Advertisement

ಹನುಮಂತನೆಂದರೆ ಬದುಕಿನ ಅದ್ಭುತ ಶಕ್ತಿ

04:33 PM Apr 16, 2022 | Team Udayavani |

ಹಿಂದೂ ಧರ್ಮದಲ್ಲಿ ಪ್ರಾಣಿಗಳನ್ನೂ ಗೌರವದಿಂದ ಕಾಣಲಾಗುತ್ತದೆ. ಇದರ ಪ್ರತೀಕವಾಗಿ ಗಣೇಶನಿಗೆ ಆನೆಯ ತಲೆ, ನರಸಿಂಹನಿಗೆ ಸಿಂಹ, ವರಾಹನಿಗೆ ಹಂದಿ ಹಾಗೂ ಹನುಮಂತ ಕೋತಿಯ ಮುಖವುಳ್ಳ ದೇವರಾಗಿದ್ದಾರೆ.

Advertisement

ರಾಮಾಯಣದಲ್ಲಿ ಪ್ರಮುಖ ಪಾತ್ರಧಾರಿ ಯಾಗಿರುವ ಹನುಮನಿಗೆ ವಾಯುಪುತ್ರ, ಆಂಜನೇಯ, ಕಪಿವೀರ, ಅಂಜನಿ ಪುತ್ರ, ಪವನಸುತ, ಭಜರಂಗಬಲಿ, ಬಲಿಭೀಮ, ಸಂಕಟ ಮೋಚನಾ, ಮಾರುತಿ, ರುದ್ರ ಎಂಬ ಹೆಸರುಗಳಿವೆ. ಜಾತಿ ಮತ ಪಂಥಗಳನ್ನು ಮೀರಿ ಆರಾಧಿಸಲ್ಪಡುವ ಆಂಜನೇಯನಿಗೆ ತುಳಸಿಮಾಲೆ ಬಲುಪ್ರಿಯ. ದೇಹಬಲ, ಮನೋಬಲ, ಬುದ್ಧಿಬಲ, ತಪೋಬಲ, ಯೋಗಶಕ್ತಿಯಲ್ಲೂ ಪರಿಣಿತನಾಗಿದ್ದಾನೆ.

ಪ್ರತಿ ವರ್ಷದಂತೆ ಚೈತ್ರ ಮಾಸದ ಹುಣ್ಣಿಮೆ ಯಂದು ಅಂದರೆ ಎ. 16ರಂದು ಹನುಮಾನ್‌ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಹನುಮಂತನು ತಾಯಿ ಅಂಜನಿಯ ಗರ್ಭದಿಂದ ಜನಿಸಿದನು ಎನ್ನುವ ಉಲ್ಲೇಖವಿದೆ. ಹನುಮ ಜಯಂತಿಯನ್ನು ಕೆಲವೆಡೆ ಚೈತ್ರ ಮಾಸದ ಪೂರ್ತಿ ತಿಂಗಳು ಆಚರಿಸಲಾಗುತ್ತದೆ. ಪ್ರತಿ ವರ್ಷ ಋತು, ಮಾಸ ಆಧರಿಸಿ ಹನುಮ ಜಯಂತಿ ಆಚರಿಸಲಾಗುತ್ತದೆ.

ಮುಖ್ಯವಾಗಿ ಉತ್ತರ ಭಾರತದಲ್ಲಿ ಚೈತ್ರ ಪೂರ್ಣಿಮಾ ದಿನದಂದೇ ಪೂಜಿತಗೊಳ್ಳುತ್ತಾನೆ ಹನುಮ.

ಶಕ್ತಿ, ಉತ್ಸಾಹ, ಸಾಹಸಕ್ಕೆ ಪರ್ಯಾಯ ನಾಮ ಆಂಜನೇಯ. ಹೀಗಾಗಿ ಬ್ರಹ್ಮಚಾರಿಗಳು, ಬಾಡಿ ಬಿಲ್ಡರ್ಸ್‌, ಕಸರತ್ತಿನಲ್ಲಿ ತೊಡಗಿರುವ ಪೈಲ್ವಾನ್‌ಗಳು ಹನುಮಾನ್‌ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಅದ್ಧೂರಿಯಾಗಿಯೇ ಆಚರಿಸುತ್ತಾರೆ.

Advertisement

ಹನುಮಾನ್‌ ಜಯಂತಿಯಂದು ಪವಿತ್ರ ನದಿ, ಕೊಳಗಳಲ್ಲಿ ಸ್ನಾನ ಮಾಡಿ ಸಿಂಧೂರ ತಿಲಕ, ಲಡ್ಡು, ಬಾಳೆಹಣ್ಣುಗಳನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಈ ದಿನ ಹನುಮಂತನನ್ನು ಮೆಚ್ಚಿಸಲು ಹನುಮಾನ್‌ ಚಾಲೀಸ, ಸುಂದರ ಕಾಂಡ, ಭಜರಂಗ ಬಾನ್‌ ಮತ್ತು ರಾಮಾಯಣವನ್ನು ಪಠಿಸಲಾಗುತ್ತದೆ. ಹನುಮಂತನಿಗೆ ಮಲ್ಲಿಗೆ ಎಣ್ಣೆಯಲ್ಲಿ ಸಿಂಧೂರವನ್ನು ಬೆರೆಸಿ ಹಚ್ಚಲಾಗುತ್ತದೆ. ಮಲ್ಲಿಗೆ ಅಥವಾ ಸಾಸಿವೆ ಎಣ್ಣೆಯಿಂದ ದೀಪ ಬೆಳಗಲಾಗುತ್ತದೆ.

