಡೋಣ ಅಂತ ಸೇವೆ ಶುರುಮಾಡಿದರು.

Advertisement

ಬೆಂಗಳೂರಿನ ಕತ್ರಿಗುಪ್ಪೆ, ಕೆಂಗೇರಿಯ ಕೊಮ್ಮಘಟ್ಟ, ಅರ್ಚಕರ ಹಳ್ಳಿ ಸೇರಿದಂತೆ ಕೆಲವು ಪ್ರದೇಶದಲ್ಲಿ, ಕೈಯಿಂದ ಹಣ ಹಾಕಿ, ಯಾರಿಗೆ ಬಿಪಿಎಲ್‌ ಕಾರ್ಡ್‌ ಇಲ್ಲವೋ ಅಂಥವರನ್ನು ಗುರುತಿಸಿ ಕೊಡುತ್ತಿದ್ದರು. ಇವರ ಸೇವೆಯ ವಿವರ ಸೋಷಿಯಲ್‌ ಮೀಡಿಯಾದಲ್ಲಿ ಬಂತು. ಒಂದಷ್ಟು ಜನ ಕರೆ ಮಾಡಿ- “ನಮಗೂ ಸಹಾಯ ಮಾಡುವ ಆಸೆ ಇದೆ. ಆದರೆ, ನಾವು ಬರೋಕೆ ಆಗೋಲ್ಲ. ಹಣ ತಗೊಳ್ಳಿ’ ಅಂತ ಕೊಟ್ಟರು. ಇನ್ನೊಂದಷ್ಟು ಸಾಫ್ಟ್ ವೇರ್‌ ಎಂಜಿನಿಯರ್‌ಗಳು, ನಾವು ನಿಮ್ಮ ಜೊತೆ ಕೈ ಜೋಡಿಸುತ್ತೇವೆ ಅಂತ ಮುಂದೆ ಬಂದರು. ಈಗ ಇವರ ಸಂಖ್ಯೆ 15 ದಾಟಿದೆ.

ಈವರೆಗೆ, ಸುಶೀಲ್‌ ಜೊತೆಗಿನ ಮೂವರು ಗೆಳೆಯರೇ ಮೂರು ಲಕ್ಷ ರೂ. ತನಕ ದಿನಸಿಯನ್ನು ಒದಗಿಸಿದ್ದಾರೆ. ಒಂದು ಹಂತದಲ್ಲಿ ಹಣ ಬೇಕಾದಾಗ, ಯಾರನ್ನೂ ಕೇಳಲಿಲ್ಲ. ವಿದೇಶದಲ್ಲಿರುವ ಗೆಳೆಯರು, ಸಂಬಂಧಿಕರು- “ಒಳ್ಳೆ ಸೇವೆ ಮಾಡ್ತಾ ಇದ್ದೀರ, ತಗೊಳ್ಳಿ’ ಅಂತ ಕೊಟ್ಟ ಹಣ ಬಳಸಿದರು. ಇತ್ತ ಕಡೆ ಸಾಫ್ಟ್ ವೇರಿಗಳು, ಒಂದಷ್ಟು ಗೆಳೆಯರನ್ನು ಸಂಪರ್ಕಿಸಿದರು. ಅವರೂ ಒಂದಷ್ಟು ಹಣ ಕೊಟ್ಟರು. ಹೀಗೇ, ಈ ಸೇವಾ ಯೋಜನೆ ಮುಂದುವರಿಯಿತು.

ಈವರೆಗೆ ಈ ತಂಡ, ಎರಡು ಸಾವಿರಕ್ಕೂ ಹೆಚ್ಚು ಜನಕ್ಕೆ ದಿನಸಿ ಪದಾರ್ಥಗಳನ್ನು ತಲುಪಿಸಿದೆ. ವಿಶೇಷ ಎಂದರೆ, ಈ ತಂಡವನ್ನು ಎರಡು ಭಾಗ ಮಾಡಿದ್ದಾರೆ. ಒಂದು ತಂಡ,
ಪ್ಯಾಕಿಂಗ್‌ ಮಾಡುತ್ತದೆ. ಇನ್ನೊಂದು ತಂಡ ಅದನ್ನು ವಿತರಿಸುತ್ತದೆ. ಎಲ್ಲರಿಗೂ ವರ್ಕ್‌ ಫ್ರಂ ಹೋಮ್‌ ಇದೆ. ಹೀಗಾಗಿ, ಸೇವೆ ಅವರ ಸಮಯನ್ನು ಹಾಳು ಮಾಡಬಾರದು ಅಲ್ವಾ, ಹಾಗಾಗಿ, ತಂಡ ಮಾಡಿದ್ದೇವೆ. ಅವರವರ ಕೆಲಸ ಮುಗಿಸಿ, ತಮ್ಮ ಆಫೀಸ್‌ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ ಅಂತಾರೆ ಸುಶೀಲ್‌

