Advertisement

ಬಿಜೆಪಿ ಶಾಸಕರಲ್ಲಿ ಸಂತಸ, ಹೆಚ್ಚಿದ ಆತ್ಮವಿಶ್ವಾಸ

11:36 PM Jul 17, 2019 | Lakshmi GovindaRaj |

ಬೆಂಗಳೂರು: ಸುಪ್ರೀಂಕೋರ್ಟ್‌ನ ಮಧ್ಯಂತರ ತೀರ್ಪು ಹೊರ ಬೀಳುತ್ತಿದ್ದಂತೆ ಬಿಜೆಪಿ ಶಾಸಕರು ನೆಲೆಸಿರುವ ಯಲಹಂಕ ಸಮೀಪದ ರಮಡಾ ರೆಸಾರ್ಟ್‌ನಲ್ಲಿ ಸಂಭ್ರಮ ಮನೆ ಮಾಡಿತು.

Advertisement

ಸುಪ್ರೀಕೋರ್ಟ್‌ ತೀರ್ಪು ಅತೃಪ್ತ ಶಾಸಕರ ಪರವಾಗಿದೆ ಎಂಬ ಕಾರಣಕ್ಕೆ ಸಂತಸದಲ್ಲಿದ್ದ ಬಿಜೆಪಿಗೆ ಸರ್ಕಾರ ರಚನೆಯ ವಿಶ್ವಾಸ ಹೆಚ್ಚಾಗಿತ್ತು. ಶಾಸಕರು ಪರಸ್ಪರ ಅಭಿನಂದನೆ ಹೇಳಿಕೊಳ್ಳುವುದರ ಜತೆಗೆ ಹಿರಿಯ ನಾಯಕರಿಗೂ ಶುಭ ಕೋರಿದರು. ಶಾಸಕ ಎಸ್‌.ರಘು ಅವರು ಲಾಡು ತರಿಸಿ ಎಲ್ಲರಿಗೂ ಹಂಚಿದರು.

ಗವಿ ಗಂಗಾಧರಸ್ವಾಮಿ ದೇವಸ್ಥಾನದಲ್ಲಿ ನಡೆದ ಹೋಮದಲ್ಲಿ ಪಾಲ್ಗೊಂಡು ರೆಸಾರ್ಟ್‌ಗೆ ಹಿಂತಿರುಗಿದ ಯಡಿಯೂರಪ್ಪ ಅವರು ಮಧ್ಯಾಹ್ನ 1.30ಕ್ಕೆ ಶಾಸಕಾಂಗ ಪಕ್ಷದ ಸಭೆ ನಡೆಸಿದರು. ಗುರುವಾರದ ಕಲಾಪವು ಬಿಜೆಪಿಗೆ ಮಹತ್ವದ್ದಾಗಿದ್ದು, ಎಲ್ಲ ಶಾಸಕರು ತಾಳ್ಮೆಯಿಂದ ವರ್ತಿಸಬೇಕು.

ಮುಖ್ಯಮಂತ್ರಿಗಳ ನಡೆ ಆಧರಿಸಿ ಮುಂದಿನ ಹೆಜ್ಜೆ ಇರಿಸಲಾಗುವುದು. ಇದಕ್ಕೆ ಎಲ್ಲ ಶಾಸಕರೂ ಬದ್ಧವಾಗಿರಬೇಕು. ಯಾರೊಬ್ಬರೂ ಪ್ರಚೋದನೆಗೆ ಒಳಗಾಗಿ ತಾಳ್ಮೆ ಕಳೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು ಎನ್ನಲಾಗಿದೆ.

ಹುಟ್ಟುಹಬ್ಬ ಆಚರಣೆ: ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್‌ ಅವರ ಹುಟ್ಟುಹಬ್ಬವನ್ನು ರೆಸಾರ್ಟ್‌ನಲ್ಲೇ ಶಾಸಕರು ಆಚರಿಸಿದರು. ಬಳಿಕ ಹಿರಿಯ ನಾಯಕರು ಶಾಸಕರೊಂದಿಗೆ ಒಟ್ಟಿಗೆ ಭೋಜನ ಸೇವಿಸಿ, ಕೆಲಹೊತ್ತು ವಿಶ್ರಾಂತಿ ಪಡೆದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿಯವರು ಬುಧವಾರ ಮೊದಲ ಬಾರಿಗೆ ರೆಸಾರ್ಟ್‌ಗೆ ಭೇಟಿ ನೀಡಿದ್ದರು.

Advertisement

ಸುಗಮ ಸಂಗೀತ: ರೆಸಾರ್ಟ್‌ನಲ್ಲಿ ಬುಧವಾರ ಸಂಜೆ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಡಬಗೆರೆ ಮುನಿರಾಜು ಮತ್ತು ತಂಡ ಸುಗಮ ಸಂಗೀತ ಪ್ರಸ್ತುತಪಡಿಸಿತು.

ರೆಸಾರ್ಟ್‌ನಲ್ಲಿ ಎನ್‌.ಆರ್‌.ಸಂತೋಷ್‌: ಕಾಂಗ್ರೆಸ್‌, ಜೆಡಿಎಸ್‌ನ 12 ಶಾಸಕರು ರಾಜೀನಾಮೆ ನೀಡುವಾಗ ವಿಧಾನಸೌಧ ಹಾಗೂ ರಾಜಭವನದಲ್ಲಿ ಕಾಣಿಸಿಕೊಂಡಿದ್ದ, ಬಳಿಕ ಹಲವು ಶಾಸಕರು ಮುಂಬೈಗೆ ತೆರಳುವಾಗಲೂ ಪ್ರತ್ಯಕ್ಷರಾಗಿದ್ದ ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್‌.ಆರ್‌.ಸಂತೋಷ್‌ ಬುಧವಾರ ಮೊದಲ ಬಾರಿಗೆ ರೆಸಾರ್ಟ್‌ಗೆ ಭೇಟಿ ನೀಡಿ, ಕೆಲ ಹೊತ್ತು ಕಳೆದರು. ಬಳಿಕ ಅವರು ರೆಸಾರ್ಟ್‌ನಿಂದ ತೆರಳಿದರು ಎಂದು ಮೂಲಗಳು ತಿಳಿಸಿವೆ.

ಶಾಸಕರಿಂದ ದೇವರ ದರ್ಶನ: ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ಸಿದ್ದು ಸವದಿ, ಮಹದೇವ ಯಾದವಾಡ ಅವರು ಮುಳಬಾಗಿಲು ಸಮೀಪದ ಕುರುಡುಮಲೆ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.

“ವಿಪ್‌’ ಜಾರಿ ಹಿನ್ನೆಲೆಯಲ್ಲಿ ಎಲ್ಲ ಶಾಸಕರು ಗುರುವಾರ ಸದನದಲ್ಲಿ ಹಾಜರಿರುವಂತೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಪಕ್ಷೇತರ ಶಾಸಕರಾದ ಆರ್‌.ಶಂಕರ್‌, ಎಚ್‌.ನಾಗೇಶ್‌ ಅವರೊಂದಿಗೆ ಸದನಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next