ಹಿಂದಿ ಭಾಷೆಯಲ್ಲಿ ತುಳಸಿದಾಸರು ರಚಿಸಿರುವ ಹನುಮಾನ್‌ ಚಾಲೀಸಾದಲ್ಲಿ ಅವರು ಹನುಮನ ಗುಣಗಾನವನ್ನು ಮಾಡುತ್ತಾರೆ. ನೀನು ವಿದ್ಯಾ ಸಾಗರ , ಗುಣಾ ಸಾಗರ, ನಿನ್ನ ತೇಜಸ್ಸು ಮೂರುಲೋಕಗಳನ್ನು ಬೆಳಗುವುದು, ಪರಾಕ್ರಮಶಾಲಿ, ಅಂಜನಾ ಕೇಸರಿ ಪುತ್ರ, ರವಿಯನ್ನು ಹಣ್ಣೆಂದು ಬಯಸಿ ಸಮೀಪಿಸಿದವನು, ನಿನ್ನನ್ನು ವರ್ಣಿಸಲಸಾಧ್ಯ…ಎಂದು ಬಣ್ಣಿಸುತ್ತಾರೆ.

ರಾಮಾಯಣದಲ್ಲಿ ಹನುಮಂತ

ರಾಮಾಯಣ ಎಂದಾಗ ಸೀತಾರಾಮ ಲಕ್ಷ್ಮಣರೊಂದಿಗೆ ನೆನಪಾಗುವ ಇನ್ನೊಂದು ಪಾತ್ರ ಹನುಮಂತನದ್ದು. ಸೀತೆಯನ್ನು ಕಾಣದೆ ಕಂಗಾಲಾದ ರಾಮನಿಗೆ ತಾನು ಮಾತೆಯನ್ನು ಹುಡುಕಿಕೊಡುವೆ ಎಂದು ಆಶ್ವಾಸನೆ ಕೊಡುವಾಗ ರಾಮ ಹನುಮಂತನನ್ನು ಅಪ್ಪಿದ ದೃಶ್ಯವಾಗಿರಬಹುದು, ಸಮುದ್ರ ದಾಟಿ ಲಂಕೆ ತಲುಪಿ ರಾವಣನಿಗೆ ತನ್ನ ಶಕ್ತಿಯ ಪ್ರದರ್ಶನ ನೀಡಿ, ಅಶೋಕವನದಲ್ಲಿದ್ದ ಸೀತೆಗೆ ಮುದ್ರೆಯುಂಗರ ನೀಡಿದ್ದು, ರಾಮನಿಗೆ ಸೀತೆಯ ಚೂಡಾಮಣಿಯನ್ನು ಕೊಟ್ಟು ಧೈರ್ಯ ತುಂಬಿದ್ದು, ಯುದ್ಧದ ವೇಳೆ ಮೂರ್ಛೆ ಹೋದ ಲಕ್ಷ್ಮಣನ ಜೀವ ಉಳಿಸಲು ಸಂಜೀವಿನಿ ಪರ್ವತ ತಂದಿರುವ ದೃಶ್ಯಗಳು ಕಣ್ಣಮುಂದೆ ಸುಳಿಯುತ್ತವೆ.

ರಾಮನ ಪಟ್ಟಾಭಿಷೇಕದ ವೇಳೆ ಸೀತೆಯು ಹನುಮಂತನ ಭಕ್ತಿ ಪ್ರೀತಿಗೆ ಸಂತುಷ್ಟಳಾಗಿ ಮುತ್ತಿನ ಹಾರವನ್ನು ಉಡುಗೊರೆಯಾಗಿ ಕೊಟ್ಟಾಗ ಹನುಮಂತ ಒಂದೊಂದು ಮುತ್ತನ್ನು ಕಚ್ಚಿ ತುಂಡು ಮಾಡಿ ಎಸೆಯುತ್ತಾನೆ. ಇದಕ್ಕೆ ಕಾರಣವೇನೆಂದು ಕೇಳಿದ ಸೀತೆಗೆ ಹನುಮಂತನು ರಾಮನಿಲ್ಲದ ವಸ್ತು ತನಗೆ ಬೇಡ ಎನ್ನುತ್ತಾನೆ.

