Advertisement
ಅಂತೂ ಇಂತು ವರುಣನ ಕೃಪೆ ಭೂಮಿಯ ಮೇಲಾಗಿದೆ. ತುಸು ನಿಧಾನವಾದರೂ ಮಳೆರಾಯ ತನ್ನ ಇರುವಿಕೆಯನ್ನು ತೋರಿಸಲು ಪ್ರಾರಂಭಿಸಿದ್ದಾನೆ. ಬಿಸಿಲ ತಾಪ ತಾಳಲಾರದೆ, “ಮಳೆ ಯಾವಾಗ ಬರುತ್ತಪ್ಪಾ…’ ಎಂದು ಕಾಯುತ್ತಿದ್ದವರಿಗೆ ಈಗ ಮಳೆಯ ಮೇಲೆ ಕಿರಿಕಿರಿ ಶುರುವಾಗಿದೆ. ಮಳೆಯಿಂದ ಒಬ್ಬೊಬ್ಬರಿಗೂ ಒಂದೊಂದು ತೆರನಾದ ತೊಂದರೆ. ಕೃಷಿಕರಿಗೆ, ತಮ್ಮ ಬೆಳೆಗಳಿಗೆ ಮಳೆಯಿಂದ ತೊಂದರೆ ಆಗದಿರಲಿ ಎನ್ನುವ ಯೋಚನೆ, ಕೆಲಸಕ್ಕೆ ಹೋಗುವವರಿಗೆ ಬೆಳ್ಳಂಬೆಳಗ್ಗೆ ಮಳೆ ಸುರಿದರೆ ಮನೆಯಿಂದ ಹೊರಡಲು ಸೋಮಾರಿತನ. ವ್ಯಾಪಾರಿಗಳಿಗೆ, ಮಳೆ ಜೋರಾದರೆ ಜನ ಪೇಟೆಗೆ ಬರೋದಿಲ್ಲ, ವ್ಯಾಪಾರ ವಹಿವಾಟು ಮಂದಗತಿಯಲ್ಲಿ ಸಾಗಿ ಆದಾಯಕ್ಕೆ ಪೆಟ್ಟು ಬೀಳುತ್ತದೆ ಎಂಬ ಚಿಂತೆ. ರಜಾಮಜಾದ ಮೂಡ್‌ನಿಂದ ಶಾಲೆಗೆ ಹೆಜ್ಜೆ ಹಾಕಿದ ಮಕ್ಕಳಿಗೆ ಮಾತ್ರ ಮಳೆರಾಯ ಅಂದರೆ ಅಚ್ಚುಮೆಚ್ಚು. ಒಂದೆಡೆ ಮಳೆಯ ನೀರಲ್ಲಿ ಆಡೋ ಮಜಾ, ಮತ್ತೂಂದೆಡೆ ಕಳೆದಬಾರಿ ಮಳೆಯಿಂದಾಗಿ ಸಾಲುಸಾಲು ರಜೆ ಸಿಕ್ಕಿತ್ತು. ಈ ಬಾರಿಯೂ ಹಾಗೇ ಸಿಕ್ಕಿದರೆ ಎನ್ನುವ ಆಸೆ…
Related Articles
Advertisement
ಮನೆಯ ಗಂಡಸರು ತಮ್ಮ ಬಟ್ಟೆಗಳನ್ನು ತಾವೇ ತೊಳೆದರೂ, ಅದನ್ನು ಒಣಗಿಸಿ, ಮಡಚಿಡುವ ಪರಿಪಾಟಲು ಮಹಿಳೆಯದ್ದೇ. ಹೀಗಾಗಿ, ಮಳೆಗೆ ಹಿಡಿಶಾಪ ಹಾಕುತ್ತಾ, ತಮ್ಮದೇ ಐಡಿಯಾ ಬಳಸಿ ಬಟ್ಟೆ ಒಣಗಿಸುವ ಕಲೆಯನ್ನು ಆಕೆ ಕರಗತ ಮಾಡಿಕೊಂಡಿರುತ್ತಾಳೆ. ಕೆಲವು ಮನೆಗಳಲ್ಲಿ ಅಡುಗೆಕೋಣೆಯಲ್ಲಿ ಹಗ್ಗಗಳನ್ನು ಕಟ್ಟಿ, ಬಟ್ಟೆಗಳನ್ನು ನೇತು ಹಾಕಿರುವುದನ್ನು ನೋಡಿರಬಹುದು. ಅಡುಗೆ ಕೋಣೆ ಬೆಚ್ಚಗಿನ ತಾಣವಾದ್ದರಿಂದ, ಬಟ್ಟೆ ಬಹುಬೇಗ ಒಣಗುತ್ತದೆಂಬ ಉಪಾಯ ಆಕೆಯದು. ಅಜ್ಜಿ- ಮುತ್ತಜ್ಜಿಯರ ಕಾಲದ ಉಪಾಯವಿದು. ಆಗೆಲ್ಲ ಸೌದೆ ಒಲೆಗಳಿರುತ್ತಿದ್ದುದರಿಂದ, ಒಲೆಯ ಶಾಖದಿಂದ ಅಡುಗೆಮನೆ ಸದಾ ಬೆಚ್ಚಗಿರುತ್ತಿತ್ತು. ರಾತ್ರಿ ಫ್ಯಾನ್ ಹಾಕಿ ಮಲಗುವವರ ಜೊತೆಗೆ ಕೆಲವೊಂದಿಷ್ಟು ಡ್ರೆಸ್‌ಗಳೂ ಬೆಡ್‌ರೂಮ… ಸೇರಿಕೊಂಡು, ಬೆಚ್ಚಗಾಗಲು ಹೆಣಗುತ್ತವೆ. ಇನ್ನು ಅನ್ನ ಮಾಡಿದ ಕುಕ್ಕರ್ ಮೇಲೆ ಮಕ್ಕಳ ಒಂದೆರಡು ಪುಟ್ಟ ಅಂಗಿ ಹಾಕಿದರೆ ಒಣಗಿಸೋಕೆ ಅಡ್ಡಿ ಇಲ್ಲ. ಹಳ್ಳಿಗಳ ಕಡೆ, ಮಳೆ ನಿಂತಾಗ ತೆಂಗಿನಗರಿಯನ್ನು ಅಂಗಳದಲ್ಲಿ ಹಾಕಿ, ಅದರ ಮೇಲೆ ಬಟ್ಟೆ ಒಣಗಿಸುವುದೂ ಇದೆ. ಹೀಗೆ, ಮಳೆಗಾಲದಲ್ಲಿ ಬಟ್ಟೆ ಒಣಗಿಸಲು ನಾವು ಮಾಡುವ ಕಸರತ್ತುಗಳು ಒಂದಾ, ಎರಡಾ!?
– ವಂದನಾ ರವಿ ಕೆ.ವೈ.