Advertisement

ಕೈ ಅನುಕಂಪದ ಸೆಲೆ; ಬಿಜೆಪಿಗೆ ವಿರೋಧಿ ಅಲೆ

06:27 PM Apr 03, 2021 | Team Udayavani |

ರಾಯಚೂರು: ಮಸ್ಕಿಯಲ್ಲಿ ಸಮಬಲದ ಸೆಣಸಾಟದಲ್ಲಿರುವ ಕಾಂಗ್ರೆಸ್‌, ಬಿಜೆಪಿ ಮತಬೇಟೆಗೆ ಮುಂದಾಗಿದ್ದು, ಉಭಯ ಪಕ್ಷಗಳ ನಾಯಕರು ಭರ್ಜರಿ ಪ್ರಚಾರಕ್ಕಿಳಿದಿದ್ದಾರೆ. ಆದರೆ, ಕಾಂಗ್ರೆಸ್‌ಗೆ ಅನುಕಂಪದ ಸೆಲೆ ಬಂಡವಾಳವಾದರೆ, ಬಿಜೆಪಿಗೆ ವಿರೋಧಿ ಅಲೆ ಕಂಡು ಬರುತ್ತಿದೆ. ಉಪ ಚುನಾವಣೆ ಉಸ್ತುವಾರಿ ಹೊತ್ತ ಸಚಿವ ಬಿ. ಶ್ರೀರಾಮುಲು ಅವರಿಗೆ 5ಎ ಕಾಲುವೆ ಜಾರಿ ವಿಚಾರದಲ್ಲಿ ಹೋರಾಟ ಸಮಿತಿ ಸದಸ್ಯರು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.

Advertisement

ಕುಡಿಯಲು ಉಪ್ಪು ನೀರು ಕೊಡುವ ಮೂಲಕ ಮುಜುಗರಕ್ಕೀಡು ಮಾಡಿದ್ದಾರೆ. ನಿಮಗೆ ಮತ ನೀಡುವುದಿಲ್ಲ ಎಂದು ನೇರವಾಗಿ ಹೇಳಿದ್ದು ಗೊಂದಲಕ್ಕೆಡೆ ಮಾಡಿದೆ. ಇನ್ನು ಮಟ್ಟೂರಿನಲ್ಲಿ ಬಿ.ವೈ. ವಿಜಯೇಂದ್ರ ಎದುರು ಪಕ್ಷದ ಮೂಲ ಕಾರ್ಯಕರ್ತರು ತಮ್ಮ ಅಸಮಾಧಾನ ತೋಡಿಕೊಂಡ ಪ್ರಸಂಗವೂ ನಡೆದಿದೆ. ಚುನಾವಣೆ ಹೊಸ್ತಿಲಲ್ಲಿ ಇಂಥ ವಿರೋಧಗಳು ಪಕ್ಷದ ಮುಖಂಡರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

ಕಾಂಗ್ರೆಸ್‌ನಿಂದ ಬಿಜೆಪಿ ಬಂದ ಪ್ರತಾಪಗೌಡರು, ಮೂಲ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಅವರ ಬೆಂಬಲಿಗರು ಸದಸ್ಯತ್ವ ನೀಡಲು ಕೂಡ ಮೀನಮೇಷ ಮಾಡುತ್ತಿದ್ದಾರೆ. ನಾವು ಯಡಿಯೂರಪ್ಪ ಮುಖ ನೋಡಿಕೊಂಡೇ ಪಕ್ಷದಲ್ಲಿ ಉಳಿಯುವಂತಾಗಿದೆ ಎಂದು ನೇರವಾಗಿ ಹೇಳಿಕೊಂಡಿದ್ದಾರೆ. ಈ ವೇಳೆ ಕಾರ್ಯಕರ್ತರ ಸಮಸ್ಯೆ ಆಲಿಸಿರುವ ಬಿ.ವೈ. ವಿಜಯೇಂದ್ರ, ಆ ರೀತಿ ನಡೆದುಕೊಂಡವರ ವಿವರ ಸಂಗ್ರಹಿಸಿದ್ದಾರೆ. ಅಲ್ಲದೇ, ಸಿಎಂ ಮುಖ ನೋಡಿ ಕೆಲಸ ಮಾಡಿ. ಎಲ್ಲ ಸರಿ ಮಾಡುತ್ತೇವೆ. ಯಾರು ಬೇಸರ ಪಡಬೇಡಿ ಎಂದು ಮನವಿ ಮಾಡಿದ್ದಾರೆ.ಇತ್ತ ಕಾಂಗ್ರೆಸ್‌ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅನುಕಂಪದ ಅಸ್ತ್ರ ಪ್ರಯೋಗಿಸಿ ಮತಬೇಟೆಗೆ ಮುಂದಾಗಿದ್ದಾರೆ.

