Advertisement
ಭಟ್ಕಳದಲ್ಲಿ ಪುರಾತನ ಆಂಜನೇಯನ ದೇವಾಸ್ಥಾನಗಳಿದ್ದು ಅವುಗಳಲ್ಲಿ ಶಿರಾಲಿಯ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನವೂ ಒಂದು. ಇದು ಸುಮಾರು 500 ವರ್ಷಗಳ ಇತಿಹಾಸ ಹೊಂದಿದ್ದು ರಾಜರ ಕಾಲದಲ್ಲಿ ಉಚ್ಛಾಟನೆಯ ಸ್ಥಿತಿಯಲ್ಲಿದ್ದ ದೇವಾಲಯವಾಗಿದೆ.
Related Articles
Advertisement
ಅಷ್ಟಮಂಗಲ ಪ್ರಶ್ನೆ: ಸಮಾಜದ ಒಟ್ಟಾಭಿಪ್ರಾಯದಂತೆ ವಿಧ್ವಾಂಸ ಕೇರಳದ ವಿಷ್ಣುಮೂರ್ತಿ ನಂಬೂದರಿಯವರ ಮುಖೇನ ಅಷ್ಟಮಂಗಲ ಪ್ರಶ್ನೆಯಿಟ್ಟಾಗ ದೇವರ ಗರ್ಭಗ್ರಹವನ್ನು ಶಿಲಾಮಯವಾಗಿಸಬೇಕು ಎನ್ನುವ ಉತ್ತರ ದೊರೆತಿತ್ತು. ಅದರಂತೆ ಕುಲಗುರು ಶ್ರೀ ಬ್ರಹ್ಮಾ ನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ 2017ರಲ್ಲಿ ನೂತನ ಶಿಲಾಮಯ ದೇವಾಲಯದ ನಿರ್ಮಾಣಕ್ಕೆ ಅಡಿಗಲ್ಲನ್ನಿಡಲಾಯಿತು.
ಅಂದಿನಿಂದ ನಿರಂತರವಾಗಿ ದೇವಾಲಯದ ನಿರ್ಮಾಣ ಕಾರ್ಯ ಆಡಳಿತ ಹಾಗೂ ಜೀರ್ಣೋದ್ಧಾರ ಕಮಿಟಿ ಉಸ್ತುವಾರಿಯಲ್ಲಿ ನಡೆಯುತ್ತಾ ಬಂದಿದ್ದು, ಇದೀಗ ಮುಕ್ತಾಯಗೊಂಡು ದೇವಾಲಯದ ಪುನರ್ ಪ್ರತಿಷ್ಠಾ ಮಹೋತ್ಸವಕ್ಕೆ ಸಜ್ಜುಗೊಂಡಿದೆ.
ಶಿಲಾಮಯ ದೇವಾಲಯದ ಶೈಲಿ: ದೇವಸ್ಥಾನವನ್ನು ಪ್ರಾಚೀನ ಹಿಂದೂ ದ್ರಾವಿಡ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದ್ದು ಸುಪ್ರಸಿದ್ಧ ವಾಸ್ತುಶಾಸ್ತ್ರ ತಜ್ಞ ಪ್ರಸಾದ ಮುನಿಯಂಗಳ ಕುಕ್ಕೆಸುಬ್ರಹ್ಮಣ್ಯ ಅವರ ಮಾರ್ಗದರ್ಶ ನದಲ್ಲಿಯೇ ನಿರ್ಮಾಣವಾಗಿದೆ. ಸುಂದರವಾದ ಕೆತ್ತನೆ, ಕುಸುರಿ ಕೆಲಸ ಎಲ್ಲವೂ ಸುಂದರವಾಗಿ ಮೂಡಿ ಬಂದಿದೆ. ಈ ಭಾಗದ ಪುಣ್ಯ ಕ್ಷೇತ್ರವಾಗಿ ಪ್ರವಾಸೀ ತಾಣವಾಗುವುದಕ್ಕೆ ಸಜ್ಜಾಗಿ ನಿಂತಿದೆ.
ಪರಿವಾರ ದೇವರು: ದೇವಾಲಯದ ಎದುರುಗಡೆ ಇರುವ ಸುಮಾರು 350 ವರ್ಷಗಳ ಹಳೆಯ ಅರಳೀ ಮರವನ್ನು ಹಾಗೆಯೇ ಇಟ್ಟುಕೊಳ್ಳಲಾಗಿದ್ದು ದೇವಾಲಯಕ್ಕೆ ಇದುವೇ ಮೆರಗು ನೀಡುತ್ತಿದೆ. ದೇವಾಲಯದ ಆವರಣದಲ್ಲಿರುವ ಸನ್ಯಾಸಿ ತುಳಸಿಯು ಅತ್ಯಂತ ಪವಿತ್ರವಾಗಿದ್ದು ಅನಾ ಕಾಲದಿಂದಲೂ ದೈವಿಕ ಶಕ್ತಿ ಹೊಂದಿದೆ. ವಿವಿಧ ಸಮಾಜದವರು ತಾವು ಮಾಡುವ ಹರಿಸೇವಾ ಕಾರ್ಯದ ಕಳಸ ಪ್ರತಿಷ್ಠಾಪನೆಯನ್ನು ಇದೇ ತುಳಸಿಯ ಮುಂಭಾಗದಲ್ಲಿ ಮಾಡುವುದು ತುಳಸಿಯ ದೈವಿಕ ಶಕ್ತಿಯ ಪ್ರತೀಕವಾಗಿದೆ. ಭಕ್ತಾದಿಗಳು ಬಲಿ ಪೂಜೆ ನೆರವೇರಿಸಲು ಕ್ಷೇತ್ರ ದೇವತೆ ಮಾರಿ ಬೊಮ್ಮನ ಸ್ಥಳವಿದ್ದು ಇದೂ ಕೂಡಾ ಆಸ್ತಿಕರ ಶಕ್ತಿ ಸ್ಥಳವಾಗಿದೆ.
-ಆರ್.ಕೆ. ಭಟ್