Advertisement

ಹನೂರು: ಟಿಕೆಟ್‌ ಘೋಷಣೆ ಮಾಡದ ಬಿಜೆಪಿ, ಬಿಎಸ್‌ಪಿ

03:03 PM Apr 03, 2023 | Team Udayavani |

ಹನೂರು: ದಿನದಿಂದ ದಿನಕ್ಕೆ ಚುನಾವಣಾ ರಂಗು ತಾರಕಕ್ಕೇರುತ್ತಿದ್ದು ಬಿಜೆಪಿ, ಅಮ್‌ ಆದ್ಮಿ ಪಕ್ಷ ಮತ್ತು ಬಹುಜನ ಸಮಾಜ ಪಾರ್ಟಿ ಕ್ಷೇತ್ರದಲ್ಲಿ ಅಭ್ಯ ರ್ಥಿಗಳನ್ನು ಘೋಷಣೆ ಮಾಡದೇ ಇರುವುದು ಕ್ಷೇತ್ರಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.

Advertisement

ಹನೂರು ಕ್ಷೇತ್ರದಲ್ಲಿ ಯಾರ್ಯಾರು ಅಭ್ಯರ್ಥಿ: ಹನೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಹಾಲಿ ಶಾಸಕ ನರೇಂದ್ರ ರಾಜೂಗೌಡ ಅವರಿಗೆ ಟಿಕೆಟ್‌ ಘೋಷಣೆಯಾಗಿದೆ. ಈಗಾಗಲೇ ಚುನಾವಣಾ ಅಖಾಡಕ್ಕೆ ಧುಮುಕಿ ಮತ ಬೇಟೆಯಲ್ಲಿ ನಿರತರಾಗಿದ್ದಾರೆ. ಇನ್ನು ಜೆಡಿಎಸ್‌ ಪಕ್ಷದಿಂದಲೂ ರಾಜ್ಯ ಉಪಾಧ್ಯಕ್ಷ ಎಂ.ಆರ್‌.ಮಂಜುನಾಥ ಅವರ ಹೆಸರು ಅಂತಿಮಗೊಂಡಿದ್ದು, ಈ ಬಾರಿ ಗೆಲುವು ಸಾಧಿಸಲೇಬೇಕೆಂದು ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ ಬಿಜೆಪಿ, ಬಿಎಸ್‌ಪಿ ಮತ್ತು ಎಎಪಿ ಪಕ್ಷದಿಂದ ಮಾತ್ರ ಇನ್ನೂ ಹೆಸರು ಅಂತಿಮಗೊಂಡಿಲ್ಲ. ಇನ್ನುಳಿದಂತೆ ಪಕ್ಷೇತರವಾಗಿ ಸ್ಫರ್ಧಿಸಲೂ ಸಹ ಗುಂಡಾಪುರ ಮುಜಾಮಿಲ್‌ ಪಾಷಾ, ಪೊನ್ನಾಚಿ ಸ್ನೇಹಜೀವಿ ರಾಜು ಸನ್ನದ್ಧರಾಗಿದ್ದಾರೆ.

ಎಎಪಿ ಅಭ್ಯರ್ಥಿ ಯಾರು?: ಈಗಾಗಲೇ 2 ಹಂತದಲ್ಲಿ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಎಎಪಿ ಪಕ್ಷ ಜಿಲ್ಲೆಯ ಚಾಮರಾಜನಗರ ಕ್ಷೇತ್ರಕ್ಕೆ ಡಾ. ಗುರುಪ್ರಸಾದ್‌ ಮತ್ತು ಕೊಳ್ಳೇಗಾಲ ಮೀಸಲು ಕ್ಷೇತ್ರಕ್ಕೆ ಕೆಂಪರಾಜು ಅವರನ್ನು ಘೋಷಣೆ ಮಾಡಿದೆ. ಹನೂರು ಕ್ಷೇತ್ರಕ್ಕೆ ಅಮ್‌ ಆದ್ಮಿ ಪಕ್ಷದಿಂದ ಮತ್ತೀಪುರ ಗ್ರಾಮದ ನಾಗೇಂದ್ರ ಮತ್ತು ಹರೀಶ್‌ ಸಹೋದರರು ಕಳೆದ 2-3 ವರ್ಷಗಳಿಂದಲೂ ಕ್ಷೇತ್ರಾದ್ಯಂತ ಸಂಚರಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಒಂದೊಮ್ಮೆ ಎಎಪಿ ಪಕ್ಷದ ತತ್ವ ಸಿದ್ಧಾಂತದಂತೆ ಪಕ್ಷ ಸಂಘಟನೆಯಲ್ಲಿ ಮುಂಚೂಣಿ ಯಲ್ಲಿರುವವರಿಗೆ ಟಿಕೆಟ್‌ ನೀಡುವುದಾದರೆ ಈ ಇಬ್ಬರ ಪೈಕಿ ಒಬ್ಬರಿಗೆ ಮೊದಲ ಪಟ್ಟಿಯಲ್ಲಿಯೇ ಟಿಕೆಟ್‌ ಘೋಷಣೆ ಯಾಗಬೇಕಿತ್ತು. ಆದರೆ ಎಎಪಿಯಿಂದ 2 ಪಟ್ಟಿ ಬಿಡುಗಡೆ ಮಾಡಿದ್ದರೂ ಸಹ ಹನೂರು ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿಲ್ಲ.

