ವಿಜಯಪುರ : ಹಂದಿಗನೂರು ಗ್ರಾಮದ ನ್ಯಾಯಬೆಲೆ ಅಂಗಡಿ ಮುಖ್ಯಸ್ಥ ಆಹಾರ ಧಾನ್ಯ ವಿತರಿಸುತ್ತಿಲ್ಲ ಎಂದು ಆರೋಪಿಸಿ ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸೋಮವಾರ ಜಿಲ್ಲಾಧಿಕಾರಿ ಕಛೇರಿ ಎದುರು ಹಂದಿಗನೂರು ಗ್ರಾಮದ ಮಹಿಳೆಯರು, ಮಕ್ಕಳು ಸೇರಿದಂತೆ ಹಂದಿಗನೂರು ಗ್ರಾಮದ ನೂರಾರು ಜನರು ಸರ್ಕಾರ ಅನ್ಯಭಾಗ್ಯ ಯೋಜನೆಯಲ್ಲಿ ಉಚಿತವಾಗಿ ನೀಡುವ ಅಕ್ಕಿ ವಿತರಿಸುತ್ತಿಲ್ಲ ಎಂದು ಘೋಷಣೆ ಕೂಗಿದರು.
ಈ ವೇಳೆ ಮಳೆ ಸುರಿಯಲು ಆರಂಭಿಸಿದರೂ ಪ್ರತಿಭಟನಾ ಸ್ಥಳದಿಂದ ಕದಲದ ಹಂದಿಗನೂರು ಗ್ರಾಮಸ್ಥರು, ಜಿಲ್ಲಾಧಿಕಾರಿ, ಆಹಾರ ಇಲಾಕೆ ಅಧಿಕಾರಿಗಳು ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕನ ವಿರುದ್ಧ ದಿಕ್ಖಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹಂದಿಗನೂರು ಗ್ರಾಮದ ನ್ಯಾಯಬೆಲೆ ಅಂಗಡಿ ಮುಖ್ಯಸ್ಥ ಸಾಹೇಬಗೌಡ ಬಿರಾದಾರ ಅನ್ನಭಾಗ್ಯ ಸೇರಿದಂತೆ ಪಡಿತರ ಧಾನ್ಯವನ್ನು ಸರಿಯಾಗಿ ಹಂಚಿಕೆ ಮಾಡುತ್ತಿಲ್ಲ. ಸರ್ಕಾರ ಪಡಿತರ ಪೂರೈಸಿದರೂ ನ್ಯಾಯಬೆಲೆಯಲ್ಲಿ ವಿತರಣೆ ಮಾಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿದಾರರಿಗೆ ವಿತರಿಸುವ ಆಹಾರ ಧಾನ್ಯಗಳನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಿರುವ ಆರೋಪವೂ ನ್ಯಾಯಬೆಲೆ ಅಂಗಡಿ ಮುಖ್ಯಸ್ಥನ ಮೇಲಿದೆ. ಹೀಗಾಗಿ ಕೂಡಲೇ ಸದರಿ ನ್ಯಾಯಬೆಲೆ ಅಂಗಡಿ ಪರವಾನಿಗೆ ರದ್ದು ಮಾಡುವಂಥೆ ಆಗ್ರಹಿಸಿದರು. ಅಪರ ಜಿಲ್ಲಾಧಿಕಾರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಹಾಗೂ ಆಹಾರ ಹಾಗೂ ನಾಗರೀಕ ಸರಬರಾಜು ಗ್ರಾಹಕ ಇಲಾಖೆಗೆ ಮನವಿ ಸಲ್ಲಿಸಿದರು.