Advertisement

ಯುಕೆಪಿ ಪೂರ್ಣಗೊಳಿಸಲು ಸರ್ಕಾರ ಬದ್ಧ  

05:38 PM Feb 09, 2021 | Team Udayavani |

ಬೀಳಗಿ: ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಭೂಸ್ವಾಧೀನ, ನೀರಾವರಿ ಯೋಜನೆ  ಪೂರ್ಣಗೊಳಿಸಲು ಬದ್ಧವಾಗಿದ್ದು, ವಿಧಾನಸಭೆಯಲ್ಲಿ ಈ ಕುರಿತು ಸರ್ಕಾರದ ಮೇಲೆ ಒತ್ತಡ ತರಲಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಹನಮಂತ ನಿರಾಣಿ ಹೇಳಿದರು.

Advertisement

ಗಿರಗಾಂವ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು  ಮಾತನಾಡಿದರು. ಆಲಮಟ್ಟಿ ಜಲಾಶಯವನ್ನು ಈಗಿರುವ 519.60 ಮೀಟರ್‌ದಿಂದ 524.256 ಮೀಟರ್‌ಗೆ ಎತ್ತರಿಸಿದಾಗ ಮತ್ತೆ 22 ಗ್ರಾಮಗಳು ಮುಳುಗಡೆಯಾಗುತ್ತವೆ. ಸುಮಾರು 1.36 ಲಕ್ಷ ಎಕರೆ ಭೂಮಿ ಸ್ವಾಧೀನಗೊಳ್ಳಲಿದೆ. ಈ ಭೂಮಿಗೆ ಯೋಗ್ಯ ದರ ನೀಡಲು ಮನವಿ ಮಾಡಿದ್ದೇವೆ. 22 ಗ್ರಾಮಗಳ ಸುಮಾರು 25 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಪುನರ್‌ವಸತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೃಷ್ಣಾ ನ್ಯಾಯಾಧೀಕರಣದ ಅಂತಿಮ ತೀರ್ಪಿನ ಪ್ರಕಾರ ನಮಗೆ 130 ಟಿಎಂಸಿ ಅಡಿ ನೀರು ನೀರಾವರಿಗೆ  ಹಂಚಿಕೆಯಾಗಿದೆ. ಈ ನೀರನ್ನು ಬಳಸಿಕೊಂಡು ಉತ್ತರಕರ್ನಾಟಕದ ಸುಮಾರು 14 ಲಕ್ಷ ಎಕರೆ ಭೂಮಿಗೆ ನೀರಾವರಿ ಕಲ್ಪಿಸಲು ಸರ್ಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಅತಿಥಿ ಉಪನ್ಯಾಸಕರಿಗೆ ವೇತನ: ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಶಾಲಾ-ಕಾಲೇಜು ಆರಂಭಕ್ಕೆ ತೊಂದರೆಯಾಗಿತ್ತು. ಇದೀಗ ಹಲವು ಮುಂಜಾಗ್ರತಾ ಕ್ರಮ ಹಾಗೂ ಪಾಲಕರ ಒಪ್ಪಿಗೆಯೊಂದಿಗೆ ಆರಂಭಗೊಂಡಿವೆ. ಪರೀಕ್ಷೆಗೆ ಕೆಲವೇ ತಿಂಗಳು ಸಮಯಾವಕಾಶವಿದ್ದು, ವಿದ್ಯಾರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ಪರೀಕ್ಷೆಗೆ ಸಿದ್ಧಪಡಿಸಲು ವಿವಿಧ ಕಾಲೇಜುಗಳಲ್ಲಿ  ಖಾಲಿ ಇರುವ ಅತಿಥಿ ಉಪನ್ಯಾಸಕರ  ಭರ್ತಿ ಮಾಡಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ತಲಾಗಿದೆ. ಈ ಕುರತು ಸರ್ಕಾರವೂ ಸಕಾರಾತ್ಮವಾಗಿ ಸ್ಪಂದಿಸಿದ್ದು, ಗುತ್ತಿಗೆ ಆಧಾರದ ಅತಿಥಿ ಉಪನ್ಯಾಸಕರಿಗೆ ಐದು ತಿಂಗಳ ವೇತನ ಕೂಡ ಬಿಡುಗಡೆ ಮಾಡಿದೆ ಎಂದರು.

ಪಂಚಮಸಾಲಿ-ಕುರುಬ ಸಮಾಜಕ್ಕೆ ಮೀಸಲಾತಿ: ರಾಜ್ಯದಲ್ಲಿ ಕುರುಬ ಸಮಾಜ ಒಂದು ದೊಡ್ಡ  ಸಮುದಾಯವಾಗಿದೆ. ಈ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಹೋರಾಟ ನಡೆಯುತ್ತಿದೆ. ಈ ಹೋರಾಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

Advertisement

ಅಲ್ಲದೇ ಪಂಚಮಸಾಲಿ ಸಮಾಜ ಕೂಡ 2ಎಗೆ ಸೇರಿಸುವಂತೆ ಒತ್ತಾಯಿಸಿ ಸಮಾಜದ ಇಬ್ಬರು  ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಇದು ಕಳೆದ 26 ವರ್ಷಗಳ ಬೇಡಿಕೆಯಾಗಿದ್ದು, ಈ ಬೇಡಿಕೆಯನ್ನೂ ಸರ್ಕಾರ ಈಡೇರಿಸಬೇಕು. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ರಾಜ್ಯದ ಸಂಸದರೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರದ ಜತೆಗೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ :18ರಂದು ಜಮಖಂಡಿಯಲ್ಲಿ ರೈತರ ಸಮಾವೇಶ: ಸಿಂಧೂರ

ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಜಿಎಲ್‌ಬಿಸಿ ಯಡಹಳ್ಳಿ ಉಪ ಭಾಗದಿಂದ ಅಂದಾಜು 50 ಲಕ್ಷ ರೂ  ವೆಚ್ಚದ ಬಾಡಗಿ-ಗಿರಗಾಂವ, ಗಿರಗಾಂವ-ಹಂಚಿನಾಳವರಗೆ ರಸ್ತೆ ಮರು ನಿರ್ಮಾಣ, ಗಿರಗಾಂವದಲ್ಲಿ 50 ಲಕ್ಷ ರೂ ವಚ್ಚದ ಬಾಕಿ ಉಳಿದ ಬಾಡಗಿ-ಗಿರಗಾಂವ ರಸ್ತೆ ನಿರ್ಮಾಣ, ಹಂಚಿನಾಳದಲ್ಲಿ ಅಂದಾಜು 40 ಲಕ್ಷ ರೂ ವೆಚ್ಚದ ಹಂಚಿನಾಳದಿಂದ ಬಸವಣ್ಣ ದೇವರ ಗುಡಿಯವರೆಗೆ ರಸ್ತೆ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದರು. ಮುಖಂಡರಾದ ಜಿ.ಡಿ. ದೇಸಾಯಿ, ಮರಿಗೆಪ್ಪ ಯರಗಟ್ಟಿ, ಗ್ರಾಪಂ ಅಧ್ಯಕ್ಷ ಅಪ್ಪು ನಾಯ್ಕರ,  ರಾಚಪ್ಪ ವಾಲಿ, ಲಕ್ಷ್ಮಣ ದೊಡ್ಡಮನಿ, ಮಲ್ಲಪ್ಪ ಬಡಿಗೇರ, ಈರಪ್ಪ ಶೆಟ್ಟರ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next