Advertisement

ಹಾಪ್‌ಕಾಮ್ಸ್‌ ಹಣ್ಣು, ತರಕಾರಿ ಆನ್‌ಲೈನ್‌ನಲ್ಲಿ

11:42 AM Feb 10, 2017 | |

ಬೆಂಗಳೂರು: ಗ್ರಾಹಕರು ಇನ್ನು ಮುಂದೆ ತಮಗಿಷ್ಟವಾದ ತಾಜಾ ಹಣ್ಣು, ತರಕಾರಿಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗುವಂತಿಲ್ಲ!.  ಮೊಬೈಲ್‌ ಮತ್ತು ಕಂಪ್ಯೂಟರ್‌ ಮೂಲಕ ಕುಳಿತಲ್ಲೇ ಆನ್‌ಲೈನ್‌ನಲ್ಲಿ ಹಣ್ಣು, ತರಕಾರಿ ಖರೀದಿಸುವ  ವ್ಯವಸ್ಥೆಗೆ ಹಾಪ್‌ಕಾಮ್ಸ್‌ ಶೀಘ್ರವೇ ಚಾಲನೆ ನೀಡಲಿದೆ. ಅದಕ್ಕಾಗಿಯೇ ವಿಶೇಷ ಆ್ಯಪ್‌ವೊಂದನ್ನು ಖಾಸಗಿ ಸಂಸ್ಥೆಯೊಂದರ ಸಹಬಾಗಿತ್ವದಲ್ಲಿ ಹಾಪ್‌ಕಾಪ್ಸ್‌ ಅಭಿವೃದ್ಧಿ ಪಡಿಸಿದ್ದು, ಫೆ.20ರಂದು ಲೋಕಾರ್ಪಣೆ ಮಾಡಲು ಸಿದ್ಧತೆ ನಡೆಸಿದೆ.

Advertisement

ಹಾಪ್‌ಕಾಮ್ಸ್‌ನಲ್ಲಿ ನೋಂದಣಿಯಾದ ರೈತರು ಸಾವಯವ ಕೃಷಿಯಲ್ಲಿ ಬೆಳೆದ ತಾಜಾ ಹಣ್ಣು , ತರಕಾರಿ ಮತ್ತು ಇತರ ಉತ್ಪನ್ನಗಳು ಮಾತ್ರ ಈ ಆನ್‌ಲೈನ್‌ ಶಾಪಿಂಗ್‌ನಲ್ಲಿ ಲಭ್ಯ. ಇಚ್ಛೆಯುಳ್ಳ ಗ್ರಾಹಕರು  www.hortibazaar.com ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಅಂದು ಲಭ್ಯವಿರುಹಣ್ಣು, ತರಕಾರಿಗಳ ಪಟ್ಟಿ ಮತ್ತು ದರ ಪಟ್ಟಿಯನ್ನು ಸುಲಭವಾಗಿ ಪರಿಶೀಲಿಸಲು ಅನುಕೂಲ ಕಲ್ಪಿಸಲಾಗುತ್ತಿದೆ. ಜತೆಗೆ ಗ್ರಾಹಕನಿಗೆ ಎಷ್ಟು ಕೆಜಿ ಹಣ್ಣು , ತರಕಾರಿ ಇಲ್ಲವೇ ಇತರ ಉತ್ಪನ್ನಗಳು ಬೇಕು ಎಂಬುದನ್ನು ಗುರುತಿಸಿ, ಶಾಪಿಂಗ್‌ಕಾರ್ಟ್‌ನಲ್ಲಿ ಸೇರಿಸಿಟ್ಟುಕೊಂಡು ಬಳಿಕ ಒಟ್ಟಾಗಿ ಪ್ರಸ್ತಾವನೆ ಸಲ್ಲಿಸಬಹುದಾಗಿದೆ. 

