Advertisement

ಮತದಾರರ ಪಟ್ಟಿ ಪರಿಷ್ಕರಣೆಗೆ ಕೈ ಜೋಡಿಸಿ

09:44 PM Sep 13, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಸಿದ್ಧಪಡಿಸುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಾರ್ವಜನಿಕರು ಮತದಾರರ ಪಟ್ಟಿಯನ್ನು ಕಡ್ಡಾಯವಾಗಿ ಪರಿಷ್ಕರಿಸಿಕೊಳ್ಳಬೇಕು ಎಂದು ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್‌ ತಿಳಿಸಿದರು.

Advertisement

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ಹಾಗೂ ಮತದಾರರ ಸಾಕ್ಷರತಾ ಸಂಘ ಹಮ್ಮಿಕೊಂಡಿದ್ದ ಮತದಾರ ಪಟ್ಟಿ ಪರಿಷ್ಕರಣೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ 18 ವರ್ಷ ಮೇಲ್ಪಟ್ಟವರನ್ನು ನೂತನವಾಗಿ ಸೇರ್ಪಡೆ ಮಾಡಲಾಗುವುದು ಎಂದರು.

ಸೇರ್ಪಡೆ, ತಿದ್ದುಪಡಿಗೆ ಅವಕಾಶ: ಜಿಲ್ಲೆಯಲ್ಲಿ ಸೆ.01 ರಿಂದ ಅಕ್ಟೋಬರ್‌ 15 ರವರೆಗೆ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸಲಾಗುತ್ತದೆ. ಪ್ರತಿಯೊಬ್ಬ ನಾಗರಿಕರು ಕಡ್ಡಾಯವಾಗಿ ಮತದಾರ ಪಟ್ಟಿ ಪರಿಷ್ಕರಣೆ ಮಾಡಿಸಬೇಕು. ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ 5 ವಿಧಾನಸಭಾ ಕ್ಷೇತ್ರಗಳ 6 ತಾಲೂಕುಗಳಲ್ಲಿ ಈ ಕಾರ್ಯಕ್ರಮವನ್ನು ವೇಳಾಪಟ್ಟಿಯಂತೆ ನಡೆಸಲಾಗುತ್ತದೆ. ಈ ಸಮಯದಲ್ಲಿ ನಾಗರಿಕರು ಹೆಸರರು ಸೇರ್ಪಡೆ, ತೆಗೆದು ಹಾಕಲು, ಮತದಾರರ ಪರಿಶೀಲನೆ ಮತ್ತು ದೃಢೀಕರಣ, ಮತದಾರರ ಪಟ್ಟಿಯಲ್ಲಿನ ತಿದ್ದುಪಡಿಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಸಾರ್ವಜನಿಕರು ಭಾರತ ಚುನಾವಣಾ ಆಯೋಗದಿಂದ ದೃಢೀಕರಿಸಿರುವ ತಮ್ಮ ಭಾವಚಿತ್ರರುವ 8 ದಾಖಲೆಗಳ ಪೈಕಿ ಒಂದು ದಾಖಲೆಯೊಂದಿಗೆ ವಿವರಗಳನ್ನು ನಿಮ್ಮ ಮನೆಗೆ ಭೇಟಿ ನೀಡುವ ಮತಗಟ್ಟೆ ಹಂತದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸಾಮಾನ್ಯ ಸೇವಾ ಕೇಂದ್ರ, ಅಟಲ್‌ಜೀ ಜನಸ್ನೆಹಿ ಕೇಂದ್ರ, ಮತದಾರರ ನೋಂದಣಿ ಕಚೇರಿ, ಗ್ರಾಮ ಪಂಚಾಯತಿಯಲ್ಲಿನ ಬಾಪೂಜಿ ಕೇಂದ್ರದಲ್ಲಿ ಸಲ್ಲಿಸಿ ಪರಿಶೀಲಿಸಬಹುದು ಎಂದರು.

ಜಾಥಾಗೆ ಚಾಲನೆ: ನಗರದ ಎಂಜಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆರಂಭಗೊಂಡ ಮೆರವಣಿಗೆ ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ತಾಪಂ ಇಒ ಎಸ್‌.ಎಲ್‌.ಹರ್ಷವರ್ಧನ್‌, ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗರಾಜಯ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರು, ಜಿಲ್ಲಾ ಸ್ವೀಪ್‌ ಸಮಿತಿ ಸದಸ್ಯರಾದ ಸತೀಶ್‌ ಕುಮಾರ್‌ ಸಿ.ಎಲ್‌ ಹಾಗೂ ತಾಲೂಕು ಕಚೇರಿ ಸಿಬ್ಬಂದಿ ವರ್ಗದವರು ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

ಸಹಾಯವಾಣಿ ಕೇಂದ್ರ ಸಂಪರ್ಕಿಸಿ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ 1950 ಸಹಾಯವಾಣಿ ಕೇಂದ್ರದಲ್ಲಿ ವಿಕಲಚೇತನರು ಮತದಾರರ ಪಟ್ಟಿಯಲ್ಲಿರುನ ತಮ್ಮ ವಿವರಗಳ ಸೇರ್ಪಡೆ, ತಿದ್ದುಪಡಿ ಮಾಡಿಸಲು ಅವಕಾಶ ಕಲ್ಪಿಸಲಾಗುತ್ತದೆ. ನಾಗರಿಕರು ತಮ್ಮ ಕುಟುಂಬಕ್ಕೆ ಸಂಬಂಧಪಟ್ಟ ಮಾಹಿತಿಗೆ ಮತದಾರರ ಸಹಾಯವಾಣಿ 1950 ಸಂಪರ್ಕಿಸಬಹುದು ಎಂದು ಜಿಪಂ ಸಿಇಒ ಬಿ.ಫೌಜಿಯಾ ತರುನ್ನುಮ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next