ಪ್ರತಾಪಗೌಡರಿಂದ ತಮಗಾದ ಅನ್ಯಾಯ ಪ್ರಸ್ತಾಪಿಸಿ ಮತಯಾಚಿಸುತ್ತಿದ್ದಾರೆ. ಅಲ್ಲದೇ, ಕ್ಷೇತ್ರದ ಜನ ಅವರಿಗೆ ಖರ್ಚಿಗೆ ಹಣ ನೀಡುತ್ತಿರುವುದನ್ನು ವಿಪಕ್ಷದವರು ಗಿಮಿಕ್‌ ಎಂದು ಜರಿದರೆ ಕಾಂಗ್ರೆಸ್‌ ನಾಯಕರು ಜನ ನಮ್ಮ ಮೇಲಿಟ್ಟಿರುವ ವಿಶ್ವಾಸ ಎನ್ನುತ್ತಿದ್ದಾರೆ.

ಜಾತಿ ದಾಳ ಜೋರು
ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರದಲ್ಲಿ ಜಾತಿ ದಾಳ ಜೋರಾಗಿ ಪ್ರಯೋಗಿಸಲಾಗುತ್ತಿದೆ. ಅದೇ ಕಾರಣಕ್ಕೆ ಬಿಜೆಪಿ ಸಚಿವ ಬಿ. ರಾಮುಲು ಅವರನ್ನೇ
ಉಸ್ತುವಾರಿ ಮಾಡಿದೆ. ಅತ್ತ ಕಾಂಗ್ರೆಸ್‌ ಕೂಡ ವಿವಿಧ ಸಮುದಾಯಗಳ ನಾಯಕರನ್ನು ಕಣಕ್ಕಿಳಿಸಿ ಮತಬೇಟೆಗೆ ಮುಂದಾಗಿದೆ. ಮಾಜಿ ಸಚಿವ ಆಲ್ಕೋಡ್‌ ಹನುಮಂತಪ್ಪ ಪ್ರಚಾರ ನಡೆಸಿ ದಲಿತರೆಲ್ಲ ಬಿಜೆಪಿ ವಿರೋಧಿ ಸಿ ಎಂದು ಕರೆ ನೀಡಿದರೆ, ಬಿಜೆಪಿ ಶಾಸಕ ಬಸವರಾಜ ಮತಬೇಟೆ ನಡೆಸಿ ದಲಿತ ಮತ ಸೆಳೆಯುವ ಯತ್ನ ನಡೆಸಿದ್ದಾರೆ. ಕಾಂಗ್ರೆಸ್‌ ಪರ ಎನ್‌. ಎಸ್‌.ಬೋಸರಾಜ್‌, ಗ್ರಾಮೀಣ ಶಾಸಕ ದದ್ದಲ್‌ ಬಸನಗೌಡ, ಮಾಜಿ ಶಾಸಕ ಹಂಪಯ್ಯ ನಾಯಕ,
ರಾಜಶೇಖರ ನಾಯಕ ಸೇರಿದಂತೆ ಅನೇಕರು ಪ್ರಚಾರ ನಡೆಸುತ್ತಿದ್ದಾರೆ.

Advertisement

ಬಿಸಿಲು ಲೆಕ್ಕಿಸದೇ ಪ್ರಚಾರ
ಉಭಯ ಪಕ್ಷಗಳ ನಾಯಕರು ಬಿರುಬಿಸಿಲನ್ನೂ ಲೆಕ್ಕಿಸದೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈಗಾಗಲೇ 40 ಡಿಗ್ರಿ ಬಿಸಿಲು ದಾಖಲಾಗಿದ್ದು, ಜನ ಮನೆಯಿಂದ ಹೊರ ಬರಲು ಹಿಂದೇಟು ಹಾಕುವಂತಾಗಿದೆ. ಅಲ್ಲದೇ, ಈಗ ಎಲ್ಲೆಡೆ ಕೃಷಿ ಚಟುವಟಿಕೆಗಳು ಸಂಪೂರ್ಣ ಮುಗಿದಿದ್ದು ಹಳ್ಳಿಗಳಿಗೆ ಹೋದರೆ ಜನ ಸಿಗುತ್ತಾರೆ. ಹೀಗಾಗಿ ಹಳ್ಳಿ ಹಳ್ಳಿಗೂ ಭೇಟಿ ನೀಡುತ್ತಿರುವ ನಾಯಕರು ಮತಯಾಚನೆ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next