ಹೈದರಾಬಾದ್: ಟೀಂ ಇಂಡಿಯಾದ ಸಿಡ್ನಿ ಟೆಸ್ಟ್ ಮ್ಯಾಚ್ ಹೀರೊ ಹನುಮ ವಿಹಾರಿ ಅವರು ಇನ್ನು ಮುಂದೆ ಆಂಧ್ರ ಪ್ರದೇಶದ ಪರವಾಗಿ ಆಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಆಂಧ್ರಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ವಿಹಾರಿ, ಆಟಗಾರನೊಂದಿಗಿನ ಜಗಳದ ಬಳಿಕ ನನಗೆ ನಾಯಕತ್ವಕ್ಕೆ ರಾಜೀನಾಮೆ ನೀಡುವಂತೆ ಕೇಳಲಾಯಿತು. ಆ ಆಟಗಾರನ ತಂದೆ ‘ರಾಜಕಾರಣಿ’ ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆಗೆ ದೂರು ನೀಡಿದ್ದರು ಎಂದು ಹೇಳಿದ್ದಾರೆ.
“ಬೆಂಗಾಲದ ವಿರುದ್ಧದ ಮೊದಲ ಪಂದ್ಯದಲ್ಲಿ ನಾನು ನಾಯಕನಾಗಿದ್ದೆ. ಆ ಆಟದ ಸಮಯದಲ್ಲಿ ನಾನು 17 ನೇ ಆಟಗಾರನ ಮೇಲೆ ಕೂಗಾಡಿದ್ದೆ. ಅವನು ತನ್ನ ತಂದೆಗೆ (ರಾಜಕಾರಣಿಯಾಗಿದ್ದ) ದೂರು ನೀಡಿದ್ದ, ಪ್ರತಿಯಾಗಿ ಅವರ ತಂದೆ ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಸೋಸಿಯೇಷನ್ ಗೆ ಕೇಳಿದರು. ಬಂಗಾಳ ವಿರುದ್ದದ ಪಂದ್ಯದಲ್ಲಿ ನಾವು ಗೆದ್ದರೂ, ನನ್ನ ಯಾವುದೇ ತಪ್ಪು ಇಲ್ಲದೆ ಹೋದರೂ ರಾಜೀನಾಮೆ ಕೊಡಲು ನನ್ನಲ್ಲಿ ಕೇಳಲಾಯಿತು. ನಾನು ವೈಯಕ್ತಿಕವಾಗಿ ಆ ಆಟಗಾರನಿಗೆ ಏನೂ ಹೇಳಿರಲಿಲ್ಲ. ಆದರೆ ಕಳೆದ ಏಳು ವರ್ಷಗಳಲ್ಲಿ ಐದು ಬಾರಿ ತಂಡವನ್ನು ನಾಕೌಟ್ ಗೆ ತಲುಪಿಸಿದ, ತಂಡಕ್ಕೆ ಎಲ್ಲವನ್ನೂ ಕೊಟ್ಟ ಆಟಗಾರನಿಗಿಂತ ಆ ಆಟಗಾರನೇ ಮಂಡಳಿಗೆ ಪ್ರಿಯವಾದ. ನಾನು ಮುಜುಗರ ಅನುಭವಿಸಿದೆ, ಆದರೆ ನಾನು ಆಟ ಮತ್ತು ನನ್ನ ತಂಡವನ್ನು ಗೌರವಿಸುವ ಏಕೈಕ ಕಾರಣದಿಂದ ಈ ಋತುವಿನಲ್ಲಿ ಆಟವಾಡುವುದನ್ನು ಮುಂದುವರೆಸಿದೆ” ಎಂದು ವಿಹಾರಿ ಬರೆದುಕೊಂಡಿದ್ದಾರೆ.
“ದುಃಖದ ಭಾಗವೆಂದರೆ ಆಟಗಾರರು ತಾವು ಹೇಳುವುದನ್ನು ಕೇಳಬೇಕು ಮತ್ತು ಅವರ ಕಾರಣದಿಂದಾಗಿ ಆಟಗಾರರು ಇದ್ದಾರೆ ಎಂದು ಅಸೋಸಿಯೇಷನ್ ಭಾವಿಸುತ್ತದೆ. ನಾನು ಅವಮಾನ ಮತ್ತು ಮುಜುಗರವನ್ನು ಅನುಭವಿಸಿದೆ. ಆದರೆ ನಾನು ಅದನ್ನು ಇಂದಿನವರೆಗೂ ವ್ಯಕ್ತಪಡಿಸಿಲ್ಲ. ನಾನು ನನ್ನ ಆತ್ಮಗೌರವವನ್ನು ಕಳೆದುಕೊಂಡಿರುವ ಆಂಧ್ರದ ಪರವಾಗಿ ನಾನು ಎಂದಿಗೂ ಆಡುವುದಿಲ್ಲ ಎಂದು ನಿರ್ಧರಿಸಿದೆ. ನಾನು ತಂಡವನ್ನು ಪ್ರೀತಿಸುತ್ತೇನೆ. ನಾವು ಪ್ರತಿ ಋತುವಿನಲ್ಲಿ ಬೆಳೆಯುತ್ತಿರುವ ರೀತಿಯನ್ನು ನಾನು ಪ್ರೀತಿಸುತ್ತೇನೆ. ಆದರೆ ಮಂಡಳಿಯು ನಾವು ಬೆಳೆಯುವುದನ್ನು ಬಯಸುವುದಿಲ್ಲ” ಎಂದು ವಿಹಾರಿ ಹೇಳಿದರು.