Advertisement

ಹಕ್ಕಿನೊಂದಿಗೆ ಕರ್ತವ್ಯವನ್ನೂ ನಿಭಾಯಿಸಿ

05:19 PM Jan 15, 2021 | Team Udayavani |

ಚಿತ್ರದುರ್ಗ: ಮೂಲಭೂತ ಹಕ್ಕುಗಳ ಜೊತೆಗೆ ಪ್ರಜೆಗಳು ಮೂಲಭೂತ ಕರ್ತವ್ಯಗಳನ್ನು ಸಹ ನಿಭಾಯಿಸಬೇಕ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರೇಮಾವತಿ ಮನಗೂಳಿ ಎಂ. ಹೇಳಿದರು.

Advertisement

ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರ, ವಕೀಲರ ಸಂಘದಿಂದ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ನಡೆದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಹಾಗೂ ಮಾನವ ಹಕ್ಕುಗಳ ಕುರಿತ ಕಾನೂನು ಅರಿವು-ನೆರವು ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲರಿಗೂ ಮೂಲಭೂತ ಹಕ್ಕುಗಳು ಇವೆ ನಿಜ, ಆದರೆ ಮೂಲಭೂತ ಕರ್ತವ್ಯಗಳನ್ನೂ ತಿಳಿದುಕೊಳ್ಳಬೇಕು. ಒಬ್ಬ ವ್ಯಕ್ತಿ ಆಸ್ತಿ ಹೊಂದುವುದು ಹಕ್ಕಾಗಿದೆ. ಅದನ್ನು ಇನ್ನೊಬ್ಬ ವ್ಯಕ್ತಿ ಕಸಿದುಕೊಂಡರೆ ಅದು ಅಪರಾಧವಾಗುತ್ತದೆ. ಮೂಲಭೂತ ಹಕ್ಕುಗಳ ಬಗ್ಗೆ ಎಲ್ಲರೂ ಮಾತನಾಡುತ್ತೇವೆ ಆದರೆ ಕರ್ತವ್ಯಗಳ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ ಎಂದು ವಿಷಾದಿಸಿದರು.

ಸ್ವಾಮಿ ವಿವೇಕಾನಂದರು ಹೇಳುವಂತೆ ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ, ಅಂತಹ ಗುರಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭಾರತಕ್ಕೆ ಒಳ್ಳೆಯ ಹೆಸರನ್ನು ತಂದುಕೊಡಿ, ಉತ್ತಮ ಪ್ರಜೆಗಳಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಬಿ.ಕೆ ಗಿರೀಶ ಮಾತನಾಡಿ, ವಿವೇಕಾನಂದರು ಹೇಳುವಂತೆ ಶಿಕ್ಷಣ ಎಂದರೆ ತನ್ನೊಳಗಡೆ ಇರುವಂತಹ ವಿದ್ಯೆಯನ್ನು ಪ್ರದರ್ಶನ ಮಾಡುವುದೇ ಶಿಕ್ಷಣವಾಗಿದೆ. ಶಿಕ್ಷಣವೆಂಬುದು ಹುಟ್ಟಿದ ಮಗುವಿನಿಂದಲೇ ನಮಗೆ ದೊರೆಯುತ್ತದೆ. ಆದರೆ ಬೆಳೆಯುತ್ತ ನಾವೆಲ್ಲರೂ ಅದನ್ನು ಮರೆಯುತ್ತಿದ್ದೇವೆ. ಪ್ರಶ್ನೆ ಮಾಡುವ ಮನೋಭಾವ ಇಲ್ಲದಿದ್ದರೆ ಅಂತಹ ವಿದ್ಯೆ ಅಪೂರ್ಣ. ಆ ಭಾವನೆ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಂಡಲ್ಲಿ ಹಲವು ವಿಷಯದಲ್ಲಿ ತಜ್ಞರಾದಂತೆ. ವಿದ್ಯಾರ್ಥಿಗಳು ಪ್ರತಿಯೊಂದು ವಿಷಯದ ಬಗ್ಗೆಯೂ ಆಸಕ್ತಿ ಬೆಳೆಸಿಕೊಳ್ಳುವುದು ಸಹ ಶಿಕ್ಷಣವಾಗುತ್ತದೆ. ಆಸಕ್ತಿ ಬೆಳೆದರೆ ಮಾತ್ರ ಬುದ್ದಿ ಚುರುಕಾಗುತ್ತದೆ ಎಂದರು.

ಇದನ್ನೂ ಓದಿ:ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ

Advertisement

ವಕೀಲ ಎನ್‌.ಬಿ. ವಿಶ್ವನಾಥ್‌ ಮಾತನಾಡಿ, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮೂಲಭೂತ ಹಕ್ಕುಗಳನ್ನು ಪಡೆದಂತೆ ಕರ್ತವ್ಯಗಳನ್ನು ಸಹ ಪಾಲಿಸಬೇಕಾಗುತ್ತದೆ ಎಂದರು. ಭಾರತದ ಸಂವಿಧಾನದಲ್ಲಿ ಉಲ್ಲೇಖವಾಗಿರುವ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ವಿವರಿಸಿದರು.
ಪ್ರಾಚಾರ್ಯ ಪ್ರೊ| ಆರ್‌.ಕೆ. ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಕೋ-ಅರ್ಡಿನೇಟರ್‌ ಡಾ| ರಮೇಶ್‌ ರಟಗೇರಿ, ವಕೀಲರ ಸಂಘದ ಅಧ್ಯಕ್ಷ ಎಸ್‌. ವಿಜಯ್‌ ಕುಮಾರ್‌, ಉಪಾಧ್ಯಕ್ಷ ಟಿ. ನಾಗೇಂದ್ರಪ್ಪ, ಪ್ಯಾನಲ್‌ ವಕೀಲ ಎಚ್‌.ಬಿ. ದೇವಿಪ್ರಸಾದ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next