Advertisement

ಸೋತು ಗೆಲ್ಲುವ ಸುಖ

07:09 PM Oct 03, 2019 | mahesh |

ಅದೊಂದು ದಿನ. ಪೂರ್ಣಪ್ರಮಾಣದ ಶಿಕ್ಷಕರಾಗುವ ಮುನ್ನ ಪ್ರಾಯೋಗಿಕವಾಗಿ ಶಿಕ್ಷಕ ವೃತ್ತಿಯ ಅನುಭವಗಳನ್ನು ಪಡೆಯಲು ಇಂಟರ್ಶಿಪ್ ಗಾಗಿ ಶಾಲೆಗೆ ಹೋಗುತ್ತಿದ್ದ ಸಮಯವದು. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಮಕ್ಕಳು ನಮಗಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಎಲ್ಲ ಶಿಕ್ಷಕರಿಗೂ ಸ್ವಾಗತ ಕೋರಿದ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ನಮ್ಮನ್ನೂ ವೇದಿಕೆ ಮೇಲೆ ಕರೆದರು. ಆ ದಿನ ನಾವೂ ಕೂಡ ವಿ.ಐ.ಪಿ.ಗಳಾಗಿದ್ದೆವು !

Advertisement

ಮಕ್ಕಳು “ಈಗ ಶಿಕ್ಷಕರನ್ನು ಆಟ ಆಡಿಸೋಣ’ ಅನ್ನುತ್ತಲೇ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರ ಹೆಸರನ್ನು ಪಟ್ಟಿ ಮಾಡಿಕೊಂಡರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿಜೇತ ಶಿಕ್ಷಕರಿಗೆ ಬಹುಮಾನ ವಿತರಣೆಯೂ ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಾದವರು ಬಹುಮಾನವನ್ನು ಪಡೆದರು. ಆದರೆ, ನಂತರ ನಾವು ನಿರೀಕ್ಷಿಸದ ಘಟನೆಯೊಂದು ನಡೆಯಿತು! ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲದ ಶಿಕ್ಷಕರಿಗೂ ವಿದ್ಯಾರ್ಥಿಗಳು ಪ್ರೋತ್ಸಾಹಕರ ಬಹುಮಾನವನ್ನು ನೀಡಿದರು. ಶಿಕ್ಷಕರಿಗೆ ಬೇಸರವಾಗಬಾರದೆನ್ನುವ ಕಾಳಜಿ ಅಷ್ಟು ಸಣ್ಣ ವಯಸ್ಸಿನಲ್ಲಿ ಮಕ್ಕಳ ಮನಸ್ಸಿನಲ್ಲಿ ಮೂಡಿದುದು ತುಂಬಾ ಸಂತೋಷಕರ ವಿಷಯ. ಮಕ್ಕಳ ಮನದ ಭಾವ ಹೊರಹೊಮ್ಮಿ ಬಹುಮಾನದ ರೂಪದಲ್ಲಿ ಶಿಕ್ಷಕರ ಕೈ ಸೇರಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗೆಲ್ಲದ ವರ್ಗದಲ್ಲಿ ನಾನೂ ಇದ್ದು, ನನಗೆ ಸೋತು ಗೆದ್ದ ಅನುಭವವುಂಟಾಯಿತು.

ಶಿಕ್ಷಕರ ದಿನಾಚರಣೆಯಂದು ಸಿಕ್ಕ ಈ ಅನುಭವ ಮೊದಲ ಅನುಭವವಾಗಿದ್ದು, ಮನದಲ್ಲಿ ಚಿರಸ್ಥಾಯಿಯಾಗಿ ಉಳಿಯುವುದಂತೂ ಸುಳ್ಳಲ್ಲ. ಮತ್ತೂಮ್ಮೆ ಥ್ಯಾಂಕ್ಯೂ ಮಕ್ಕಳೇ.

ವಾಣಿ
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next