Advertisement

ಇನ್ನೂ ಆಗದ‌ ಮಧ್ಯಮ ಗಾತ್ರದ ಬಾರ್ಜ್‌ ವ್ಯವಸ್ಥೆ

07:23 PM Nov 25, 2020 | mahesh |

ಕೋಟ: ಹಂಗಾರಕಟ್ಟೆಯಿಂದ ಕೋಡಿಬೆಂಗ್ರೆ ಸಂಪರ್ಕಕ್ಕೆ 2017ರ ಜನವರಿಯಲ್ಲಿ 1.90 ಕೋ.ರೂ. ವೆಚ್ಚದಲ್ಲಿ ದೊಡ್ಡ ಗಾತ್ರದ ಬಾರ್ಜ್‌ ಸೇವೆ ಆರಂಭಿಸಲಾಗಿತ್ತು. ಆದರೆ ನಷ್ಟದ ಕಾರಣ ನೀಡಿ ಒಂದೇ ವರ್ಷದಲ್ಲಿ ಈ ಸೇವೆ ಸ್ಥಗಿತಗೊಳಿಸಿ ಚಿಕ್ಕ ಫೆರ್ರಿ ಬೋಟ್‌ ವ್ಯವಸ್ಥೆ ಮಾಡಲಾಯಿತು. ಬಾರ್ಜ್‌ ಸೇವೆ ಸ್ಥಗಿತಗೊಳಿಸುವಾಗ ಮಧ್ಯಮ ಗಾತ್ರದ ಬಾರ್ಜ್‌ ಒದಗಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ಇದು ಈಡೇರಿಲ್ಲ. ಹೀಗಾಗಿ ಈ ಭಾಗದ ಪ್ರವಾಸಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ಸ್ಥಳೀಯರಿಗೂ ಸಮಸ್ಯೆಯಾಗಿದೆ.

Advertisement

ಕೋಡಿ ಬೆಂಗ್ರೆಯ ನಿವಾಸಿಗಳು ಘನ ವಾಹನಗಳ ಮೂಲಕ ಹಂಗಾರಕಟ್ಟೆ, ಸಾಸ್ತಾನ ಮುಂತಾದ ಭಾಗಗಳನ್ನು ತಲುಪಬೇಕಾದರೆ ಕೆಮ್ಮಣ್ಣು, ನೇಜಾರು, ಸಂತೆಕಟ್ಟೆ ಬ್ರಹ್ಮಾವರ ಮೂಲಕ ಸುಮಾರು 25 ಕಿ.ಮೀ. ಸುತ್ತುವರಿದು ಸಂಚರಿಸಬೇಕು. ಆದರೆ ದೊಡ್ಡ ಬಾರ್ಜ್‌ ಸಹಾಯದಿಂದ
ಕಾರು, ದ್ವಿಚಕ್ರ ವಾಹನ ಸಹಿತ ನೂರಾರು ಮಂದಿ ಒಟ್ಟಿಗೆ ಐದಾರು ನಿಮಿಷದಲ್ಲೇ ಹಂಗಾರಕಟ್ಟೆ ತಲುಪಿ ಅಲ್ಲಿಂದ ಆರೇಳು ಕಿ.ಮೀ.ಗಳಲ್ಲೇ ಸಾಸ್ತಾನ, ಬ್ರಹ್ಮಾವರವನ್ನು ತಲುಪಬಹುದಾಗಿತ್ತು. ಆದರೆ ದೊಡ್ಡ ಬಾರ್ಜ್‌ ಸೇವೆ ಸ್ಥಗಿತಗೊಂಡ ಮೇಲೆ ಫೆರ್ರಿ ಬೋಟ್‌ನಲ್ಲಿ ಕಾರು ಮುಂತಾದ ಘನವಾಹನಗಳನ್ನು ಸಾಗಿಸಲು ಅಸಾಧ್ಯವಾದ್ದರಿಂದ ಸ್ಥಳೀಯರಿಗೆ ಮತ್ತೆ ಸಮಸ್ಯೆಯಾಗಿದೆ.

