Advertisement
ತುಂಗಭದ್ರಾ ನದಿಯ ಇಕ್ಕೆಲಗಳಲ್ಲಿ ಹೊನ್ನಾಳಿ ತಾಲೂಕಿನ ವ್ಯಾಪ್ತಿ ಹರಡಿಕೊಂಡಿದೆ. ತಾಲೂಕು ಸಾಸ್ವೇಹಳ್ಳಿ, ಕುಂದೂರು, ಬೇಲಿಮಲ್ಲೂರು, ಚೀಲೂರು, ಬೆಳಗುತ್ತಿ, ನ್ಯಾಮತಿ ಜಿಪಂ ಕ್ಷೇತ್ರಗಳನ್ನು ಹೊಂದಿದೆ.ಮಲೆನಾಡಿನ ಸಹ್ಯಾದ್ರಿ ಪರ್ವತ ಶ್ರೇಣಿಯ ತುದಿ ಹೊನ್ನಾಳಿ ತಾಲೂಕಿನಲ್ಲಿ ಹಾದು ಹೋಗಿ ಬಯಲು ಸೀಮೆಯಲ್ಲಿ ಲೀನವಾಗಿದೆ. ತೀರ್ಥಗಿರಿ, ಕಲುಬಿಗಿರಿ ಹಾಗೂ ತುಪ್ಪದಗಿರಿ ಈ ಶ್ರೇಣಿಯ ಕಿರಿ ಶಿಖರಗಳು. ಈ ಬೆಟ್ಟ ಶ್ರೇಣಿಯ ಆಚೀಚೆ ಇರುವ ಸೂರಗೊಂಡನಕೊಪ್ಪ, ಸುರಹೊನ್ನೆ, ಮಲ್ಲಿಗೇನಹಳ್ಳಿ, ಬೆಳಗುತ್ತಿ ಅರೆ ಮಲೆನಾಡಿನ ಪರಿಸರದಲ್ಲಿರುವ ಗ್ರಾಮಗಳು.
Related Articles
Advertisement
ಪಟ್ಟಣದಲ್ಲಿ ಉತ್ತಮ ಹಾಗೂ ಗುಣಮಟ್ಟದ ಸಿಸಿ ರಸ್ತೆಗಳ ತಕ್ಷಣದ ಅವಶ್ಯಕತೆ, ಅಸ್ಪಷ್ಠ ಹಾಗೂ ಅರ್ಧಕ್ಕೆ ನಿಂತಿರುವ ಒಳ ಚರಂಡಿ ವ್ಯವಸ್ಥೆಯನ್ನು ಪೂರ್ಣಗೊಳಿಸಿದರೆ ಪಟ್ಟಣಕ್ಕೆ ಒಂದು ನಿರ್ಧಿಷ್ಟತೆ ಲಭ್ಯವಾಗುತ್ತದೆ. ಪಟ್ಟಣದಲ್ಲಿ ಪ್ರತಿ ಬುಧವಾರ ಹಾಗೂ ಗುರುವಾರ ಕುರಿ ಸಂತೆ ನಡೆಯುವುದರಿಂದ ಗುಣಮಟ್ಟದ ಕುರಿ ಸಂತೆ, ತರಕಾರಿ ಮಾರ್ಕೆಟ್‌ಗಳ ಅವಶ್ಯಕತೆ ಇದ್ದು ಇವುಗಳ ನಿರ್ಮಾಣ ಕಾರ್ಯ ಬೇಗನೆ ಆಗಬೇಕಿದೆ.
