Advertisement

ಹೈದರಾಬಾದ್‌ ಪ್ರವಾಸದಿಂದ ಕೈ-ದಳ ಶಾಸಕರು ವಾಪಸ್‌

06:10 AM May 19, 2018 | |

ಬೆಂಗಳೂರು: ಬಿಜೆಪಿಯ ಆಪರೇಷನ್‌ ಕಮಲದ ಭೀತಿಯಿಂದ ಗುರುವಾರ ರಾತ್ರಿ ಹೈದರಾಬಾದ್‌ಗೆ ತೆರಳಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಸುಪ್ರೀಂಕೊರ್ಟ್‌ ಆದೇಶದ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪಕ್ಕೆ ಹಾಜರಾಗಲು ಶುಕ್ರವಾರ ರಾತ್ರಿ ಮತ್ತೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

Advertisement

ಹೈದರಾಬಾದನ್‌ ಬಂಜಾರಾ ಹಿಲ್ಸ್‌ನಲ್ಲಿರುವ ತಾಜ್‌ ಹಯಾತ್‌ ಹೊಟೇಲ್‌ಗೆ ತೆರಳಿದ್ದ ಕಾಂಗ್ರೆಸ್‌ ಶಾಸಕರು ಮತ್ತೆ ಭದ್ರತೆ ದೃಷ್ಠಿಯಿಂದ ಹೊಟೇಲ್‌ ತಾಜ್‌ ಕೃಷ್ಣಗೆ ಬದಲಾಯಿಸಿದರು. ಜೆಡಿಎಸ್‌ ಶಾಸಕರು ನೊವಾಟೆಲ್‌ನಲ್ಲಿ ವಾಸ್ತವ್ಯ ಹೂಡಿದರು. ಈ ನಡುವೆ ಹೈದರಾಬಾದ್‌ನಲ್ಲಿಯೇ ಶಾಸಕಾಂಗ ಪಕ್ಷದ ಸಭೆ ನಡೆಸಿದ ಕಾಂಗ್ರೆಸ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೂಚನೆ ಮೇರೆಗೆ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಶಾಸಕಾಂಗ ಸಭೆಯಲ್ಲಿ ಎಲ್ಲ ಶಾಸಕರನ್ನೂ ಉದ್ದೇಶಿಸಿ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ ಬಹುಮತ ಸಾಬೀತು ಮಾಡುವ ಸಂದರ್ಭದಲ್ಲಿ ಬಿಜೆಪಿ ವಿರುದಟಛಿ ಮತ ಹಾಕುವಂತೆ ಸೂಚಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಮಾತ್ರ ಎಲ್ಲರೂ ಬೆಳೆಯಲು ಸಾಧ್ಯ. ಬಿಜೆಪಿ 2008ರಲ್ಲಿ ಶಾಸಕರನ್ನು ಬಳಸಿಕೊಂಡು ಏನು
ಮಾಡಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಪಾವಗಡ ಶಾಸಕ ವೆಂಕಟರಮಣಪ್ಪ ಅವರ ಅನುಭವ ಕೇಳಿ.

ಬಿಜೆಪಿ ನಾಯಕರ ಮಾತಿಗೆ ಮರುಳಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ. ಯಾರಿಗೆ ಯಾವ ರೀತಿಯ ಫೋನ್‌ ಬಂದಿದೆ ಎನ್ನುವುದು ಗೊತ್ತಿದೆ. ಕಾಂಗ್ರೆಸ್‌ ರಾಷ್ಟ್ರ ಮಟ್ಟದಲ್ಲಿ ಆತಂಕದ ಪರಿಸ್ಥಿತಿ ಎದುರಿಸುತ್ತಿದೆ. ಎಲ್ಲರೂ ಪಕ್ಷದ ಪರ ನಿಲ್ಲಬೇಕೆಂದು ಸಿದ್ದರಾಮಯ್ಯ ಶಾಸಕರಿಗೆಮನವಿ ಮಾಡಿದ್ದಾರೆ.