ಹಣ್ಣು, ತರಕಾರಿಯ ಅಂದಿನ ಹಾಪ್‌ಕಾಮ್ಸ್‌ ಬೆಲೆ ಎಷ್ಟು ಎಂಬುದರ ಆಧಾರದ ಮೇಲೆ ಗ್ರಾಹಕ ಆಯ್ಕೆ ಮಾಡಿಟ್ಟುಕೊಂಡ ವಸ್ತುಗಳ ಬೆಲೆ ಕಂಪ್ಯೂಟರ್‌, ಮೊಬೈಲ್‌ ಪರದೆ ಮೇಲೆ ಮೂಡುತ್ತದೆ. ನಂತರ ಖರೀದಿ ಪ್ರಸ್ತಾವನೆ ಸಲ್ಲಿಸಿದ ಕೂಡಲೇ ಗ್ರಾಹಕನ ವೈಯಕ್ತಿಕ ವಿವರದ ಮಾಹಿತಿ ನೀಡುವುದು ಕಡ್ಡಾಯ. ಇಲ್ಲದಿದ್ದರೆ ಹಣ್ಣು, ತರಕಾರಿ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ. 

ವೈಯಕ್ತಿಕ ಮಾಹಿತಿ ಕಡ್ಡಾಯ: ಹೆಸರು, ಇ ಮೇಲ್‌ ವಿಳಾಸ, ಮೊಬೈಲ್‌ ಅಥವಾ ದೂರವಾಣಿ ಸಂಖ್ಯೆ ಹಾಗೂ ಸಂಪೂರ್ಣ ವಿಳಾದ ಬರೆದ ನಂತರ ಮಾಹಿತಿಯನ್ನು ಕಳುಹಿಸಬೇಕು. ನೀವು ಕಳುಹಿಸಿದ ಮಾಹಿತಿ ನೇರವಾಗಿ ಆನ್‌ಲೈನ್‌ ವ್ಯವಸ್ಥೆ ನೋಡಿಕೊಳ್ಳುವ ಸಿಬ್ಬಂದಿಗೆ ತಲುಪಲಿದ್ದು, ಆದರ ಆಧಾರದ ಮೇಲೆ ಡೋರ್‌ಡೆಲಿವರಿ ಮಾಡುವ ಸಿಬ್ಬಂದಿ ಫೋನ್‌ ಕರೆ ಮಾಡಿ ತಮ್ಮ ಪ್ರಸ್ತಾವನೆಯನ್ನು ಖಚಿತಪಡಿಸಿಕೊಳ್ಳಲಿದ್ದಾರೆ. ನಂತರ  ಹಣ್ಣು, ತರಕಾರಿಗಳ ಪೂರೈಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ.

ನಿರಾಕರಿಸಲು ಅವಕಾಶ: ಆರ್ಡರ್‌ನಲ್ಲಿ  ಗುಣಮಟ್ಟದ ಲೋಪಗಳು ಕಂಡುಬಂದಲ್ಲಿ ಗ್ರಾಹಕರು ಉತ್ಪನ್ನವನ್ನು ನಿರಾಕರಿಸಲು ಅವಕಾಶ ನೀಡಲಾಗಿದೆ. ಗ್ರಾಹಕ ಆನ್‌ಲೈನ್‌ನಲ್ಲಿ ಖರೀದಿಸಿದ ಮಾಲು ಕೈ ಸೇರಿದ ನಂತರವೇ ಹಣ ಪಾವತಿಸಲು ಅವಕಾಶವಿದೆ.

Advertisement

ನಗರದ ಗ್ರಾಹಕರಿಗೆ ಆನ್‌ಲೈನ್‌ ಮೂಲಕ ಹಣ್ಣು , ತರಕಾರಿ ಒದಗಿಸುವ ಉದ್ದೇಶದಿಂದ Hunnarvi technologies salution ಎಂಬ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಗ್ರಾಹಕರು www.hortibazaar.com ಗೆ ಭೇಟಿ ನೀಡುವ ಮೂಲಕ ಖರೀದಿ ಮಾಡಬಹುದು. ಇಲ್ಲವೇ ದೂರವಾಣಿ 080-26575977 ಅಥವಾ 080- 26575988 ಗೆ ಕರೆ ಮಾಡಿ ತಮಗಿಷ್ಟವಾದ ತರಕಾರಿ, ಹಣ್ಣು  ಖರೀದಿಸಬಹುದು.
-ಡಾ.ಬೆಳ್ಳೂರು ಕೃಷ್ಣ, ವ್ಯವಸ್ಥಾಪಕ ನಿರ್ದೇಶಕ, ಹಾಪ್‌ಕಾಮ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next