ಮಣಿಪಾಲ: ರಾಜ್ಯ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕರೆಯಂತೆ ಶುಕ್ರವಾರ ಜಿಲ್ಲೆಯ ವಿಹಿಂಪ, ಬಜರಂಗದಳದ ಪ್ರಮುಖರು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಮುಂಭಾಗದಲ್ಲಿ ಹನುಮಾನ್ ಚಾಲೀಸ್ ಪಠಿಸಿ, ಸರಕಾರದ ವಿರುದ್ಧ ಧರಣಿ ನಡೆಸಿದರು.
ಬಜರಂಗದಳ ಪ್ರಾಂತ ಸಂಯೋಜಕ ಸುನಿಲ್ ಕೆ.ಆರ್. ಮಾತನಾಡಿ, ಮಂಡ್ಯದ ಕೆರೆಗೋಡಿನಲ್ಲಿ ಹನುಮ ಧ್ವಜ ತೆಗೆದಿರುವುದು ಹಿಂದೂ ಸಮಾಜಕ್ಕೆ ಮಾಡಿದ ಅಪಮಾನ ಎಂದು ಕಿಡಿ ಕಾರಿದರು.
ಧ್ವಜವನ್ನು ಪುನಃ ಹಾಕಬೇಕು ಎಂಬ ಆಗ್ರಹವನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮಾಡಿದ್ದೇವೆ. ಸರಕಾರ ನಮ್ಮ ಮನವಿಗೆ ಸ್ಪಂದಿಸಿ ಹನುಮಧ್ವಜ ಹಾಕಬೇಕು. ಇಲ್ಲವಾದರೆ “ಮಂಡ್ಯ ಚಲೋ’ ಕಾರ್ಯಕ್ರಮ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರು ಮನವಿ ಸ್ವೀಕರಿಸಿ, ಸರಕಾರಕ್ಕೆ ಕಳುಹಿಸುವುದಾಗಿ ತಿಳಿಸಿದರು.
ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಸಹ ಕಾರ್ಯದರ್ಶಿ ಸುರೇಂದ್ರ ಕೋಟೇಶ್ವರ, ಉಪಾಧ್ಯಕ್ಷ ಅಶೋಕ್ ಪಾಲಡ್ಕ, ಬಜರಂಗದಳ ಜಿಲ್ಲಾ ಸಂಯೋಜಕ ಚೇತನ್ ಪೇರಲ್ಕೆ, ಸಹ ಸಂಯೋಜಕ ಗುರು ಮತ್ತು ಜಿಲ್ಲಾ ಪ್ರಮುಖರು ಉಪಸ್ಥಿತರಿದ್ದರು.