ಅಲ್ಲದೆ ಹನುಮಂತ ತನ್ನ ಹೃದಯ ಸೀಳಿ ರಾಮನನ್ನು ಹುಡುಕಲು ರಾಮ ಅವನ ಭಕ್ತಿಗೆ ಮೆಚ್ಚಿ ಅವನ ಹೃದಯದಲ್ಲಿ ಸ್ಥಾಪಿತನಾಗುತ್ತಾನೆ. ಭಕ್ತಿ ಎಂದರೆ ಹನುಮಂತನ ಭಕ್ತಿ ಅಂದಿಗೂ, ಇಂದಿಗೂ ಎಂದೆಂದಿಗೂ ಶಾಶ್ವತ. ತ್ರೇತಾಯುಗದ ಹನುಮಂತ ದ್ವಾಪರದಲ್ಲಿ ಭೀಮನನ್ನು ಸಂಧಿಸುತ್ತಾನೆ. ಕೃಷ್ಣ ನ ರಥದ ಧ್ವಜದಲ್ಲಿ ಕಂಡುಬರುತ್ತಾನೆ.

ಶಿವನ ಅವತಾರ ಎನ್ನುವ ನಂಬಿಕೆ

ಹನುಮಂತನನ್ನು ಶಿವನ 11ನೇ ಅವತಾರ ಎನ್ನಲಾಗುತ್ತದೆ. ಚಿರಂಜೀವಿ ಆಂಜನೇಯ ಹುಟ್ಟಿದ ಸ್ಥಳ, ದಿನಾಂಕ, ಜಯಂತಿ ಆಚರಣೆಯಲ್ಲಿ ಹಲವು ಗೊಂದಲಗಳೂ ಇವೆ. ರಾಮಾಯಣ ಹಾಗೂ ಉತ್ತರ ಭಾರತದಲ್ಲಿ ಆಂಜನೇಯ ಕೃಷ್ಣ ಚತುರ್ದಶಿ ಅಂದರೆ ಕಾರ್ತಿಕ ಮಾಸದ ಆರಂಭಕ್ಕೂ ಮೊದಲು ಜನಿಸಿದನೆಂದು ಹೇಳಲಾಗುತ್ತದೆ. ಇನ್ನೊಂದು ನಂಬಿಕೆ ಪ್ರಕಾರ ಚೈತ್ರ ಮಾಸದ ಶುಕ್ಲಪೌರ್ಣಮಿಯಂದು ಜನಿಸಿದ್ದಾನೆ ಎನ್ನಲಾಗುತ್ತದೆ. ಹೀಗಾಗಿ ಹನುಮಾನ್‌ ಜಯಂತಿಯನ್ನು ವರ್ಷದಲ್ಲಿ ಎರಡು ಬಾರಿ ಆಚರಿಸಲಾಗುತ್ತದೆ. ಆಂಧ್ರ ಪ್ರದೇಶ ತೆಲಂಗಾಣದಲ್ಲಿ ಹನುಮಾನ್‌ ಜಯಂತಿಯನ್ನು ವೈಶಾಖ ಮಾಸ, ಕೃಷ್ಣಪಕ್ಷ ಪೌರ್ಣಮಿಯಂದು ಆಚರಿಸಿದರೆ, ತಮಿಳುನಾಡಿನಲ್ಲಿ ಮಾರ್ಗಶಿರ ಅಮಾವಾಸ್ಯೆಯಂದು, ಕರ್ನಾಟಕದಲ್ಲಿ ಮಾರ್ಗಶಿರ ಮಾಸದ ಶುಕ್ಲಪಕ್ಷದ ತ್ರಯೋದಶಿಯಂದು ಆಚರಿಸಲಾಗುತ್ತದೆ. ಹುಟ್ಟಿದ ಸ್ಥಳದಲ್ಲೂ ಎರಡು ಉಲ್ಲೇಖಗಳಿವೆ. ಒಂದು ಹಿನ್ನೆಲೆ ಪ್ರಕಾರ ಕರ್ನಾಟಕದ ಐತಿಹಾಸಿಕ ಸ್ಥಳ ಹಂಪಿಯನ್ನು ರಾಮಾಯಣ ಕಾಲದಲ್ಲಿ ಕಿಷ್ಕಿಂಧೆ ಎನ್ನಲಾಗುತ್ತಿತ್ತು. ಸುಗ್ರೀವ ಅಲ್ಲಿನ ರಾಜನಾಗಿದ್ದ. ಹನುಮಂತನ ತಂದೆ ಕೇಸರಿ ಅಲ್ಲಿ ವಾಸವಾಗಿದ್ದ. ಇನ್ನೊಂದು ದಾಖಲೆ ಪ್ರಕಾರ ಗುಜರಾತ್‌ನ ಡಾಂಗ್‌ ಜಿಲ್ಲೆಯ ಗುಹೆಯಲ್ಲಿ ಅಂಜನಿಗೆ ಪುತ್ರನಾಗಿ ಆಂಜನೇಯ ಜನಿಸಿದ ಎನ್ನುತ್ತಾರೆ ಸ್ಥಳೀಯರು.

ಜಯಾಮೂರ್ತಿ, ಇಟಲಿ

Advertisement

Udayavani is now on Telegram. Click here to join our channel and stay updated with the latest news.

Next