ಮುಂಬಯಿ: ದಂಪತಿಯನ್ನು ಬಂಧಿಸಲು ಬಂದ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಮಹಾರಾಷ್ಟ್ರ ಸಂಸದ ನವನೀತ್ ರಾಣಾ ಮತ್ತು ಆಕೆಯ ಪತಿ ರವಿ ರಾಣಾ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.
ಮುಂಬೈನಲ್ಲಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸದ ಮಾತೋಶ್ರೀ ಮುಂದೆ ಪ್ರತಿಭಟನೆ ನಡೆಸಿ ಹನುಮಾನ್ ಚಾಲೀಸಾ ಪಠಿಸುವುದಾಗಿ ದಂಪತಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, “ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ವೈಯಕ್ತಿಕ ನಿವಾಸದಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಕೆಲವು ಧಾರ್ಮಿಕ ಶ್ಲೋಕಗಳನ್ನು ಪಠಿಸುವ ಇಂತಹ ಘೋಷಣೆಯು ಖಂಡಿತವಾಗಿಯೂ ಇನ್ನೊಬ್ಬ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ” ಎಂದು ಅಭಿಪ್ರಾಯಪಟ್ಟಿದೆ.
“ಎರಡನೆಯದಾಗಿ, ಸಾರ್ವಜನಿಕ ಬೀದಿಗಳಲ್ಲಿ ನಿರ್ದಿಷ್ಟ ಧಾರ್ಮಿಕ ಪದ್ಯವನ್ನು ಪಠಿಸಲಾಗುವುದು ಎಂದು ಘೋಷಣೆ ಮಾಡಿದರೆ, ಅಂತಹ ಕೃತ್ಯವು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುತ್ತದೆ ಎಂಬ ಆತಂಕವನ್ನು ರಾಜ್ಯವು ಸಮರ್ಥಿಸುತ್ತದೆ” ಎಂದು ನ್ಯಾಯಾಧೀಶರು ಸೇರಿಸಿದ್ದಾರೆ.
ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಅವರು ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ರಾಜ್ಯಕ್ಕೆ ಗಡುವು ನೀಡಿದ ನಂತರ ರಾಜ್ಯದಲ್ಲಿ ರಾಜಕೀಯ ಸಂಘರ್ಷ ಬೆಳೆದಿದೆ.
ನ್ಯಾಯಾಲಯವು ರಾಣಾ ದಂಪತಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಿದ ಬಳಿಕ, ಸಂಸದೆ ನವನೀತ್ ರಾಣಾ ಅವರನ್ನು ಮುಂಬೈನ ಬೈಕುಲ್ಲಾ ಜೈಲಿಗೆ ಮತ್ತು ಅವರ ಪತಿ ಶಾಸಕ ರವಿ ರಾಣಾ ಅವರನ್ನು ನವಿ ಮುಂಬೈನ ತಲೋಜಾ ಜೈಲಿನಲ್ಲಿಡಲಾಗಿದೆ.