ವರ್ಷದ ಮೊದಲ ಮಳೆ ಬಂದ ಬಳಿಕ ಮಣ್ಣಿನ ಪರಿಮಳವೇ ಚೆಂದ. ಅದರಲ್ಲೇನೂ ಆನಂದ ಹೇಳಲಾಗದ ಅನುಬಂಧ. ಮೊದಲೆಲ್ಲ ಜೂನ್ ಬಂತೆಂದರೆ ಮಳೆಯದ್ದೇ ಅಬ್ಬರ. ಅದೇ ಸಮಯಕ್ಕೆ ಬೇಸಗೆ ರಜೆ ಮುಗಿದು ಶಾಲೆ ತೆರೆಯುವ ಸಮಯ. ವ್ಯವಸಾಯ ಮಾಡುವವರಿಗೂ ಹಬ್ಬ; ವರ್ಷವೆಲ್ಲ ಮಳೆಗಾಗಿ ಕಾದು, ತಮ್ಮ ಪೈರುಗಳು ಉತ್ತಮ ಫಲ ನೀಡುತ್ತವೆ ಎಂಬ ನಿರೀಕ್ಷೆ.
ಮಳೆಯೊಂದಿಗೆ ಹಲವಾರು ನಂಟುಗಳು ಬೆಸೆದುಕೊಂಡಿರುತ್ತವೆ. ಆ ವಾತಾವರಣವೇ ಒಂದು ರೀತಿಯ ಅಂದ, ಚೆಂದ, ಸ್ವತ್ಛಂದ. ಒಂದು ವೇಳೆ ಬೆಳಗ್ಗೆ ಏಳುವಾಗ ಮಳೆ ಬರುತ್ತಿದ್ದರೆ ಎದ್ದೇಳಲು ಉದಾಸೀನ. ಆ ತಣ್ಣನೆಯ ವಾತಾವರಣಕ್ಕೆ ಮನಕ್ಕೆ ಜಡ ಬಡಿದು; ಹೊದಿಕೆಯನ್ನು ಕಾಲಿನಿಂದ ತಲೆಯವರೆಗೆ ಎಳೆದು ಮಲಗುವ ಸುಖವೇ ಬೇರೆ.
ಕೆಲವೊಮ್ಮೆ ಮಳೆಯೊಂದಿಗೆ ಗಾಳಿ, ಸಿಡಿಲು ಮತ್ತು ಮಿಂಚು ಒಟ್ಟೊಟ್ಟಿಗೆ ಬರುತ್ತವೆ. ಆಗ ಮನೆಯಂಗಳದಲ್ಲಿರುವ ವಸ್ತುಗಳು ಹಾರಿ ಹೋಗಿ, ಒಬ್ಬರ ಮನೆಯ ವಸ್ತು ಇನ್ನೊಬ್ಬರ ಮನೆಯ ಅಂಗಳಕ್ಕೆ ಹೋಗಿ ಬಿದ್ದ ಸಾಕ್ಷಿಗಳಿವೆ.
ಅದೇನೂ ಗೊತ್ತಿಲ್ಲ, ಈ ಮಳೆರಾಯನಿಗೂ ಮಕ್ಕಳಿಗೂ ಜನುಮ ಜನುಮದ ಅನುಬಂಧ. ಯಾಕೆಂದರೆ ಮಕ್ಕಳು ಶಾಲೆಗೆ ಹೊರಡುವಾಗ ಮತ್ತು ಅವರಿಗೆ ಶಾಲೆ ಬಿಡುವಾಗ ಮಳೆಯು ಹಠ ಬಿಡದೆ ಬರುವುದುಂಟು. ತಂದೆ-ತಾಯಿಗಂತೂ ಮಕ್ಕಳೂ ಎಲ್ಲಿ ಮಳೆಯಲ್ಲಿ ನೆನೆದು ಶೀತ ಜ್ವರ ಬಂದು ಆರೋಗ್ಯ ಕೆಡುತ್ತದೆ ಎಂಬ ಆತಂಕ. ಮಳೆಗಾಲದ ವಿಶೇಷ ಎಂದರೆ ಹರಿಯುವ ನೀರಿನಲ್ಲಿ ಕಾಗದ ದೋಣಿ ಮಾಡಿ ಬಿಡುವುದು. ಸಂಜೆಯಾದರೆ ಬಿಸಿ ಬಿಸಿ ಪಕೋಡ, ಬೋಂಡ, ಕಾಫಿ ಹೀಗೆ ತಿಂಡಿ ಮಾಡಿ ತಿಂದರೇನೆ ಮಳೆಗಾಲಕ್ಕೂ ಒಂದರ್ಥ. ಬೇಸಗೆಯಲ್ಲಿ ಮಾಡಿಟ್ಟಿದ್ದ ಹಪ್ಪಳ, ಸಂಡಿಗೆ ಎಲ್ಲ ಹೊರಗೆ ಬರುತ್ತವೆ .
ಮಳೆಯೊಂದಿಗೆ ಹಲವು ಭಾವನೆ, ನೆನಪುಗಳು ಕೂಡಿರುತ್ತವೆ. ಆದರೆ ಬರುಬರುತ್ತ ಈ ಮಳೆರಾಯನು ತನಗೆ ಬೇಕಾದ ಸಮಯಕ್ಕೆ ಬರಲು ಪ್ರಾರಂಭಿಸಿದ. ಯಾವ ತಿಂಗಳಿನಲ್ಲಿ ಬರುತ್ತಾನೆ ಎನ್ನುವುದನ್ನು ಊಹಿಸಲು ಕಷ್ಟ. ಕೆಲವೊಂದು ಕಡೆ ಈ ಮಳೆರಾಯನ ಆರ್ಭಟದಿಂದ ಸಾವಿರಾರು ಮನೆಗಳು ಕೊಚ್ಚಿ ಹೋಗಿ, ಆಸ್ತಿ-ಪಾಸ್ತಿ ನಾಶ ಆಗಿವೆ. ಹಳೆಯ ಗಾದೆ ಮಾತಿನಂತೆ “ಒಂದು ನ್ಯಾಣಕ್ಕೆ ಎರಡು ಮುಖಗಳು’ ಇರುವಂತೆ, ಮಳೆಯಿಂದ ತಮ್ಮ ಜೀವನ ಕಟ್ಟಿಕೊಳ್ಳುವವರು ಇದ್ದಾರೆ. ಅದರೊಂದಿಗೆ ಮಳೆಯಿಂದ ತಮ್ಮ ಸರ್ವಸ್ವವನ್ನೂ ಕಳೆದುಕೊಂಡವರು ಇದ್ದಾರೆ.
ಸ್ಫೂರ್ತಿ ರಾವ್ ಎಸ್. ಕೋಡಿ
ಆಳ್ವಾಸ್ ಕಾಲೇಜು, ಮೂಡುಬಿದಿರೆ