ಹೊನ್ನಾಳಿ ಪಟ್ಟಣದಲ್ಲಿ ಒಟ್ಟು ಜನಸಂಖ್ಯೆ 17921 ಇದ್ದು ಜನಸಂಖ್ಯೆ 20 ಸಾವಿರಕ್ಕಿಂತ ಕಡಿಮೆ ಇರುವ ಕಾರಣ ಹೊನ್ನಾಳಿ ತಾಲೂಕು ಕೇಂದ್ರ ಇನ್ನು ಪಟ್ಟಣ ಪಂಚಾಯತ್ ವ್ಯವಸ್ಥೆಯಲ್ಲಿದೆ. ಹೊನ್ನಾಳಿ ತಾಲೂಕು ಕೇಂದ್ರದಲ್ಲಿ ಮಿನಿವಿಧಾನಸೌಧ, ಪಟ್ಟಣ ಪಂಚಾಯತ್, ಕೃಷಿ ಇಲಾಖೆ, ತಾಲೂಕು ಪಂಚಾಯತ್, ಉಪ ನೋಂದಣಿ ಕಚೇರಿ ಪಟ್ಟಣದ ಹೃದಯ ಭಾಗದಲ್ಲಿದ್ದರೆ, ಸರ್ಕಾರಿ ಆಸ್ಪತ್ರೆ, ನ್ಯಾಯಾಲಯ, ವಿದ್ಯಾರ್ಥಿನಿಲಯಗಳು ಪಟ್ಟಣದಿಂದ ಸುಮಾರು ಒಂದು ಕಿ.,ಮೀ. ದೂರದ ದುರ್ಗಿಗುಡಿ ಬಡಾವಣೆಯ ಪಶ್ಚಿಮ ದಿಕ್ಕಿನಲ್ಲಿವೆ. ಹೊನ್ನಾಳಿ ಪೊಲೀಸ್ ಠಾಣೆ, ಬಿಇಒ ಕಚೇರಿ, ತೋಟಗಾರಿಕೆ ಕಚೇರಿಗಳು ದೇವನಾಯ್ಕನಹಳ್ಳಿಯಲ್ಲಿವೆ. ಈಎಲ್ಲ ಸರ್ಕಾರಿ ಕಚೇರಿಗಳು ಒಂದೇ ಆವರಣದಲ್ಲಿ ಬರುವಂತೆ ಮಾಡಿದರೆ ತಾಲೂಕಿನ ನಾಗರಿಕರಿಗೆ ಉತ್ತಮ ಸೌಲತ್ತು ಕಲ್ಪಿಸಿಕೊಟ್ಟಂತಾಗುತ್ತದೆ. ಉತ್ತಮ ಭವಿಷ್ಯದ ತಾಲೂಕು ಆಗುವುದರಲ್ಲಿ ಅನುಮಾನವಿಲ್ಲ. ಪಟ್ಟಣಕ್ಕೆ ಹೊಂದಿಕೊಂಡಂತೆ ಐತಿಹಾಸಿಕ ಹಾಗೂ ಪುಣ್ಯ ಸ್ಥಳಗಳಾದ ಹಿರೇಕಲ್ಮಠ ಹಾಗೂ ತುಂಗಭದ್ರಾ ನದಿಯ ತಟದಲ್ಲಿರುವ 2ನೇ ಮಂತ್ರಾಲಯ ಮಠಗಳಿದ್ದು, ತಾಲೂಕು ಕೇಂದ್ರಕ್ಕೆ ಸಮೀಪ ಇರುವ ಬಳ್ಳೇಶ್ವರ ಶಿಲಾ ದೇವಸ್ಥಾನ ಮತ್ತು ತಾಲೂಕಿನಲ್ಲಿ ಬೆಟ್ಟದ ಸಾಲಿನಲ್ಲಿರುವ ತೀರ್ಥರಾಮೇಶ್ವರ, ತುಣಗಭದ್ರಾ ನದಿ ಮಧ್ಯದಲ್ಲಿರುವ ಗೆಡ್ಡೆ ರಾಮೇಶ್ವರ ಸೇರಿದಂತೆ ಅನೇಕ ಪುಣ್ಯ ಸ್ಥಳಗಳ ಕೇಂದ್ರವಾಗಿರುವ ಹೊನ್ನಾಳಿಗೆ ಒಂದು ಪ್ರವಾಸೋದ್ಯಮ ಇಲಾಖೆ ತೆರೆಯವುದು ಅವಶ್ಯವಾಗಿದೆ. ಪಟ್ಟಣದಲ್ಲಿ ಪಾರ್ಕ್ ಇಲ್ಲದೆ ಇರುವುದು ಒಂದು ಕೊರತೆಯಾಗಿದೆ. ಇದನ್ನು ನೀಗಿಸಲು ಪಟ್ಟಣಕ್ಕೆ ಪಾರ್ಕ್ ವ್ಯವಸ್ಥೆ ಮಾಡುವ ಅವಶ್ಯಕತೆ ಇದೆ. ಎಂ.ಪಿ.ಎಂ. ವಿಜಯಾನಂದಸ್ವಾಮಿ