ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿರುವ ಹ್ಯಾಕರ್‌ಗಳ ಗುಂಪು ರಷ್ಯಾದಲ್ಲಿನ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳನ್ನು ಹ್ಯಾಕ್ ಮಾಡಿವೆ. ಜತೆಗೆ ರಷ್ಯಾದ ಸಂಸತ್, ಕ್ರೆಮ್ಲಿನ್ ಅನ್ನು ಬೆಂಬಲಿಸುವ ಮಾಧ್ಯಮಗಳ ಮೇಲೂ ಹ್ಯಾಕರ್‌ಗಳ ಕೆಂಗಣ್ಣು ಬಿದ್ದಿದೆ. ಕ್ರೆಮ್ಲಿನ್ ಪರ ಇರುವ ಚಾನೆಲ್ ರಷ್ಯನ್ ಟುಡೇ (ಆರ್.ಟಿ.) ಮತ್ತು ಕ್ರೆಮ್ಲಿನ್‌ನ ವೆಬ್‌ಸೈಟ್ ಮೇಲೆ ಕೂಡ ದಾಳಿ ನಡೆಸಲಾಗಿದೆ. ಇದಲ್ಲದೆ ರಷ್ಯಾದ ಪ್ರಮುಖ ವೆಬ್‌ಸೈಟ್‌ಗಳಾದ ಫೋಂಟಾಂಕಾ (Fontanka),ಟಿಎಎಸ್‌ಎಸ್ ಮತ್ತು ಕೊಮ್ಮೆರ್‌ಸಾಂಟ್ಸ್ (Kommersant’s) ಗಳ ಮೇಲೂ ಹ್ಯಾಕ್ ಮಾಡಲಾಗಿದೆ. ಸೋಮವಾರ ಮೂರೂ ವೆಬ್‌ಸೈಟ್‌ಗಳಿಗೆ ರಷ್ಯಾದಲ್ಲಿ ಲಾಗ್ ಇನ್ ಆದ ಸಂದರ್ಭದಲ್ಲಿ ಎರರ್ ಎಂಬ ಸಂದೇಶ ಸ್ಕ್ರೀನ್‌ನಲ್ಲಿ ಮೂಡುತ್ತಿತ್ತು.
ಉಕ್ರೇನ್‌ನ ದೈತ್ಯ ವಿಮಾನ ಭಾಗಶಃ ಧ್ವಂಸ
ಉಕ್ರೇನ್‌ನ ರಕ್ಷಣಾ ಸಾಮಗ್ರಿ ತಯಾರಿಕಾ ಕ್ಷೇತ್ರದ ದೈತ್ಯ ಕಂಪನಿಯಾದ ಉಕ್ರೊಬೊರೊನ್‌ಪ್ರೊಮ್ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಅದರಲ್ಲಿ ವಿಶ್ವದ ಅತಿ ದೊಡ್ಡ ವಿಮಾನವೆಂದು ಕರೆಯಲ್ಪಟ್ಟಿದ್ದ “ಆ್ಯಂಟನೊವ್- 225′(ಮೃಯಾ) ರಷ್ಯಾದೊಂದಿಗಿನ ಸಮರದ ವೇಳೆ ಭಾಗಶಃ ಧ್ವಂಸಗೊಂಡಿದೆ ಎಂದು ಹೇಳಿದೆ. “ದೊಡ್ಡಮಟ್ಟದ ಸರಕು ಸಾಗಣೆಗೆ ಇದನ್ನು ಬಳಸಲಾಗುತ್ತಿತ್ತು. ಇತ್ತೀಚೆಗೆ, ಕೀವ್ ವಿಮಾನ ನಿಲ್ದಾಣದಲ್ಲಿ ಇದನ್ನು ನಿಲುಗಡೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಇದರ ಮೇಲೆ ಬಾಂಬ್ ಬಿದ್ದಿದ್ದು, ಇದನ್ನು ರಿಪೇರಿ ಮಾಡಲು ಸಾಧ್ಯವಿದೆ’ ಎಂದು ಕಂಪನಿ ತಿಳಿಸಿದೆ.