Advertisement

ನಗರಸಭೆ ಗದ್ದುಗೆಗೆ ಕೈ-ಕಮಲ ಪೈಪೋಟಿ

03:53 PM Aug 25, 2018 | Team Udayavani |

ಬನಹಟ್ಟಿ: ರಬಕವಿ-ಬನಹಟ್ಟಿ ನಗರಸಭೆ ಜಿಲ್ಲೆಯಲ್ಲಿಯೇ ಎರಡನೇ ಅತಿ ದೊಡ್ಡ ನಗರಸಭೆಯಾಗಿದೆ. ಕಳೆದ ಬಾರಿ ಬಿಜೆಪಿಯ ಒಡಕಿನ ಲಾಭ ಪಡೆದುಕೊಂಡು ಕಾಂಗ್ರೆಸ್‌ ಬಿಜೆಪಿಯಿಂದ ಅಧಿಕಾರ ಕಸಿದುಕೊಂಡಿತ್ತು. ಆದರೆ ಈ ಬಾರಿ ಬಿಜೆಪಿ ನಗರಸಭೆ ಗದ್ದುಗೆ ಏರಲು ಎಲ್ಲ ರೀತಿಯ ತಯಾರಿ ನಡೆಸಿದ್ದು, ಕಾಂಗ್ರೆಸ್‌ ಯಾವ ರೀತಿ ರಣತಂತ್ರ ಹೆಣೆಯುತ್ತದೆ ಎಂಬ ಚರ್ಚೆ ನಡೆಯುತ್ತಿದೆ.

Advertisement

ಕಳೆದ 2013ರಲ್ಲಿ ಕಾಂಗ್ರೆಸ್‌ 17 ಸ್ಥಾನ ಪಡೆದು ಅಧಿಕಾರ ಹಿಡಿದಿತ್ತು. ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನ ಕೆಲವು ಸದಸ್ಯರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಆದರೂ ಇದರ ಸಂಪೂರ್ಣ ಲಾಭ ಪಡೆಯಲು ಬಿಜೆಪಿ ವಿಫಲವಾಗಿತ್ತು. ಹಲವು ಇಕ್ಕಟ್ಟಿನ ಸಂದರ್ಭದಲ್ಲಿಯೂ ಕಾಂಗ್ರೆಸ್‌ ತನ್ನ 5 ವರ್ಷದ ಆಡಳಿತ ಪೂರ್ಣಗೊಳಿಸಿದೆ.

ನಗರಸಭೆಯ ವ್ಯಾಪ್ತಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು ಕೆಲವು ಕೇತ್ರಗಳಲ್ಲಿ ಜೆಡಿಎಸ್‌ ಹಾಗೂ ಪಕ್ಷೇತರರಿಂದಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಅದರಲ್ಲೂ ಈ ಬಾರಿ ಬಾರಿ ಅಂತರದಿಂದ ಉಮಾಶ್ರೀ ವಿರುದ್ಧ ಜಯಶಾಲಿಯಾಗಿರುವ ಶಾಸಕ ಸಿದ್ದು ಸವದಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸಲು ಟೊಂಕಕಟ್ಟಿ ನಿಂತಿದ್ದು ಪ್ರತಿ ವಾರ್ಡ್‌ಗಳಿಗೆ ಭೇಟಿ ನೀಡಿ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಆದರೆ ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳ ಹೆಚ್ಚಳದಿಂದಾಗಿ ಕೆಲವೊಂದು ಬಿಜೆಪಿ ಕಾರ್ಯಕರ್ತರು ಬಂಡಾಯವೆದ್ದು ಪಕ್ಷೇತರರರಾಗಿ ಕಣಕ್ಕಿಳಿದಿದ್ದು ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಹೀಗಾಗಿ ಈ ಅವಕಾಶವನ್ನು ಕಾಂಗ್ರೆಸ್‌ನ ಉಮಾಶ್ರೀ ಯಾವ ರೀತಿ ಸದುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.