ಇನ್ನೊಂದು ವಿಶೇಷ ಅಂದರೆ, ಸುಶೀಲ್‌ ಅವರ ಮನೆಯ ಮೇಲಿರುವ ರೂಮಿನಲ್ಲಿ ನಾಲ್ಕು ಜನ ಸೇವಾಕರ್ತರು ಬೀಡು ಬಿಟ್ಟಿದ್ದಾರೆ. ಬೆಳಗ್ಗೆ ಆಫೀಸ್‌ ಕೆಲಸ ಮುಗಿಸಿ, ಆ ನಂತರ ಈ
ಸೇವೆಯಲ್ಲಿ ನಿರತರಾಗುತ್ತಾರಂತೆ. ಅದೇ ರೀತಿ, ಕೆಂಗೇರಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ, ಇನ್ನೊಂದಷ್ಟು ಸಾಫ್ಟ್ವೇರ್‌ ಹುಡುಗರ ಗುಂಪಿದೆ. ಅವರು ಕೂಡ ಕೆಲಸಗಳನ್ನು
ಮುಗಿಸಿ, ಇತ್ತ ಸುಶೀಲ್‌ ಮನೆಯಿಂದಲೇ ಸೇವೆ ಶುರುಮಾಡಲು ಒಟ್ಟುಗೂಡುತ್ತಾರೆ. ಸುಶೀಲ್‌ ಅವರ ತಂಡ, ಪ್ರತಿದಿನವೂ ಸೇವೆಗೆ ಕೈ ಹಾಕೋಲ್ಲ. ಒಂದು ದಿನ ಪ್ಯಾಕಿಂಗ್‌, ಇನ್ನೊಂದು ದಿನ ವಿತರಣೆ. ಹೀಗೆ ಪ್ಲಾನ್‌ ಮಾಡಿಕೊಂಡಿದೆ. ಹೀಗಾಗಿ, ಎರಡು ದಿನಕ್ಕೆ ಒಂದು ಬಾರಿ ಫಿಲ್ಡಿಗೆ ಇಳಿಯುತ್ತಿದೆ. ಒಂದು ಸಲಕ್ಕೆ 200-300 ದಿನಸಿ ಚೀಲಗಳನ್ನು ಹಂಚಿಬರುತ್ತಾರೆ. “ಸಾರ್‌, ಪ್ರತಿದಿನ 200 ಕ್ಕೂ ಹೆಚ್ಚು ಕರೆ ಬರುತ್ತವೆ. ದೂರ ಆದರೆ, ಆಯಾ ಪ್ರದೇಶದಲ್ಲಿರುವ ಗೆಳೆಯರ ನಂಬರ್‌ ಕೊಡ್ತೇವೆ. ಸೇವೆ ಅಗತ್ಯವಿದೆಯೇ ಅನ್ನೋದನ್ನು ಖಚಿತಪಡಿಸಿಕೊಂಡು, ಪಟ್ಟಿ ತಯಾರಿಸಿಕೊಂಡೇ ನೆರವು ನೀಡುವುದು.

Advertisement

ಎಷ್ಟೋ ಸಲ ನೂರು ಜನಕ್ಕೆ ಹಂಚಿರುತ್ತೇವೆ. 101ನೇ ಅವರಿಗೆ ಸಿಗೋಲ್ಲ. ಅವರೆಲ್ಲ ಹೊಗಳುತ್ತಿದ್ದರೆ, ಸಿಗದೇ ಇರುವ ಒಬ್ಬ ಮಾತ್ರ ನಮ್ಮನ್ನು ಬಾಯಿಗೆ ಬಂದಂಗೆ ಬೈತಾ ಇರ್ತಾನೆ. ಏನು ಮಾಡೋದು?’ ಅಂತಾರೆ ಸುಶೀಲ್ ಒಟ್ಟಾರೆ, ಸೇವೆ ಮಾಡುವುದರಲ್ಲಿ ಸುಖವಿದೆ ಅಂತ ಸುಶೀಲ್‌ ತಂಡ ತಿಳಿದುಕೊಂಡು ಮುನ್ನಡೆಯುತ್ತಿದೆ.

ಕೆ.ಜಿ.

Advertisement

Udayavani is now on Telegram. Click here to join our channel and stay updated with the latest news.

Next