Advertisement

Hasan Pen Drive Case; ಡಿಕೆಶಿ ಹೆಸರು ಇರುವುದರಿಂದ ಸಿಬಿಐಗೆ ಒಪ್ಪಿಸಿ: ವಿಜಯೇಂದ್ರ

11:54 PM May 18, 2024 | Team Udayavani |

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್‌ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಘಟಾನುಘಟಿಗಳ ಹೆಸರು ಥಳುಕು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಪೆನ್‌ಡ್ರೈವ್‌ ಪ್ರಕರಣ ಅತ್ಯಂತ ಅಕ್ಷಮ್ಯ. ಹಾದಿಬೀದಿಯಲ್ಲಿ ಪೆನ್‌ಡ್ರೈವ್‌ ಸಿಗುವಂತೆ ಮಾಡಿರುವವರಿಗೆ ಶಿಕ್ಷೆಯಾಗಬೇಕು. ಡಿಸಿಎಂ ಡಿ.ಕೆ. ಶಿವಕುಮಾರ್‌ ಹೆಸರು ಥಳುಕು ಹಾಕಿಕೊಂಡಿರುವುದರಿಂದ ಎಸ್‌ಐಟಿಯಿಂದ ಪ್ರಾಮಾಣಿಕ ತನಿಖೆ ನಡೆಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ. ಇಲ್ಲಿ ಯಾರಿದ್ದಾರೆ, ಇಲ್ಲ ಎನ್ನುವುದಕ್ಕಿಂತಲೂ ಹೆಚ್ಚಾಗಿ ಈಗಿರುವ ಎಸ್‌ಐಟಿಯಿಂದ ತನಿಖೆಯನ್ನು ಸರಿಯಾಗಿ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಸಿಬಿಐ ತನಿಖೆಯೇ ಸೂಕ್ತ. ದೇವರಾಜೇಗೌಡ ಆರೋಪ ವಿಚಾರದಲ್ಲಿಯೂ ಬಿಜೆಪಿ ನಿಲುವು ಸ್ಪಷ್ಟವಾಗಿದೆ ಎಂದು ಅಭಿಪ್ರಾಯಪಟ್ಟರು.

ಪರಿಷತ್‌; ಗೊಂದಲಕ್ಕೆ ತೆರೆ
ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಆರು ಕ್ಷೇತ್ರಗಳ ಪೈಕಿ ಬಿಜೆಪಿಗೆ ನಾಲ್ಕು ಹಾಗೂ ಜೆಡಿಎಸ್‌ಗೆ ಎರಡು ಸ್ಥಾನ ಹಂಚಿಕೆ ಮಾಡಲಾಗಿದೆ. ದಕ್ಷಿಣ ಶಿಕ್ಷಕ ಕ್ಷೇತ್ರದ ಅಭ್ಯರ್ಥಿಯಾಗಿ ಇ.ಸಿ. ನಿಂಗರಾಜು ಅವರ ಹೆಸರು ಅಂತಿಮಗೊಳಿಸಲಾಗಿತ್ತು. ಈಗ ಜೆಡಿಎಸ್‌ ಸ್ಪರ್ಧಿಸುತ್ತದೆ. ಎಲ್ಲ ಸಮಸ್ಯೆಗಳು ಬಗೆಹರಿದಿವೆ. ಇನ್ನೆರಡು ದಿನಗಳಲ್ಲಿ ಎಲ್ಲ ಗೊಂದಲಗಳಿಗೆ ತೆರೆ ಬೀಳುತ್ತದೆ ಎಂದು ಹೇಳಿದರು.

ಕಾನೂನು-ಸುವ್ಯವಸ್ಥೆ ಹದೆಗೆಟ್ಟಿದೆ
ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ದಿನದಿಂದ ಕಾನೂನು-ಸುವ್ಯವಸ್ಥೆ ಹದೆಗೆಟ್ಟಿದೆ. ಎಲ್ಲಿ ನೋಡಿದರೂ ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣ ಜಾಸ್ತಿಯಾಗಿದೆ. ಮಹಿಳೆಯರು, ಮಕ್ಕಳು ಸುರಕ್ಷಿತವಾಗಿ ಹೊರಗೆ ಹೋಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಯಾವ ಪ್ರಕರಣದಲ್ಲೂ ಸರಕಾರ ಬಿಗಿ ನಿಲುವು ತೆಗೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಬಿಜೆಪಿ ಮನವಿ ಸಲ್ಲಿಸಿ ಬಿಗಿ ಕ್ರಮಕ್ಕೆ ಆಗ್ರಹಿಸಿದೆ. ಈಗಲಾದರೂ ಸರಕಾರ ಎಚ್ಚೆತ್ತುಕೊಳ್ಳಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next