Advertisement

ಕೈ ಕೊಟ್ಟ ಮುಂಗಾರು; ಬಿತ್ತನೆ ಪ್ರಮಾಣ ಕುಸಿತ

07:08 AM Jul 03, 2019 | Lakshmi GovindaRaj |

ಚಿತ್ರದುರ್ಗ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ಕೈ ಕೊಟ್ಟಿದೆ. ವರುಣನ ಮುನಿಸಿನಿಂದಾಗಿ ತೋಟಗಾರಿಕೆ ಬೆಳೆಗಳ ಬಿತ್ತನೆ ಪ್ರಮಾಣ ಕುಂಠಿತಗೊಂಡಿದೆ. ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಆಲೂಗಡ್ಡೆ, ಟೊಮ್ಯಾಟೋ, ಮೆಣಸಿನಕಾಯಿ ಬಿತ್ತನೆ ಪ್ರಮಾಣ ಕ್ಷೀಣಿಸಿದೆ.

Advertisement

ಮೇ ತಿಂಗಳ ಕೊನೆಯಲ್ಲಿ ಬರಬೇಕಿದ್ದ ಮಳೆ ಹಾಗೂ ಜೂನ್‌ ಮೊದಲ ವಾರದಿಂದ ಆರಂಭಗೊಳ್ಳಬೇಕಿದ್ದ ಮುಂಗಾರು ಮಳೆಯಾಗದ ಪರಿಣಾಮ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಕಳೆದ ವರ್ಷ ಈ ವೇಳೆಗೆ ರಾಜ್ಯದ 2,93,367 ಲಕ್ಷ ಹೆಕ್ಟೇರ್‌ ಒಟ್ಟು ಗುರಿಯಲ್ಲಿ 49,512.7 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ ವರ್ಷ ಕೇವಲ 23,435.64 ಹೆಕ್ಟೇರ್‌ ಪ್ರದೇಶದಲ್ಲಷ್ಟೇ ಬಿತ್ತನೆಯಾಗಿದೆ.

ಒಟ್ಟು 28,294 ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬಿತ್ತನೆ ಗುರಿ ಇದ್ದು, 9487.14 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ಕಳೆದ ವರ್ಷ ಇದೇ ವೇಳೆಗೆ 18,860 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಅತಿ ಹೆಚ್ಚು ಬೆಳೆಯಲಾಗುತ್ತಿದ್ದು, ಜಿಲ್ಲೆಯ 16,825 ಹೆಕ್ಟೇರ್‌ ಗುರಿಯಲ್ಲಿ ಕೇವಲ 7972.14 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಆಗಿದೆ. ಕಳೆದ ವರ್ಷ ಇದೇ ವೇಳೆಗೆ 18,134 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು.

ರಾಜ್ಯದಲ್ಲಿ ಆಲೂಗಡ್ಡೆ ಬೆಳೆಯುವ ಎರಡನೇ ಜಿಲ್ಲೆ ಹಾಗೂ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ 5604 ಹೆಕ್ಟೇರ್‌ ಗುರಿ ಪೈಕಿ ಕೇವಲ 1437 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ ಇದೇ ವೇಳೆಗೆ 3996 ಹೆಕ್ಟೇರ್‌ನಷ್ಟು ಬಿತ್ತನೆ ಮಾಡಲಾಗಿತ್ತು.

ಇನ್ನು ಬೆಳಗಾವಿ ಜಿಲ್ಲೆಯಲ್ಲಿ 1567 ಹೆಕ್ಟೇರ್‌ ಗುರಿಯಲ್ಲಿ ಬರೀ 57 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ ಇದೇ ವೇಳೆಗೆ 1724 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು. ಧಾರವಾಡ ಜಿಲ್ಲೆಯ 1153 ಹೆಕ್ಟೇರ್‌ ಗುರಿಯಲ್ಲಿ ಕೇವಲ 15 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಆಲೂಗಡ್ಡೆ ಬಿತ್ತನೆ ಅವ ಧಿ ಮುಗಿಯುತ್ತಿದ್ದರೂ ಮಳೆಯಾಗದಿರುವುದರಿಂದ ಬಿತ್ತನೆ ಪ್ರಮಾಣ ಸಂಪೂರ್ಣ ಕುಸಿದಿದೆ.

Advertisement

ಈರುಳ್ಳಿ ಬೆಳೆಗಾರರಿಗೂ ಕಣ್ಣೀರು: ರಾಜ್ಯದ 1,72,805 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ. ಆದರೆ ಇದುವರೆಗೆ 8010.50 ಹೆಕ್ಟೇರ್‌ ಪ್ರದೇಶದಲ್ಲಷ್ಟೇ ಬಿತ್ತನೆಯಾಗಿದೆ. ಈರುಳ್ಳಿ ಬಿತ್ತನೆ ಅವಧಿಯೂ ಬಹುತೇಕ ಮುಗಿದಿದ್ದು ಬೀಜ, ಗೊಬ್ಬರ ಖರೀದಿಸಿ ಮಳೆಗಾಗಿ ಕಾಯುತ್ತಿರುವ ರೈತರು ಕಣ್ಣೀರು ಸುರಿಸುವಂತಾಗಿದೆ.

