ಯುವ ನಿರ್ದೇಶಕ ವಿಠಲ್ ಭಟ್ ನಿರ್ದೇಶನದ “ಹ್ಯಾಂಗೋವರ್’ ಈಗ ಮತ್ತೆ ಸದ್ದು ಮಾಡುತ್ತಿದೆ. ಇಲ್ಲಿಯವರೆಗೆ ಚಿತ್ರ ಬಿಡುಗಡೆ ತಯಾರಿಯಲ್ಲಿದ್ದ ಚಿತ್ರತಂಡ, ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಹೌದು, ಜೂನ್ ತಿಂಗಳಲ್ಲಿ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲು ನಿರ್ದೇಶಕ ವಿಠಲ್ ಭಟ್ ನಿರ್ಧರಿಸಿದ್ದಾರೆ.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಸಮಾಜ ಮತ್ತು ಪೋಷಕರು ಕೊಟ್ಟ ಸ್ವಾತಂತ್ರವನ್ನು ಯಾವುದೇ ಕಾರಣಕ್ಕೂ ದುರುಪಯೋಗ ಮಾಡಿಕೊಳ್ಳದೆ, ತಮ್ಮ ಹದಿಹರೆಯದ ಬದುಕನ್ನು ಹಸನು ಮಾಡಿಕೊಳ್ಳಬೇಕು ಎಂಬ ಸಣ್ಣ ಸಂದೇಶದೊಂದಿಗೆ ಚಿತ್ರ ಮಾಡಿದ್ದಾಗಿ ಹೇಳುತ್ತಾರೆ ನಿರ್ದೇಶಕ ವಿಠಲ್ ಭಟ್.
ಚಿತ್ರದಲ್ಲಿ ಮೂವರು ನಾಯಕರಿದ್ದಾರೆ. ಅವರಿಗೆ ಮೂವರು ನಾಯಕಿಯರು. ಅವರೆಲ್ಲರೂ ಒಂದು ಕಾಕ್ಟೆಲ್ ಪಾರ್ಟಿ ಮುಗಿಸಿ, ನಾಯಕನ ಫಾರ್ಮ್ಹೌಸ್‌ಗೆ ಬಂದು, ಅಲ್ಲೇ ವಿಶ್ರಾಂತಿ ಪಡೆಯುತ್ತಾರೆ. ಮುಂಜಾನೆ ಎಚ್ಚರವಾದಾಗ, ಆ ಪೈಕಿ ಒಬ್ಟಾಕೆಯ ಕೊಲೆಯಾಗಿರುತ್ತೆ. ಆ ಕೊಲೆಯ ಸುತ್ತ ನಡೆಯುವ ಕಥೆಯೇ “ಹ್ಯಾಂಗೋವರ್’.
ಹಾಗಾದರೆ, ಆ ಕೊಲೆ ಮಾಡಿದ್ದು ಯಾರು? ಕುಡಿದ ಅಮಲಿನಲ್ಲಿ ಆ ಕೊಲೆ ನಡೆದುಹೋಯ್ತಾ? ಆ ಕುತೂಹಲಕ್ಕೆ ಚಿತ್ರ ನೋಡಬೇಕು. ಇನ್ನು ಚಿತ್ರದಲ್ಲಿ ನಟಿ ನೀತು ಶೆಟ್ಟಿ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. “ನಾನೇ ರುಕ್ಕು… ಕೊಡ್ತೀನಿ ಒಂದು ಲುಕ್ಕು ಮತ್ತು ದಿನವೂ ಒಂದು ರೋಚಕ, ಹುಡುಕೋ ಒಳ್ಳೇ ಕೌತಕ …’ ಎಂಬ ಗೆಳೆತನದ ಹಾಡುಗಳಿಗೆ ಸಂಗೀತ ನಿರ್ದೇಶಕ ವೀರ್‌ಸಮರ್ಥ್ ರಾಗ ಸಂಯೋಜಿಸಿದ್ದಾರೆ.
ಚಿತ್ರಕ್ಕೆ ಚೇತನ್ ಬಹದ್ದೂರ್ ಮತ್ತು ಕೃಷ್ಟ ರಿಟ್ಟಿ ಸಾಹಿತ್ಯವಿದೆ. ಚಿತ್ರದಲ್ಲಿ ಭರತ್, ರಾಜ್, ಚಿರಾಗ್, ಮಹತಿ ಭಿಕ್ಷು, ಸಹನ್ ಮೊನ್ನಮ್ಮ, ನಂದಿನಿ ನಟರಾಜ್, ಶಫಿ, ಅಶ್ವಥ್ ನೀನಾಸಂ, ಶ್ರೀಧರ್, ಯತಿರಾಜ್ ಇತರರು ನಟಿಸಿದ್ದಾರೆ. ಮೈಸೂರು, ಬೆಂಗಳೂರು, ಊಟಿ ಸೇರಿದಂತೆ ಸುಮಾರು 32 ದಿನಗಳ ಚಿತ್ರೀಕರಣ ನಡೆದಿದೆ. ರಾಕೇಶ್ ನಿರ್ಮಾಣವಿದೆ. ಗಣೇಶ್ ರಾಣೆಬೆನ್ನೂರು ಸಂಭಾಷಣೆ ಬರೆದಿದ್ದಾರೆ.