ಬಿಎಸ್ಪಿಯಿಂದಲೂ ಘೋಷಣೆಯಾಗಿಲ್ಲ: ‌ಜನ ಸಮಾಜ ಪಾರ್ಟಿಯಿಂದಲೂ ಈಗಾಗಲೇ ಜಿಲ್ಲೆಯ ಚಾಮರಾಜನಗರ ಕ್ಷೇತ್ರಕ್ಕೆ ಹ.ರಾ.ಮಹೇಶ್‌ ಮತ್ತು ಕೊಳ್ಳೇಗಾಲ ಮೀಸಲು ಕ್ಷೇತ್ರಕ್ಕೆ ಜಿಪಂ ಮಾಜಿ ಸದಸ್ಯ ಕಮಲ್‌ ನಾಗರಾಜು ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಆದರೆ ಹನೂರು ಕ್ಷೇತ್ರದಲ್ಲಿ ತಾಲೂಕು ಅಧ್ಯಕ್ಷ ಶಾಗ್ಯ ಮಹೇಶ್‌ ಸೇರಿದಂತೆ 3-4 ಆಕಾಂಕ್ಷಿಗಳಿದ್ದರೂ ಕೂಡ ಇನ್ನೂ ಅಭ್ಯರ್ಥಿಯನ್ನು ಆಯ್ಕೆ ಮಾಡಿಲ್ಲ.

ಬಿಜೆಪಿ ಅಸಮಾಧಾನಿತರಿಗಾಗಿ ಕಾಯುತ್ತಿವೆಯೇ ಬಿಎಸ್ಪಿ ಮತ್ತು ಎಎಪಿ: ಹನೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಬಯಸಿ ವಸತಿ ಸಚಿವ ಸೋಮಣ್ಣ, 2018ರ ಚುನಾವಣೆಯ ಪರಾಜಿತ ಅಭ್ಯರ್ಥಿ ಡಾ.ಪ್ರೀತನ್‌ ನಾಗಪ್ಪ ಸೇರಿದಂತೆ 5 ಜನ ಪ್ರಬಲ ಆಕಾಂಕ್ಷಿಗಳಿದ್ದಾರೆ. ಈ ಆಕಾಂಕ್ಷಿಗಳ ಪೈಕಿ ಟಿಕೆಟ್‌ ವಂಚಿತರಾಗಿ ಯಾರಾದರೂ ಪಕ್ಷಾಂತರ ಮಾಡಿ ಪಕ್ಷ ಸೇರ್ಪಡೆಯಾದಲ್ಲಿ ಅಂತಹವರಿಗೆ ಟಿಕೆಟ್‌ ನೀಡಲು ಬಿಎಸ್ಪಿ ಮತ್ತ ಎಎಪಿ ಪಕ್ಷಗಳು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

Advertisement

ಈ ನಿಟ್ಟಿನಲ್ಲಿ ಈಗಾಗಲೇ ಕಳೆದ 6 ತಿಂಗಳಿನಿಂದಲೂ ಆಕಾಂಕ್ಷಿಯೊಬ್ಬರು ಬಿಎಸ್ಪಿ ಜೊತೆ ಸಂಪರ್ಕದಲ್ಲಿರುವುದು ಗುಟ್ಟಾಗೇನು ಉಳಿದಿಲ್ಲ, ಇನ್ನು ಮತ್ತೋರ್ವ ಆಕಾಂಕ್ಷಿಯನ್ನು ಎಎಪಿ ಪಕ್ಷದ ಮುಖಂಡರು ಪಕ್ಷಕ್ಕೆ ಸೆಳೆಯುವ ಬಗ್ಗೆ ಮಾತುಕಡೆ ನಡೆಸಿದ್ದು ಬಿಜೆಪಿಯಿಂದ ನನಗೇ ಟಿಕೆಟ್‌ ಅಂತಿಮವಾಗಲಿದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡೋಣ ಎಂದು ತಿಳಿಸಿದ್ದಾರೆ ಎಂಬುದಾಗಿ ಎಎಪಿ ಮೂಲಗಳಿಂದ ತಿಳಿದುಬಂದಿದೆ.