ಸುತ್ತಿ ಬಳಸಿ ಸಂಚಾರ
ಕೋಡಿಬೆಂಗ್ರೆ ಪ್ರದೇಶ ಕೋಡಿಕನ್ಯಾಣ ಗ್ರಾ.ಪಂ. ವ್ಯಾಪ್ತಿಗೆ ಸೇರಿದೆ. ಹೀಗಾಗಿ ಇಲ್ಲಿನ ನಿವಾಸಿಗಳಿಗೆ ಒಂದಲ್ಲೊಂದು ಕೆಲಸಗಳಿಗಾಗಿ ಪ್ರತಿ ದಿನ ಓಡಾಡಬೇಕಾದ ಅನಿವಾರ್ಯತೆ ಇದೆ. ಈಗ ಇವರು ಕಾರು ಮುಂತಾದ ಘನವಾಹನದಲ್ಲಿ ಹಂಗಾರಕಟ್ಟೆ, ಸಾಸ್ತಾನ, ತಲುಪಲು ಕೆಮ್ಮಣ್ಣು, ನೇಜಾರು, ಸಂತೆಕಟ್ಟೆ ಮಾರ್ಗವಾಗಿ ಸುತ್ತಿಬಳಸಿ ಸಂಚರಿಸಬೇಕಾದ್ದು ಅನಿವಾರ್ಯವಾಗಿದೆ.

ಸ್ಥಳೀಯರ ಬೇಡಿಕೆ
ಈಗಿರುವ ಫೆರ್ರಿ ಬೋಟ್‌ನಲ್ಲಿ ಗಂಟೆಗೊಮ್ಮೆ ಟ್ರಿಪ್‌ ಮಾಡಲಾಗುತ್ತದೆ ಹಾಗೂ ಸಂಜೆ 5.30ಕ್ಕೆ ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ಸ್ಥಳೀಯರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಸಮಯ ನಿಗದಿಪಡಿಸಬೇಕು ಹಾಗೂ ಕನಿಷ್ಠ ಸಂಜೆ 6.30ರ ತನಕವಾದರೂ ಸಂಚರಿಸಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.

ಪ್ರವಾಸಿ ಚಟುವಟಿಕೆಗೆ ಹಿನ್ನಡೆ
ದೊಡ್ಡ ಬಾರ್ಜ್‌ ಸೇವೆ ಚಾಲ್ತಿಯಲ್ಲಿದ್ದ ಸಂದರ್ಭ ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ನೂರಾರು ಪ್ರವಾಸಿಗರು ಹಂಗಾರ ಕಟ್ಟೆಗೆ ಆಗಮಿಸಿ ಅಲ್ಲಿಂದ ಕಾರು ಮುಂತಾದ ವಾಹನಗಳ ಸಮೇತ ಕೋಡಿಬೆಂಗ್ರೆಗೆ ತೆರಳಿ ಅಲ್ಲಿನ ಸೀತಾ-ಸ್ವರ್ಣ ನದಿಯ ಸಂಗಮದ ಅಳಿವೆ, ಕೋಡಿಬೆಂಗ್ರೆ ಡೆಲ್ಟಾ ಬೀಚ್‌ಗಳ ಸೌಂದರ್ಯ, ಸೂರ್ಯಾಸ್ತಮಾನವನ್ನು ಕಣ್ತುಂಬಿಕೊಂಡು, ಹತ್ತಿರದಲ್ಲಿರುವ ಕೆಮ್ಮಣ್ಣು ಪಡುತೋನ್ಸೆ ತೂಗುಸೇತುವೆಯ ವೀಕ್ಷಣೆ ನಡೆಸಿ, ಕೆಮ್ಮಣ್ಣು ಮೂಲಕ ಮಲ್ಪೆಗೆ ಬೀಚ್‌ಗೆ ತೆರಳುತ್ತಿದ್ದರು. ಅತ್ಯಂತ ಸುಂದರವಾದ ಈ ಪ್ರಕೃತಿ ತಾಣವನ್ನು ನೋಡಲು ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಆದರೆ ದೊಡ್ಡ ಗಾತ್ರದ ಬಾರ್ಜ್‌ ಸ್ಥಗಿತಗೊಂಡ ಅನಂತರ ಕೇವಲ ಬೈಕ್‌ಗಳು ಮಾತ್ರ ಫೆರ್ರಿ ಬೋಟ್‌ನಲ್ಲಿ ಸಾಗಿಸುವುದರಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿಯಿತು. ಪ್ರವಾಸಿಗರನ್ನು ಮತ್ತೆ ಸೆಳೆಯುವ ಸಲುವಾಗಿ ಕಾರು ಮುಂತಾದ ಘನವಾಹನಗಳನ್ನು ಸಾಗಿಸಬಹುದಾದ ಮಧ್ಯಮ ಗಾತ್ರದ ಬಾರ್ಜ್‌ ಸೇವೆ ಪುನರಾರಂಭಿಸಬೇಕು ಎನ್ನುವ ಬೇಡಿಕೆ ಇದೆ.

