Advertisement

Arrested: ಭಜನೆ ಕೇಸ್‌; ಹಲ್ಲೆ ಮಾಡಿದ ಅಪ್ರಾಪ್ತ ಸೇರಿ 6 ಮಂದಿ ಬಂಧನ

09:56 AM Mar 20, 2024 | Team Udayavani |

ಬೆಂಗಳೂರು: ಬೆಂಗಳೂರಿನ ನಗರ್ತಪೇಟೆಯ ಅಂಗಡಿಯಲ್ಲಿ ಹನುಮಾನ್‌ ಚಾಲೀಸಾ ಹಾಕಿದ ಮೊಬೈಲ್‌ ಅಂಗಡಿ ಮಾಲೀಕನಿಗೆ ಹಲ್ಲೆ ನಡೆಸಿದ ಅಪ್ರಾಪ್ತ ಸೇರಿ ದಂತೆ ಆರು ಮಂದಿಯನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಕಬ್ಬನ್‌ಪೇಟೆ ನಿವಾಸಿ ಸುಲೇಮಾನ್‌, ಶಹನವಾಜ್‌, ರೋಹಿತ್‌, ಡ್ಯಾನಿಷ್‌, ತರುಣ್‌ ಅಲಿಯಾಸ್‌ ದಡಿಯಾ ಹಾಗೂ ಮತ್ತೋರ್ವ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ. ಬಂಧಿತ ಐವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು ಸದ್ಯ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಅಪ್ರಾಪ್ತನೊಬ್ಬನನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ ಎಂದು ಹಲಸೂರು ಗೇಟ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಮೂವರು ಆರೋಪಿಗಳನ್ನು ಮೊದಲು ಬಂಧಿಸಲಾಗಿತ್ತು. ನಂತರ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಹಲ್ಲೆ ನಡೆಸಿರುವುದರನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್‌ ಮೂಲ ತಿಳಿಸಿವೆ.

ತನಿಖೆಯಲ್ಲಿ ತಿಳಿದು ಬಂದಿದ್ದು ಏನು ?: ಭಾನುವಾರ ಸಂಜೆ 6.15ರಲ್ಲಿ ಆರು ಆರೋಪಿಗಳು ನಗರ್ತ ಪೇಟೆಯಲ್ಲಿ ಮಸೀದಿ ಕಡೆಗೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಕೃಷ್ಣಾ ಟೆಲಿಕಾಂ ಮುಂದೆ ಹಾದು ಹೋಗಿದ್ದರು. ಅಲ್ಲಿ ಮುಖೇಶ್‌ ತನ್ನ ಮೊಬೈಲ್‌ ಅಂಗಡಿಯಲ್ಲಿ ಜೋರಾದ ಶಬ್ಧದಲ್ಲಿ ಭಕ್ತಿಗೀತೆ ಹಾಕಿದ್ದ. ಇದನ್ನು ಕೇಳಿದ ಆರೋಪಿಗಳು ಆತನ ಅಂಗಡಿಗೆ ತೆರಳಿ ಸೌಂಡ್‌ ಕಡಿಮೆ ಮಾಡುವಂತೆ ಸೂಚಿಸಿದ್ದರು.

ಈ ವೇಳೆ ಆಕ್ರೋಶಗೊಂಡ ಮುಖೇಶ್‌ ನಾನು ಯಾಕೆ ಸೌಂಡ್‌ ಕಡಿಮೆ ಮಾಡಲಿ? ನನ್ನ ಅಂಗಡಿ, ನನ್ನ ಇಷ್ಟ ಎಂದು ಹೇಳಿದ್ದಾನೆ. ಮಸೀದಿಯಲ್ಲಿ ಆಜಾನ್‌ ಕೂಗುತ್ತಾರೆ. ಹೀಗಾಗಿ ಶಬ್ಧ ಕಡಿಮೆ ಮಾಡುವಂತೆ ಹೇಳಿದ್ದರು. ಆಗ ತಾನು ಕಡಿಮೆ ಮಾಡಲ್ಲ ಸ್ಪೀಕರ್‌ ಸೌಂಡ್‌ ಜೋರಾಗಿ ಇಟ್ಟರೆ ಜನರಿಗೆ ಗೊತ್ತಾಗುವುದು ಎಂದು ಮುಖೇಶ್‌ ಮಾತಿನ ತಿರುಗೇಟು ನೀಡಿದ್ದ. ಈ ವಿಚಾರವಾಗಿ ಮುಖೇಶ್‌ ಮತ್ತು ಆರೋಪಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.