ಒಟ್ಟಾರೆ ಬಿಜೆಪಿಯ ಅಸಮಾಧಾನಿತರಿಗಾಗಿ ಬಿಎಸ್ಪಿ ಮತ್ತು ಎಎಪಿ ಪಕ್ಷಗಳು ಕಾದುನೋಡುವ ತಂತ್ರಕ್ಕೆ ಮೊರೆ ಹೋಗಿದ್ದು ಬಿಜೆಪಿ ಪಟ್ಟಿ ಬಿಡುಗಡೆಯಾದ ಬಳಿಕ ಯಾರಾದರೂ ಪಕ್ಷಾಂತರ ಮಾಡಿ ಈ ಪಕ್ಷಗಳಿಂದ ಸ್ಪರ್ಧಿಸುವರೋ ಅಥವಾ ಬಿಎಸ್ಪಿ ಮತ್ತು ಎಎಪಿ ಪಕ್ಷಗಳು ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡುವರೇ ಕಾದುನೋಡಬೇಕಿದೆ.

ಅಮ್‌ ಆದ್ಮಿ ಪಕ್ಷದಲ್ಲಿ ಚುನಾವಣಾ ಸಂದರ್ಭದಲ್ಲಿ ಪಕ್ಷಕ್ಕೆ ಬರುವ ನಾಯಕರಿಗೆ ಟಿಕೆಟ್‌ ಕೊಡುವ ಪದ್ಧತಿಯಿಲ್ಲ. ಹನೂರು ಕ್ಷೇತ್ರದಿಂದ ನಾನು ಸ್ಪರ್ಧಿಸಬೇಕೂ ಅಥವಾ ನನ್ನ ಸಹೋದರ ಹರೀಶ್‌ ಸ್ಪರ್ಧಿಸಬೇಕೇ ಎಂಬುವ ವಿಚಾರದಲ್ಲಿ ಸ್ವಲ್ಪ ಚರ್ಚೆಗಳಾಗುತ್ತಿದ್ದು ಮುಂದಿನ ಪಟ್ಟಿಯಲ್ಲಿ ನಮ್ಮಿಬ್ಬರ ಪೈಕಿ ಒಬ್ಬರ ಹೆಸರು ಘೋಷಣೆಯಾಗಲಿದೆ. ● ಮತ್ತೀಪುರ ನಾಗೇಂದ್ರ, ಎಎಪಿ ಆಕಾಂಕ್ಷಿ

ಬಿಎಸ್ಪಿ ಪಕ್ಷಕ್ಕೆ ಬೇರೆ ಪಕ್ಷದಿಂದ ಪ್ರಬಲ ಅಭ್ಯರ್ಥಿಯೊಬ್ಬರು ಬರುವ ನಿರೀಕ್ಷೆಯಲ್ಲಿದ್ದೆವು. ಆದರೆ ಆ ಅಭ್ಯರ್ಥಿ ಇನ್ನೂ ಸೂಕ್ತ ತೀರ್ಮಾನ ಕೈಗೊಳ್ಳದೆ ಇರುವುದರಿಂದ ಕಾಲಮಿತಿ ಮೀರಿದೆ. ಈ ನಿಟ್ಟಿನಲ್ಲಿ ಪಕ್ಷದಿಂದ ಸ್ಪರ್ಧಿಸಲು ನಾನೂ ಸೇರಿ 3-4 ಜನ ಆಕಾಂಕ್ಷಿಗ ಳಿದ್ದು ಅಭ್ಯರ್ಥಿ ಅಂತಿಮಗೊಳಿಸುವ ಸಂಬಂಧ ಚರ್ಚೆ ನಡೆಸಿದ್ದು ಏ.5 ಅಥವಾ 6 ರಂದು ಅಭ್ಯರ್ಥಿ ಅಂತಿಮಗೊಳಿಸಲಾಗುವುದು. ● ಶಾಗ್ಯ ಮಹೇಶ್‌, ಬಿಎಸ್ಪಿ ಹನೂರು ತಾಲೂಕು ಅಧ್ಯಕ

-ವಿನೋದ್‌ ಎನ್‌, ಗೌಡ

Advertisement

Udayavani is now on Telegram. Click here to join our channel and stay updated with the latest news.

Next