Advertisement

ಅಪಾಯದ ಸ್ಥಿತಿಯಲ್ಲಿದೆ ಕುಂಟಾರು ತೂಗು ಸೇತುವೆ

01:30 AM Aug 29, 2018 | Karthik A |

ಕುಂಟಾರು: ಕುಂಟಾರು ಶ್ರೀ ಮಹಾವಿಷ್ಣು ದೇವಸ್ಥಾನದ ಸಮೀಪ ಪಯಸ್ವಿನಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗು ಸೇತುವೆ ಅಪಾಯದ ಸ್ಥಿತಿಯಲ್ಲಿದೆ. ಜನರು ತೆರಳಲೆಂದು ಮಾಡಿರುವ ಈ ತೂಗು ಸೇತುವೆಯ ಮೇಲಿನಿಂದ ದ್ವಿಚಕ್ರ ವಾಹನಗಳು ಸಂಚರಿಸುತ್ತಿವೆ. ಪರಿಣಾಮ ಸೇತುವೆಯಲ್ಲಿರುವ ಸಿಮೆಂಟು ಶೀಟಿನ ಸ್ಲ್ಯಾಬ್‌ಗಳು ಮುರಿಯುತ್ತಿವೆ.

Advertisement

120 ಮೀ. ಉದ್ದದ ಈ ತೂಗು ಸೇತುವೆಯನ್ನು 1998ರಲ್ಲಿ ಅಂದಾಜು ಮೊತ್ತ 21 ಲ.ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ದೇಲಂಪಾಡಿ ಗ್ರಾ.ಪಂ. ಸಹಕಾರ ಹಾಗೂ ಕಾರಡ್ಕ ಗ್ರಾ.ಪಂ. 1 ಲ.ರೂ ಸಹಾಯಧನವನ್ನು ಸೇತುವೆ ನಿರ್ಮಾಣಕ್ಕೆ ನೀಡಿತ್ತು. ಕುಂಟಾರಿನಿಂದ ಮಣಿಯೂರು ಪ್ರದೇಶಕ್ಕೆ ಹೋಗಲು ಸಮೀಪದ ಸಂಪರ್ಕ ಮಾರ್ಗವಾಗಿ ಈ ತೂಗುಸೇತುವೆ ಉಪಕಾರಿಯಾಗಿದೆ. ವಾಹನಗಳ ಸಂಚಾರದಿಂದ ಈ ಸೇತುವೆ ಅಪಾ ಯದ ಹಂತಕ್ಕೆ ತಲುಪಿದೆ. ಹತ್ತಿರದಲ್ಲಿ ಬದಲಿ ಮಾರ್ಗವಿಲ್ಲದ ಕಾರಣದಿಂದ ಈ ತೂಗು ಸೇತುವೆಯನ್ನು ದ್ವಿಚಕ್ರ ವಾಹನ ಸವಾರರು ಕೂಡ ಅವಲಂಬಿಸಿದ್ದಾರೆ. ಜನರನ್ನು ಪಕ್ಕದೂರಿಗೆ ಸಂಪರ್ಕಿಸಲು ಸುಲಭ ಮಾರ್ಗವಾದ ಈ ತೂಗು ಸೇತುವೆಯು ಕುಂಟಾರು ಹಾಗೂ ಮಣಿಯೂರು ಗ್ರಾಮಸ್ಥರ ಅಸಮಾಧಾ ನಕ್ಕೆ ಕಾರಣವಾಗಿದೆ. ನಡೆದಾಡಲು ಮಾತ್ರ ಯೋಗ್ಯವಾಗಿದ್ದ ಕುಂಟಾರು ತೂಗು ಸೇತುವೆಯಲ್ಲಿ ಸಾಮಾನು, ಸರಂಜಾಮುಗಳನ್ನು ಒಯ್ಯಲು ಸಾಧ್ಯವಾಗುವುದಿಲ್ಲ. ಹಾಗೆಯೇ ದ್ವಿಚಕ್ರ ವಾಹನಗಳ ಚಾಲನೆಯಿಂದ ಸೇತುವೆಯ ಸ್ಲ್ಯಾಬ್‌ಗಳು ಮುರಿದು ಹೋಗಿರುವ ಕಾರಣ ಮಕ್ಕಳ ಜೊತೆ ಸಂಚರಿಸಲು ಕೂಡ ಹೆದರಿಕೆಯಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಸೇತುವೆಯ ದುರಸ್ತಿ ಕಾರ್ಯಕ್ಕೆ ದೇಲಂಪಾಡಿ ಗ್ರಾ.ಪಂ. 5 ಲಕ್ಷ ರೂ. ಹಣವನ್ನು ತೆಗೆದಿರಿಸಿದೆ. 40 ಹೊಸ ಸಿಮೆಂಟು ಶೀಟುಗಳನ್ನು ಗ್ರಾ.ಪಂ. ಖರೀದಿಸಿದೆ. ಮುರಿದು ಹೋಗಿರುವಲ್ಲಿ ಹೊಸ ಶೀಟುಗಳನ್ನು ಜೋಡಿಸುವ ಕಾರ್ಯವನ್ನು ಪಂಚಾಯತ್‌ ನಡೆಸಲಿದೆ.