Advertisement

ಆರೋಪಿಗಳಲ್ಲಿ ಪೈಕಿ ಓರ್ವ ಮುಖೇಶ್‌ ಕೊರಳ ಪಟ್ಟಿ ಹಿಡಿದು ಒಂದೇಟು ಹೊಡೆದು ಎಚ್ಚರಿಕೆ ಕೊಟ್ಟಿದ್ದ. ಇದಕ್ಕೆ ಮುಖೇಶ್‌ ಪ್ರತಿರೋಧ ತೋರಿದಾಗ ಆರೋಪಿಗಳ ಗುಂಪು ಮುಖೇಶ್‌ನನ್ನು ಹೊರಗೆ ಏಳೆದುಕೊಂಡು ಹೋಗಿ ಹಲ್ಲೆ ಮಾಡಿದೆ ಎಂಬುದು ಆರೋಪಿಗಳ ವಿಚಾರಣೆ ನಡೆಸಿದಾಗ ಪೊಲೀಸ್‌ ತನಿಖೆಯಲ್ಲಿ ಕಂಡು ಬಂದಿದೆ.

ಇನ್ನು ಮುಖೇಶ್‌ ಕಳೆದ ಮೂರು ತಿಂಗಳ ಹಿಂದೆ ಮೊಬೈಲ್‌ ಅಂಗಡಿ ತೆರೆದಿದ್ದ. ಈ ಹಿಂದೆಯೂ ಚಾರ್ಜರ್‌ ವಿಚಾರಕ್ಕೆ ಕೆಲವು ಹುಡುಗರು ಹಾಗೂ ಮುಖೇಶ್‌ ನಡುವೆ ಸಣ್ಣ ಜಗಳ ನಡೆದಿತ್ತು ಎಂದು ತಿಳಿದು ಬಂದಿದೆ.

ಅಪರಾಧ ಹಿನ್ನೆಲೆಯುಳ್ಳ ಆರೋಪಿಗಳು? :

ಪ್ರಮುಖ ಆರೋಪಿ ಸುಲೇಮಾನ್‌ ಬಾಡಿಗೆ ವಾಹನದಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸುಲೈಮಾನ್‌ 2018, 2023ರಲ್ಲಿ ಅಪಹರಣ, ಸುಲಿಗೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ. ಷಹನವಾಜ್‌ ಕೆಲಸ ಇಲ್ಲದೇ, ಸಣ್ಣ-ಪುಟ್ಟ ಕೆಲಸ ಹುಡುಕುತ್ತಿದ್ದ. ರೋಹಿತ್‌ ಮೆಡಿಕಲ್‌ ಸ್ಟೋರ್‌ಗಳಿಗೆ ಔಷಧ ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದ. ತರುಣ್‌ ಖಾಸಗಿ ಆಸ್ಪತ್ರೆಯೊಂದರಲ್ಲಿ ವಾರ್ಡ್‌ ಬಾಯ್‌ ಆಗಿದ್ದ. ಡ್ಯಾನಿಷ್‌ ಸಣ್ಣ-ಪುಟ್ಟ ಕೆಲಸ ಮಾಡುತ್ತಿದ್ದ. ಸುಲೇಮಾನ್‌ ಮತ್ತು ಗ್ಯಾಂಗ್‌ ಇತ್ತೀಚೆಗೆ ಹೋಟೆಲ್‌ವೊಂದರ ಮಾಲೀಕ ಸತೀಶ್‌ ಎಂಬುವವರ ಮೇಲೆ ಇದೇ ಗ್ಯಾಂಗ್‌ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಆರೋಪಿಗಳ ಪೈಕಿ ಕೆಲವರು ಸತೀಶ್‌ ಅವರ ಹೋಟೆಲ್‌ಗೆ ಹೋಗಿ ಉಚಿತವಾಗಿ ಉಪಹಾರ ಕೊಡುವಂತೆ ದಮ್ಕಿ ಹಾಕಿರುವ ಆರೋಪ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next