ಈರುಳ್ಳಿ ಬೆಳೆಯುವ ಜಿಲ್ಲೆಗಳಲ್ಲಿ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿರುವ ಗದಗ ಜಿಲ್ಲೆಯ 40,950 ಹೆಕ್ಟೇರ್‌ ಬಿತ್ತನೆ ಗುರಿಯಲ್ಲಿ ಕೇವಲ 500 ಹೆಕ್ಟೇರ್‌ ಬಿತ್ತನೆಯಾಗಿದೆ. ಎರಡನೇ ಸ್ಥಾನದಲ್ಲಿರುವ ಧಾರವಾಡ ಜಿಲ್ಲೆಯಲ್ಲಿ 33,968 ಹೆಕ್ಟೇರ್‌ ಬಿತ್ತನೆ ಗುರಿ ಇದ್ದು, ಈ ವರೆಗೂ ಬಿತ್ತನೆಯೇ ಆಗಿಲ್ಲ. ಮೂರನೇ ಸ್ಥಾನದಲ್ಲಿರುವ ಬಾಗಲಕೋಟೆಯಲ್ಲಿ 23,100 ಹೆಕ್ಟೇರ್‌ ಬಿತ್ತನೆ ಗುರಿ ಇದ್ದು, ಇಲ್ಲಿಯೂ ಬಿತ್ತನೆ ಆಗಲೇ ಇಲ್ಲ.

ನಾಲ್ಕನೇ ಸ್ಥಾನದಲ್ಲಿರುವ ಚಿತ್ರದುರ್ಗದಲ್ಲಿ 19,045 ಹೆಕ್ಟೇರ್‌ ಗುರಿ ಪೈಕಿ 2095 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಮಳೆ ಕೊರತೆಯಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿತ್ತನೆಯೇ ಆಗದಿರುವುದರಿಂದ ಸಹಜವಾಗಿಯೇ ಬೆಳೆ ಇಲ್ಲದೆ ಟೊಮ್ಯಾಟೋ, ಆಲೂಗಡ್ಡೆ ಸೇರಿದಂತೆ ತರಕಾರಿ, ಧಾನ್ಯದ ಬೆಲೆಗಳೆಲ್ಲ ಏರಿಕೆಯಾದರೂ ಅಚ್ಚರಿಪಡಬೇಕಿಲ್ಲ.

ಮೆಣಸು ಬಿತ್ತನೆಯೂ ಅಷ್ಟಕ್ಕಷ್ಟೆ: ಮೆಣಸಿನಕಾಯಿ ಉತ್ಪಾದನೆಯಲ್ಲಿ ಮುಂಚೂಣಿ ಜಿಲ್ಲೆಯಾಗಿರುವ ಧಾರವಾಡದಲ್ಲಿ 32,799 ಹೆಕ್ಟೇರ್‌ ಪ್ರದೇಶದ ಬಿತ್ತನೆ ಗುರಿಯಲ್ಲಿ ಕೇವಲ 12 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಹಾವೇರಿಯಲ್ಲಿ 13,598 ಹೆಕ್ಟೇರ್‌ ಹಾಗೂ ಮೂರನೇ ಸ್ಥಾನದ ಬಾಗಲಕೋಟೆಯಲ್ಲಿ 3360 ಹೆಕ್ಟೇರ್‌ ಬಿತ್ತನೆ ಗುರಿ ನಿಗದಿಪಡಿಸಲಾಗಿತ್ತು. ಆದರೆ ಇವೆರಡೂ ಜಿಲ್ಲೆಗಳಲ್ಲಿ ಬಿತ್ತನೆಯೇ ಆರಂಭವಾಗಿಲ್ಲ.

ಟೊಮ್ಯಾಟೋ ಉತ್ಪಾದನೆ ಕುಸಿತ: ಟೊಮ್ಯಾಟೋ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕೋಲಾರದಲ್ಲಿ 3150 ಹೆಕ್ಟೇರ್‌ ಗುರಿಯಲ್ಲಿ ಶೂನ್ಯ ಸಾಧನೆಯಾಗಿದೆ. ಎರಡನೇ ಸ್ಥಾನದ ಚಿಕ್ಕಮಗಳೂರಿನಲ್ಲಿ 1973 ಹೆಕ್ಟೇರ್‌ ಬಿತ್ತನೆ ಗುರಿ ಪೈಕಿ ಕೇವಲ 325 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಮೂರನೇ ಸ್ಥಾನದಲ್ಲಿರುವ ಹಾವೇರಿಯಲ್ಲಿ 1833 ಹೆಕ್ಟೇರ್‌ ಬಿತ್ತನೆ ಗುರಿಯಲ್ಲಿ ಶೂನ್ಯ ಸಾಧನೆ ಮಾಡಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಟೊಮ್ಯಾಟೋ ಬೆಳೆಯಲಾಗುತ್ತಿದ್ದು, 24,516 ಹೆಕ್ಟೇರ್‌ ಪ್ರದೇಶದ ಒಟ್ಟೂ ಗುರಿಯಲ್ಲಿ ಕೇವಲ 3410.80 ಹೆಕ್ಟೇರ್‌ನಲ್ಲಷ್ಟೇ ಬಿತ್ತನೆಯಾಗಿದೆ.

ಈರುಳ್ಳಿ ಬಿತ್ತನೆ ಸಮಯ ಮುಗಿಯುತ್ತ ಬಂದಿದೆ. ಮಳೆ ಕೊರತೆಯಿಂದಾಗಿ ಬಿತ್ತನೆ ಪ್ರಮಾಣ ಕಡಿಮೆಯಾಗಿದ್ದು, ಮುಂಬರುವ ದಿನಗಳಲ್ಲಿ ತೋಟಗಾರಿಕೆ ಉತ್ಪನ್ನಗಳ ಬೆಲೆ ಏರುವ ಸಾಧ್ಯತೆ ಇದೆ.
-ಡಾ| ಜಿ. ಸವಿತಾ, ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ ಚಿತ್ರದುರ್ಗ

* ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next