ಸೇತುವೆ ನಿರ್ಮಾಣಕ್ಕೆ ಆಗ್ರಹ
ತೂಗು ಸೇತುವೆಯು ಕಾಸರಗೋಡಿಗೆ ಹೋಗುವ ಹೆದ್ದಾರಿಯನ್ನು ಸಂಪರ್ಕಿಸಲು ಹತ್ತಿರದ ದಾರಿಯಾಗಿರುವುದರಿಂದ ಗ್ರಾಮಸ್ಥರು ಇದನ್ನೇ ಅವಲಂಬಿಸಿದ್ದಾರೆ. ಅಲ್ಲದೆ, ದ್ವಿಚಕ್ರ ವಾಹನಗಳನ್ನೂ ಸೇತುವೆ ಮೇಲೆ ಒಯ್ಯುತ್ತಿದ್ದಾರೆ, ಅದೂ ಇಬ್ಬರು – ಮೂವರು ಕುಳಿತು. ಇದರಿಂದ ಸೇತುವೆ ಅಪಾಯದಲ್ಲಿದೆ. ಸುಮಾರು ಒಂದು ಸಾವಿರ ಜನಸಂಖ್ಯೆ ಇದ್ದು, ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಯೋಗ್ಯವಾದ ಪೂರ್ಣ ಪ್ರಮಾಣದ ದೊಡ್ಡ ಸೇತುವೆಯೊಂದನ್ನು ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಬೇಡಿಕೆ ಮುಂದಿಟ್ಟಿದ್ದಾರೆ.

ಮಕ್ಕಳೂ ಓಡಾಡುತ್ತಾರೆ
ಮಣಿಯೂರು ಮತ್ತು ಚರ್ಲಿಕೈ ಪರಿಸರದಿಂದ ಶಾಲಾ ಮಕ್ಕಳು ಇದೇ ತೂಗು ಸೇತುವೆಯಲ್ಲಿ ಹೋಗುವುದರಿಂದ ಅಪಾಯದ ತೀವ್ರತೆ ಹೆಚ್ಚಿದೆ. ಕೆಲಸಕ್ಕೆಂದು ಮುಳ್ಳೇರಿಯ, ಕಾಸರಗೋಡು ನಗರಕ್ಕೆ ಹೋಗುವ ಜನರು ಇದರಲ್ಲಿ ಸಂತರಿಸುತ್ತಾರೆ. ಇಲ್ಲವೆಂದಲ್ಲಿ ದೂರದ ಹಾದಿ ಪಾಂಡಿ-ಅಡೂರು ಮಾರ್ಗವಾಗಿ ತೆರಳಬೇಕಾಗುತ್ತದೆ.

Advertisement

ಅಪಾಯದ ಹಂತಕ್ಕೆ
ದ್ವಿಚಕ್ರ ವಾಹನಗಳ ಅತಿಯಾದ ಓಡಾಟದಿಂದ ತೂಗು ಸೇತುವೆ ಅಪಾಯದ ಹಂತಕ್ಕೆ ತಲುಪಿದೆ. ಮೊದಲು ಈ ಸೇತುವೆ ಉಪಯೋಗಿಸುವವರು ಕಾಳಜಿ ವಹಿಸಿಕೊಳ್ಳಬೇಕು. ವಾಹನಗಳು ಸಾಗಲು ಬೇರೊಂದು ಸೇತುವೆ ನಿರ್ಮಿಸುವುದು ಒಳ್ಳೆಯದು. 
– ನವೀನ್‌, ಗ್ರಾಮಸ್ಥ

ರಕ್ಷಣೆಗೆ ಸಹಕರಿಸಿ
ತೂಗು ಸೇತುವೆಯಿಂದ ಜನರಿಗೆ ಅನುಕೂಲವಾಗಿದೆ. ಇದರ ರಕ್ಷಣೆಗೆ ಸ್ಥಳೀಯರು ಕೂಡ ಸಹಕರಿಸಬೇಕು. ತೂಗು ಸೇತುವೆಯ ರಿಪೇರಿಗಾಗಿ ದೇಲಂಪಾಡಿ ಗ್ರಾ.ಪಂ. ಕಳೆದ ವರ್ಷವೇ 5 ಲಕ್ಷ ರೂ. ಹಣ ತೆಗೆದಿರಿಸಿದೆ. ಮಳೆಗಾಲ ಮುಗಿದೊಡನೆ ರಿಪೇರಿ ಕಾರ್ಯ ನಡೆಸುತ್ತೇವೆ.
– ಗಂಗಾಧರ, ದೇಲಂಪಾಡಿ ಗ್ರಾ.ಪಂ. ಸದಸ್ಯ

— ಶಿವಪ್ರಸಾದ್‌ ಮಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next