ವಾರ್ಡ್‌ ಪುನರ್‌ ವಿಂಗಡನೆ ಆದ ನಂತರ ಮೊದಲಿನಂತೆ ಈಗಲೂ ಕೂಡಾ ಇಲ್ಲಿ 31 ವಾರ್ಡ್‌ಗಳಿದ್ದು, ಮೀಸಲಾತಿ ಬದಲಾವಣೆ ಹಾಗೂ ಮಹಿಳೆಯರಿಗೆ ಶೇ.50ರಷ್ಟು ಮೀಸಲಿಟ್ಟ ಕಾರಣ ಹಳೇ ಅಭ್ಯರ್ಥಿಗಳಿಗೆ ನುಂಗಲಾರದ ತುತ್ತಾಗಿದೆ. ನಗರಸಭೆ ಅಧ್ಯಕ್ಷರಾಗಿದ್ದ ರಮೀಜಾ ಝಾರೆ ಪತಿ ಮೊಹಮ್ಮದ ಈಗ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಅಧ್ಯಕ್ಷರು ಸ್ವತಃ ಅವರ ಪ್ರಚಾರದಲ್ಲಿ ತೊಡಗಿದ್ದಾರೆ. ಅದೇ ರೀತಿ ಬಿಜೆಪಿಯಿಂದ ಪ್ರಭಾಕರ ಮೊಳೆದ, ಸಂಜಯ ತೆಗ್ಗಿ, ದೀಪಾ ಗಾಡಿವಡ್ಡರ, ಬಾಳವ್ವ  ಕಂಡಕಿ, ಕಾಂಗ್ರೆಸ್‌ನಿಂದ ಕುಮಾರ ಬಿಳ್ಳೂರ, ಅಬ್ದುಲ್‌ ಕೊಣ್ಣೂರ ಮರು ಆಯ್ಕೆ ಬಯಸಿದ್ದಾರೆ.  ಅದೇ ರೀತಿ ಕಳೆದ ಬಾರಿ ಪಕ್ಷೇತರರಾಗಿ ಆಯ್ಕೆಯಾಗಿದ್ದ ಯಲ್ಲಪ್ಪ ಕಟಗಿ ಈ ಬಾರಿ ಬಿಜೆಪಿಯಿಂದ 22ನೇ ವಾರ್ಡ್‌ನಿಂದ ಸ್ಪರ್ಧೆಗಿಳಿದರೆ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಯೂನೂಸ್‌ ಚೌಗಲೆ ಚುನಾವಣೆ ಕೆಲವೇ ದಿನಗಳಿದ್ದಾಗ ಬಿಜೆಪಿ ಸೇರ್ಪಡೆಗೊಂಡು ವಾರ್ಡ್‌ ನಂ. 18 ರಿಂದ ಸ್ಪರ್ಧಿಸುತ್ತಿದ್ದು, ಮಾಜಿ ನಗರಸಭಾ ಅಧ್ಯಕ್ಷೆ ಸುಲೋಚನಾ ಪಾತ್ರೋಟ ಕಾಂಗ್ರೆಸ್‌ನಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅಲ್ಲದೇ ಈ ಬಾರಿ ಬಸವರಾಜ ಕೊಣ್ಣೂರ ನೇತೃತ್ವದ ಜೆಡಿಎಸ್‌ 13 ಕಡೆ ಸ್ಪರ್ಧಿಗಿಳಿದಿದ್ದು, ಬಿರುಸಿನಿಂದ ಪ್ರಚಾರ ನಡೆಸಿದ್ದಾರೆ.

ಸದ್ಯ ಬಿಜೆಪಿ ಅಧಿಕಾರದಲ್ಲಿದ್ದು, ಎಲ್ಲೆಡೆ ಮೋದಿ ಅಲೆ ಇರುವುದರಿಂದ ನಗರಸಭೆಯ 31 ವಾರ್ಡ್‌ ಗಳನ್ನು ಗೆಲ್ಲುತ್ತೇವೆ. ಇದರಲ್ಲಿ ಯಾವುದೇ ಸಂಶಯವಿಲ್ಲ.
 ರಾಜು ಅಂಬಲಿ, ಅಧ್ಯಕ್ಷರು,
  ಬಿಜೆಪಿ ನಗರ ಘಟಕ.

Advertisement

ನಗರಸಭೆಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್‌ ಹಂಚಿಕೆ ಮಾಡಲಾಗಿದೆ. ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್‌ ಉತ್ತಮ ಆಳ್ವಿಕೆ ನೀಡಿದೆ. ಆದ್ದರಿಂದ ನಗರಸಭೆಯಾದ್ಯಂತ 22ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ.
 ರಾಜು ಭದ್ರನ್ನವರ, ಅಧ್ಯಕ್ಷರು,
  ಕಾಂಗ್ರೆಸ್‌ ನಗರ ಘಟಕ

ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next