Advertisement

ಪರಿಶೀಲಿಸಿ ಕ್ರಮ
ನಾನು ಹಿಂದೊಮ್ಮೆ ಬಂದರು ಸಚಿವನಾಗಿದ್ದ ಸಂದರ್ಭದಲ್ಲಿ ದೊಡ್ಡ ಗಾತ್ರದ ಬಾರ್ಜ್‌ ಮಂಜೂರು ಮಾಡಲಾಗಿತ್ತು. ಆದರೆ ಬಾರ್ಜ್‌ ವಿನ್ಯಾಸ ಹೊಂದಾಣಿಕೆಯಾಗದ ಕಾರಣ ಅದನ್ನು ಹಿಂಪಡೆದಿದ್ದರು. ಈ ಬಾರ್ಜ್‌ ಕುರಿತು ಸ್ಥಳೀಯರಿಂದ ಹೆಚ್ಚಿನ ಬೇಡಿಕೆ ಬಂದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
-ಕೋಟ ಶ್ರೀನಿವಾಸ ಪೂಜಾರಿ, ಬಂದರು, ಮೀನುಗಾರಿಕೆ ಸಚಿವರು

ಸ್ಥಳೀಯರಿಗೆ ಸಮಸ್ಯೆ
ದೊಡ್ಡ ಬಾರ್ಜ್‌ ಸೇವೆ ಸ್ಥಗಿತಗೊಳಿಸುವಾಗ ಮಧ್ಯಮ ಗಾತ್ರದ ಬಾರ್ಜ್‌ ನೀಡುವು ದಾಗಿ ಹೇಳಲಾಗಿತ್ತು. ಆದರೆ ಇದುವರೆಗೂ ಈ ಬಗ್ಗೆ ಕ್ರಮಕೈಗೊಂಡಿಲ್ಲ. ಹೀಗಾಗಿ ಕಾರು, ಮುಂತಾದ ವಾಹನಗಳಲ್ಲಿ ಸಂಚರಿಸಲು ಸಮಸ್ಯೆಯಾಗಿದೆ. ಇದೀಗ ಸಂಚರಿಸುತ್ತಿರುವ ಫೆರ್ರಿ ಬೋಟ್‌ನ ಟ್ರಿಪ್‌ಗ್ಳು ಸ್ಥಳೀಯರಿಗೆ ಹೊಂದಾಣಿಕೆ ಆಗುವುದಿಲ್ಲ. ಆದ್ದರಿಂದ ಟ್ರಿಪ್‌ನ ಸಂಖ್ಯೆ ಹೆಚ್ಚಿಸಬೇಕು. ಶೀಘ್ರ ಮಧ್ಯಮ ಗಾತ್ರದ ಬಾರ್ಜ್‌ ವ್ಯವಸ್ಥೆ ಮಾಡಬೇಕು.
-ಮಹೇಶ್‌ ಕುಮಾರ್‌ ಕೋಡಿಬೆಂಗ್ರೆ,  ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next