Advertisement

ಹಂಪಿಯಲ್ಲಿ ಕಂಡ ಹನಾಲು ಗುಬ್ಬಿ!

04:31 PM May 04, 2018 | |

ಕುಷ್ಟಗಿ: ಹಿಮಾಲಯದ ಕಾಡುಗಳಲ್ಲಿ ವಾಸವಿರುವ, ಅಪರೂಪದ ಹನಾಲು ಗುಬ್ಬಿ(ಇಂಡಿಯನ್‌ ಪಿಟ್ಟಾ) ಹೊಸಪೇಟೆ ತಾಲೂಕಿನ ಹಂಪಿ ಪ್ರದೇಶದಲ್ಲಿ ಕಂಡು ಬಂದಿದೆ.

Advertisement

ಹಿಮಾಲಯದ ಕಾಡುಗಳಲ್ಲಿರುವ ಮರಗಳಲ್ಲಿ ವಾಸವಿರುವ ಈ ಹಕ್ಕಿ ಮರದ ಕೊಂಬೆಗಳಲ್ಲಿ ಕೂರುವುದೇ ಅಪರೂಪ. ಸಾಧಾರಣವಾಗಿ ನೆಲದ ಮೇಲೆ ಕುಪ್ಪಳಿಸಿ, ಕುಪ್ಪಳಿಸಿ ಓಡಾಡುವ ಈ ಗುಬ್ಬಿ ತನ್ನ ಚೋಟುದ್ದ ಬಾಲವನ್ನು ಲಯಬದ್ಧವಾಗಿ ಕುಣಿಸುತ್ತದೆ. ಬೆಳಗಿನ ನಸುಕಿನ ಹಾಗೂ ಸಂಜೆ ಸಮಯದಲ್ಲಿ ವಿಟ್ಟಿ ಎಂದು ಮೆಲುದನಿಯಲ್ಲಿ ಕೂಗುತ್ತದೆ. ನೆಲ ಕೆದಕುತ್ತಾ, ತರಗೆಲೆಗಳನ್ನು ಎತ್ತಿ ಹಾಕುತ್ತ ಹುಳು ಹುಪ್ಪಡಿ ಹಿಡಿದು ತಿನ್ನುತ್ತದೆ.

ಹಿಮಾಲಯ ಪ್ರದೇಶದಲ್ಲಿ ಮೇ ತಿಂಗಳಿನಿಂದ ಆಗಸ್ಟ್‌ ತಿಂಗಳಿನಲ್ಲಿ ಹುಲ್ಲು ಕಡ್ಡಿಗಳನ್ನು ಒಟ್ಟು ಮಾಡಿ ಸಾಧಾರಣ ಎತ್ತರದ ಮರಗಳ ಮೇಲೆ ಗೂಡು ಕಟ್ಟುತ್ತದೆ. ದಕ್ಷಿಣ ಭಾರತ ಕಾಡುಗಳಲ್ಲಿ ಇದು ಗೂಡು ಕಟ್ಟುವುದು ಅಪರೂಪ. ಈ ಪಕ್ಷಿ ಭಾರತ, ಬಾಂಗ್ಲಾ, ಸಿಲೋನ್‌ ಭಾಗದಲ್ಲಿ ಕಂಡು ಬರುತ್ತದೆ.

ಈ ಹಕ್ಕಿ ಮೈನಾ ಗಾತ್ರದ್ದಾಗಿದ್ದು, ಹಳದಿ ಎದೆ, ನೀಲಿ ಪಟ್ಟೆಗಳ ಹಸಿರು ರೆಕ್ಕೆ, ಬಾಲದ ಕೆಳಗೆ ರಕ್ತ ಕೆಂಪನೆಯ ಬಣ್ಣ, ಹಾರುವಾಗ ಬಿಳಿ ಪಟ್ಟೆ ಪ್ರಧಾನವಾಗಿ ಕಾಣುತ್ತಿರುವುದರಿಂದ ಈ ಹಕ್ಕಿಗೆ ನವರಂಗ ಎಂತಲೂ ಕರೆಯುವುದುಂಟು. ಮೇ ತಿಂಗಳಿನಲ್ಲಿ ಹಿಮಾಲಯದ ಕಾಡುಗಳಲ್ಲಿ ಇರಬೇಕಾದ ಹನಾಲು ಗುಬ್ಬಿ ಹಂಪೆಯ ಕಲ್ಲು ಬಂಡೆಗಳ ಪರಿಸರದಲ್ಲಿ ಇರುವುದು ಇನ್ನಷ್ಟು ಅಪರೂಪ ಎನಿಸಿದೆ ಎನ್ನುತ್ತಾರೆ ಪಕ್ಷಿ ಛಾಯಾಗ್ರಾಹಕ, ಬಾಗಲಕೋಟೆ ಜಿಪಂ ಹಣಕಾಸು ಇಲಾಖೆಯಲ್ಲಿ ಹಿರಿಯ ಉಪನಿರ್ದೇಶಕರಾಗಿ ಸೇವೆಯಲ್ಲಿರುವ ಅಮೀನ್‌ ಅತ್ತಾರ.

ಮೇ.1ರಂದು ತಾವು ಮತ್ತೋರ್ವ ಛಾಯಾಗ್ರಾಹಕ ಹನಮಂತ ಹರ್ಲಾಪುರ ಅವರೊಂದಿಗೆ ಕ್ಯಾಮೆರಾದೊಂದಿಗೆ ತಿರುಗಾಟದಲ್ಲಿದ್ದಾಗ, ಹಂಪಿಯ ಪಂಪಯ್ಯಸ್ವಾಮಿ ಮಳಿಮಠ ಅವರ ತೋಟದಲ್ಲಿ ಕಂಡ ಕ್ಷಣವೇ ಫೋಟೋ ಕ್ಲಿಕ್ಕಿಸಲಾಯಿತು. ಇನ್ನಷ್ಟು ಛಾಯಾಚಿತ್ರಗಳ ಸೆರೆಗೆ ಯತ್ನಿಸಿದಾಗ ಅದು ಕಣ್ಮರೆಯಾಯಿತು. ಈ ಪಕ್ಷಿ ನಮ್ಮ ಕ್ಯಾಮರಾದಲ್ಲಿ ಸೆರೆ ಸಿಕ್ಕಿರುವುದು ಜೀವಮಾನದ ಅವಿಸ್ಮರಣೀಯ ಕ್ಷಣ ಎನ್ನುತ್ತಾರೆ ಛಾಯಾಗ್ರಾಹಕ ಅಮೀನ್‌.

Advertisement

ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next