ಕಲಬುರಗಿ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ ಸಹೋದರರೊಬ್ಬರನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಕೆಲ್ಲೂರ (ಕೆ) ಸಮೀಪ ಮಂಗಳವಾರ ನಡೆದಿದೆ. ಹಣಮಂತ ಚಂದ್ರಶ್ಯಾ ಕೂಡಲಗಿ (40) ಕೊಲೆಯಾದ ವ್ಯಕ್ತಿ. ಮತ್ತಿಬ್ಬರು ಗಾಯಗೊಂಡಿದ್ದಾರೆ.
ಜೇವರ್ಗಿ ತಾಲೂಕಿನ ಕೂಡಲಗಿ ಗ್ರಾಮದಿಂದ ಕೊಲ್ಲೂರ ಕೆ. ಗ್ರಾಮದ ಮಾರ್ಗವಾಗಿ ಕಲಬುರಗಿ ನಗರಕ್ಕೆ ಇನ್ನೋವಾ ಕಾರಿನಲ್ಲಿ ಹಣಮಂತ ಕೂಡಲಗಿ, ಮಗ ಕಿರಣ್ ಸೇರಿದಂತೆ ಆರು ಜನರು ಬರುತ್ತಿದ್ದರು. ಇವರೆಲ್ಲರೂ ಲಕೀÒ$¾ ದೇವರ ಪೂಜೆ ಊಟಕ್ಕೆಂದು ಕೂಡಲಗಿ ಗ್ರಾಮಕ್ಕೆ ಹೋಗಿದ್ದರು ಎನ್ನಲಾಗಿದೆ. ಗ್ರಾಮದಿಂದ ವಾಪಸ್ ಆಗುತ್ತಿದ್ದಾಗ ಸಂಜೆ 4:30ರ ಸುಮಾರಿಗೆ ದುಷ್ಕರ್ಮಿಗಳು ಕಾರು ಅಡ್ಡಗಟ್ಟಿ ದಾಳಿ ಮಾಡಿದ್ದರು.
ಹಣಮಂತ ಕೂಡಲಗಿ ಅವರನ್ನೇ ಗುರಿಯಾಗಿಸಿಕೊಂಡು ಮಾರಕಾಸ್ತ್ರಗಳನ್ನು ಬೀಸಿದ್ದರು. ಸುಮಾರು ಎಂಟು ಜನರ ತಂಡ ಈ ದಾಳಿ ನಡೆಸಿ, ಹಣಮಂತ ಕೂಡಲಗಿ ತಲೆ ಭಾಗಕ್ಕೆ ಹೊಡೆದಿದ್ದಾರೆ. ಇದರಿಂದ ಸ್ಥಳದಲ್ಲೇ ಕುಸಿದು ಬಿದ್ದು, ಹಣಮಂತ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.
ಉಳಿದವರಿಗೆ ಏನೂ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ಹಣಮಂತ ಕಾಂಗ್ರೆಸ್ ಮುಖಂಡರಾದ ಜಿಪಂ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ ಅವರ ಕಿರಿಯ ಸಹೋದರ. ಒಂದೂವರೆ ವರ್ಷದ ಹಿಂದೆ ಮಯೂರ ಗ್ರಾಮದ ಬಿಜೆಪಿ ಕಾರ್ಯಕರ್ತ ಶಿವಲಿಂಗ ಭಾವಿಕಟ್ಟಿ ಕೊಲೆ ಪ್ರಕರಣಕ್ಕೆ ಪ್ರತೀಕಾರವಾಗಿ ಈ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಬೆಚ್ಚಿ ಬಿದ್ದ ಗ್ರಾಮಸ್ಥರು: ನಡುರಸ್ತೆಯಲ್ಲಿ ಹಾಡಹಗಲೇ ನಡೆದ ಕೊಲೆ ಪ್ರಕರಣದಿಂದ ಕೂಡಲಗಿ ಮತ್ತು ಕೆಲ್ಲೂರ (ಕೆ) ಗ್ರಾಮ ಸೇರಿ ಸುತ್ತಮತ್ತಲಿನ ಗ್ರಾಮಸ್ಥರು ಬೆಚ್ಚಿ ಬೀಳುವಂತೆ ಆಗಿದೆ. ಹಣಮಂತ ಕೂಡಲಗಿ ಕೊಲೆ ವಿಷಯ ತಿಳಿದು ಘಟನಾ ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮಾವಣೆ ಆಗಿದ್ದರು.
ಸ್ಥಳಕ್ಕೆ ದಾವಿಸಿದ್ದ ಹಣಮಂತ ಕೂಡಲಗಿ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿಮಿ ಮರಿಯಂ ಜಾರ್ಜ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಡಿವೈಎಸ್‌ಪಿ ತಾಯಪ್ಪ ದೊಡ್ಡಮನಿ, ಜೇವರ್ಗಿ ಸಿಪಿಐ ಶಿವಪ್ರಸಾದ, ನೆಲೋಗಿ ಪಿಎಸ್‌ಐ ರಾಜಕುಮಾರ ಜಮಗೊಂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ನೆಲೋಗಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.