Advertisement

ಮುನಿಸಿಕೊಂಡ ಶಾಸಕರು: ಹೈದರಾಬಾದ್‌ಗೆ ತೆರಳಿ ಮುಂಜಾನೆಯ ತಿಂಡಿ ಮುಗಿಸುವ ಹೊತ್ತಿಗೆ ಸುಪ್ರೀಂಕೊರ್ಟ್‌ ಶನಿವಾರವೇ ಬಹುಮತ ಸಾಬೀತು ಪಡಿಸುವಂತೆ ಯಡಿಯೂರಪ್ಪಗೆ ತಿಳಿಸಿದ್ದರಿಂದ ಅನೇಕ ಶಾಸಕರು ಕಾಂಗ್ರೆಸ್‌ ನಾಯಕರ ವಿರುದಟಛಿ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.

ಶುಕ್ರವಾರ ಸುಪ್ರೀಂಕೋರ್ಟ್‌ ಆದೇಶ ನೋಡಿಕೊಂಡು ಹೊರ ರಾಜ್ಯಕ್ಕೆ ಶಿಫ್ಟ್ ಆಗುವ ಬಗ್ಗೆ ಶಾಸಕರು ಮನವಿ ಮಾಡಿಕೊಂಡಿದ್ದರೂ, ಆಪರೇಷನ್ ಕಮಲದ ಭೀತಿಯಿಂದ ಎರಡೂ ಪಕ್ಷಗಳ ನಾಯಕರು ಗುರುವಾರ ರಾತ್ರಿಯೇ ಹೊರ ರಾಜ್ಯಕ್ಕೆ ಸ್ಥಳಾಂತರ ಮಾಡಲು ತೀರ್ಮಾನಿಸಿ ಹೈದರಾಬಾದ್‌ಗೆ ಕರೆದುಕೊಂಡು ಹೋಗಲು ತೀರ್ಮಾನಿಸಿದ್ದರು.

ಹೀಗಾಗಿ ಶಾಸಕರು ಆಕ್ರೋಶಗೊಂಡಿದ್ದರು. ಅವರನ್ನು ಸಮಾಧಾನ ಪಡಿಸಲು ನಾಯಕರು ಹರ ಸಾಹಸ ಪಟ್ಟರು ಎಂದು ತಿಳಿದು ಬಂದಿದೆ.

ಇಡೀ ದಿನ ಶಾಸಕರು ಹೊಟೇಲ್‌ನಿಂದ ಹೊರ ಹೋಗದಂತೆ ನೋಡಿಕೊಂಡ ನಾಯಕರು ಮೊಬೈಲ್‌ ಕೂಡ ಕೊಡದಿದ್ದರಿಂದ ಶಾಸಕರು ಮನೆಯವರಿಗೆ ಮಾತನಾಡಲು ಮೊಬೈಲ್‌ ನೀಡುವಂತೆ ಮನವಿ ಮಾಡಿಕೊಂಡರು ಎನ್ನಲಾಗಿದೆ. ಆದರೂ ಕೈ ನಾಯಕರು ಆಪರೇಷನ್‌ ಕಮಲದ ಆತಂಕದಿಂದ ಶಾಸಕರನ್ನು ಸಮಾಧಾನ ಪಡಿಸಿದರು ಎಂದು ತಿಳಿದು ಬಂದಿದೆ.

ಸಂಜೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌, ಸಿದ್ದರಾಮಯ್ಯ, ಕೆ.ಸಿ. ವೇಣುಗೋಪಾಲ್‌, ಡಿ.ಕೆ. ಶಿವಕುಮಾರ್‌, ಎಸ್‌.ಆರ್‌. ಪಾಟೀಲ್‌, ಆರ್‌.ವಿ. ದೇಶಪಾಂಡೆ, ಎಚ್‌.ಕೆ. ಪಾಟೀಲ್‌ ಸೇರಿ ಹಿರಿಯ ನಾಯಕರ ಸಮ್ಮುಖದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿ, ರಾತ್ರಿಯೇ ಬಸ್‌ನಲ್ಲಿ ಬೆಂಗಳೂರಿಗೆ ಆಗಮಿಸಿದರು. ಜೆಡಿಎಸ್‌ ಶಾಸಕರೂ ಶುಕ್ರವಾರ ರಾತ್ರಿಯೇ ಹೈದರಾಬಾದ್‌ ನಿಂದ ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next