ಆಳಂದ: ಏ.9ರಿಂದ 17ರ ವರೆಗೆ ನಡೆಯ ಲಿರುವ ಪಟ್ಟಣದ ಗ್ರಾಮ ದೇವತಾ ಹನುಮಾನ ಜಾತ್ರೆಗೆ ಪುರಸಭೆಯಿಂದ ನೀರು, ಸ್ವಚ್ಛತೆಯಂತ ಮೂಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ದೇವಸ್ಥಾನ ಆವರಣಕ್ಕೆ ಗುರುವಾರ ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ, ವಾರ್ಡ್ ಸದಸ್ಯ ಶ್ರೀಶೈಲ ಪಾಟೀಲ ಅವರ ತಂಡ ಭೇಟಿ ನೀಡಿ, ಸಿದ್ಧತೆ ಕುರಿತು ಮಾಹಿತಿ ಕಲೆಹಾಕಿದರು.
ಏ.9ರಂದು ಸಪ್ತಾಹ ನಡೆಯಲಿದೆ. ದವನದ ಹುಣ್ಣಿಮೆ ದಿನ ಏ. 16ರಂದು ರಥೋತ್ಸವ, 17ರಂದು ಜಂಗೀ ಪೈಲ್ವಾನರ ಕುಸ್ತಿಗಳು ನೆರವೇರಲಿವೆ. ದೇವಸ್ಥಾನ ಹಿಂಬದಿಯಲ್ಲಿ ಇರುವ ದೊಡ್ಡ ನಾಲೆಯ ವಿಲೇವಾರಿ, ದೇವಸ್ಥಾನ ಬಡಾವಣೆಯಲ್ಲಿ ಸ್ವಚ್ಛತೆ ಕಲ್ಪಿಸಬೇಕು. ಜಾತ್ರೆ ಅಂಗವಾಗಿ ಬರುವ ಭಕ್ತಾದಿಗಳಿಗೆ ಹಾಗೂ ಕುಸ್ತಿಯ ದಿನದಂದು ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಎಂದು ವಾರ್ಡ್ ಸದಸ್ಯ ಶ್ರೀಶೈಲ ಪಾಟೀಲ ಅಧ್ಯಕ್ಷರಿಗೆ ಮತ್ತು ಮುಖ್ಯಾಧಿಕಾರಿಗಳ ಗಮನಕ್ಕೆ ತಂದರು.
ದೇವಸ್ಥಾನದಿಂದ ಬಸವಣ್ಣಕಟ್ಟೆ ವರೆಗೆ ಸಾಗುವ ರಥೋತ್ಸವ ಮಾರ್ಗ ತೀರಾ ಮಲೀನಾಗಿದೆ. ಈ ಮಾರ್ಗವು ಮುಂದೆ ಹಳ್ಳಿಸಲಗರ, ತಾಂಡಾ ಮತ್ತು ಎಚ್‌ಕೆಇ ಪದವಿ ಕಾಲೇಜಿಗೆ ಹೋಗುತ್ತದೆ. ಈ ರಸ್ತೆ ಬದಿಯಲ್ಲಿ ಜಾಲಿ ಕಂಟಿಗಳು ಬೆಳೆದು ಜನರ ಓಡಾಟಕ್ಕೆ ತೊಂದರೆ ಆಗುತ್ತಿದೆ. ಮುಳ್ಳು ಕಂಟಿ ತೆರವುಗೊಳಿಸಬೇಕು. ಜಾತ್ರೆ ಮುಗಿಯವ ವರೆಗೂ ನೈರ್ಮಲ್ಯ ನಿರೀಕ್ಷಕರೊಬ್ಬರನ್ನು ನೇಮಿಸಿ ನೀರು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈ ಮುನ್ನ ದೇವಸ್ಥಾನ ಬಳಿಯ ಕಾಳಿಕಾದೇವಿ ಜಾತ್ರೆ ನಡೆಯುತ್ತದೆ. ಚರಂಡಿ ವಿಲೇವಾರಿ ಮತ್ತು ಬೀದಿ ಸ್ವತ್ಛತೆಗೆ ಸಿಬ್ಬಂದಿ ನಿಯೋಜಿಸಿ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ಅಧ್ಯಕ್ಷೆ ರಾಜಶ್ರೀ ಖಜೂರಿ, ಜಾತ್ರೆಯಲ್ಲಿ ಸಕಾಲಕ್ಕೆ ಕಸ ವಿಲೇವಾರಿ ಕೈಗೊಳ್ಳಬೇಕು. ಕುಡಿಯಲು ಶುದ್ಧ ನೀರು ಮತ್ತು ಕುಸ್ತಿಯ ದಿನದಂದು ಮೈದಾನದಲ್ಲಿ ನೀರಿನ ಟ್ಯಾಂಕ್ ಆಯೋಜನೆ, ಬೀದಿ ದೀಪಗಳು ಅಳವಡಿಸಬೇಕು ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು. ನೈರ್ಮಲ್ಯ ನಿರೀಕ್ಷಕ ರಾಘ ವೇಂದ್ರ, ಲಕ್ಷ್ಮಣ ತಳವಾರ ಇದ್ದರು.