ಬೆಂಗಳೂರು: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲ್ ಅವರ ಪುತ್ರ ಮಾಜಿ ಶಾಸಕ ಮಹಿಮಾ ಪಟೇಲ್‌ಗೆ ಕಾಂಗ್ರೆಸ್ ಗಾಳ ಹಾಕಿದೆ.
ಚನ್ನಗಿರಿ ಶಾಸಕ ಬಿಜೆಪಿಯ ಮಾಡಾಳು ವಿರೂಪಾಕ್ಷಪ್ಪ ಅವರು ಕೆಎಸ್‌ಡಿಎಲ್ ಲಂಚ ಪ್ರಕರಣದಲ್ಲಿ ಸಿಲುಕಿರುವುದರಿಂದ ಅವರಿಗೆ ಈ ಸಲ ಬಿಜೆಪಿಯಿಂದ ಟಿಕೆಟ್ ಸಿಗುವ ಸಾಧ್ಯತೆಗಳು ಕಡಿಮೆ. ಜತೆಗೆ ಅವರ ವಿರುದ್ಧ ಬಿಜೆಪಿಯಿಂದ ಅಮಾನತು ಇಲ್ಲವೇ ಉಚ್ಚಾಟನೆಯಂತಹ ಕ್ರಮ ಕೈಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
ಹೀಗಾಗಿ ಮಾಡಾಳು ವಿರೂಪಾಕ್ಷಪ್ಪ ಅವರು ಈ ಸಲದ ಚುನಾವಣಾ ಕಣದಿಂದ ದೂರ ಇರಲಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಕಾಂಗ್ರೆಸ್ ನಾಯಕರು ಈ ಸಲ ಚನ್ನಗಿರಿ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಗೆಲುವು ಖಚಿತ ಎಂಬ ಲೆಕ್ಕಾಚಾರದಲ್ಲಿ ನಿರತರಾಗಿದ್ಧಾರೆ.
ಮಾಜಿ ಶಾಸಕ ವಡ್ನಾಳ್ ರಾಜಣ್ಣ ಅವರು ಸ್ಪರ್ಧೆಗೆ ಹಿಂದೇಟು ಹಾಕಿ ಸಂಬಂಧಿಕರೊಬ್ಬರಿಗೆ ಟಿಕೆಟ್ ಕೊಡುವಂತೆ ಕೋರಿದ್ದಾರೆ ಎನ್ನಲಾಗಿದೆ. ಆದರೆ ರಾಜ್ಯ ಕಾಂಗ್ರೆಸ್ ನಾಯಕರು ಚನ್ನಗಿರಿಯಲ್ಲಿ ಸದ್ಯಕ್ಕೆ ಹೊಸ ಪ್ರಯೋಗಕ್ಕೆ ಮುಂದಾಗುವ ಮನಸ್ಸು ಮಾಡದೆ ಹಳಬರಲ್ಲಿ ಪ್ರಬಲರನ್ನೇ ಕಣಕ್ಕಿಳಿಸಿದರೆ ಒಳಿತು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಮಹಿಮಾ ಪಟೇಲ್ ಅವರೊಂದಿಗೆ ರಾಜ್ಯದ ಮುಖಂಡರೊಬ್ಬರು ಮಾತನಾಡಿ ಪಕ್ಷದ ಇಂಗಿತವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಪಕ್ಷಕ್ಕೆ ಆಹ್ವಾನ ನೀಡಿರುವುದರ ಜತೆಗೆ ಟಿಕೆಟ್ ಅನ್ನು ವರಿಷ್ಠರು ಖಚಿತಪಡಿಸಿದ್ದಾರೆ, ಅಂತಿಮವಾಗಿ ತಮ್ಮ ತೀರ್ಮಾನ ಏನೆಂಬುದನ್ನು ತಿಳಿಸಬೇಕೆಂದು ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸದ್ಯಕ್ಕೆ ಯಾವುದೇ ತೀರ್ಮಾನಕ್ಕೆ ಬಾರದ ಮಹಿಮಾ ಪಟೇಲ್ ಅವರು ತಮಗೆ ಸಮಯ ನೀಡಬೇಕೆಂದು ಕೋರಿರುವುದರಿಂದ ಮಹಿಳಾ ಪಟೇಲ್ ನಿರ್ಣಯಕ್ಕಾಗಿ ಕಾಂಗ್ರೆಸ್ ಕಾಯಲು ಬಯಸಿದ್ದು ಆ ನಂತರವೇ ಚನ್ನಗಿರಿಯ ಅಭ್ಯರ್ಥಿ ತೀರ್ಮಾನವಾಗಲಿದೆ.