Advertisement

Hanagodu Society: ಶೇ.75ರಷ್ಟು ಸಾಲ ವಸೂಲಿ; ರೈತರಿಂದ 3 ಕೋಟಿ ಸಾಲ ಬಾಕಿ

10:11 AM Sep 23, 2023 | Team Udayavani |

ಹುಣಸೂರು: ತಾಲೂಕಿನ ಹನಗೋಡು ಕೃಷಿ ಪತ್ತಿನ ಸಹಕಾರ ಸಂಘ ಕಳೆದ ಸಾಲಿನಲ್ಲಿ 680 ಮಂದಿಗೆ ಒಟ್ಟಾರೆ 8.88 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರವಿಕುಮಾರ್ ತಿಳಿಸಿದರು.

Advertisement

ಸಂಘದ ಕಚೇರಿ ಆವರಣದಲ್ಲಿ ನಡೆದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 590 ಮಂದಿ ಕೃಷಿಕರಿಗೆ 8.36 ಕೋಟಿ ರೂ. ಬೆಳೆ ಸಾಲ ಹಾಗೂ 90 ಮಂದಿ ತಂಬಾಕು ಬೆಳೆಗಾರರಿಗೆ 52.80 ಲಕ್ಷ ರೂ. ಸೌದೆ ಸಾಲ ವಿತರಿಸಲಾಗಿದ್ದು, ಶೇ.75ರಷ್ಟು ಮಾತ್ರ ಸಾಲ ವಸೂಲಾತಿಯಾಗಿದೆ ಎಂದರು.

ಸಂಘದ ಮೂಲಕ ಹಿಂದೆ ರೈತರು ಪಡೆದಿದ್ದ ವಿವಿಧ ಸಾಲದ ಬಾಬ್ತು ಸುಮಾರು ಮೂರು ಕೋಟಿ ರೂ. ಸುಸ್ತಿ ಸಾಲ ಬಾಕಿಯಿಂದಾಗಿ ಹೊಸಬರಿಗೆ ಸಾಲ ಸೌಲಭ್ಯ ಕಲ್ಪಿಸಲು ತೊಂದರೆಯಾಗಿದೆ. ಅಲ್ಲದೆ ಸರಕಾರದಿಂದ ರೈತರ ಸಾಲ ಮನ್ನಾ ಬಾಬ್ತು, ಶೇ.3ರ ಬಡ್ಡಿ ಬಾಕಿ ಸೇರಿದಂತೆ ವಿವಿಧ ಬಾಬ್ತುಗಳು ಸೇರಿದಂತೆ ಒಟ್ಟಾರೆ 39.75 ಲಕ್ಷ ರೂ. ಬಾಕಿ ಬರಬೇಕಿದ್ದು, ಸಂಘದ ಆರ್ಥಿಕ ಪ್ರಗತಿಗೆ ಅಡಚಣೆಯಾಗಿದ್ದು, ಬಾಕಿ ಇರುವ ರೈತರು ಸಾಲ ಮರುಪಾವತಿಸಿ ಸಂಘದ ಉಳಿವಿಗೆ ಸಹಕರಿಸಿ ಮನವಿ ಮಾಡಿದರು.

ಅಪೆಕ್ಸ್ ಬ್ಯಾಂಕ್‌ ನಿಂದ ಕಟ್ಟಡಕ್ಕೆ 50 ಲಕ್ಷ ನೆರವು:

ಸಂಘದ ಕಟ್ಟಡ ಶಿಥಿಲಗೊಂಡಿದ್ದು, ಕೆಡವಿ ನೂತನ ಕಟ್ಟಡ ನಿರ್ಮಿಸಲು ಅಪೆಕ್ಸ್ ಬ್ಯಾಂಕ್‌ ಉಪಾಧ್ಯಕ್ಷ, ಶಾಸಕ ಜಿ.ಡಿ. ಹರೀಶ್‌ಗೌಡರು ಅಪೆಕ್ಸ್ ಬ್ಯಾಂಕಿನಿಂದ 50 ಲಕ್ಷ ರೂ. ನೆರವು ಕಲ್ಪಿಸುವ ಭರವಸೆ ನೀಡಿದ್ದಾರೆ. ಸಂಘದ ವತಿಯಿಂದ ಐದು ಸಾವಿರ ಮರಣ ನಿಧಿ, ಮುಂದೆ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೆರವೇರಿಸಲಾಗುವುದೆಂದು ಪ್ರಕಟಿಸಿದರು.

Advertisement

ನಿರ್ದೇಶಕ ಎಚ್.ಆರ್.ರಮೇಶ್ ಮಾತನಾಡಿ, ರೈತರು ಸರಕಾರ ಸಾಲ ಮನ್ನಾಕ್ಕೆ ಕಾಯ್ದೆ ಸಕಾಲದಲ್ಲಿ ಮರು ಪಾವತಿ ಮಾಡಿದಲ್ಲಿ ಮಾತ್ರ ಸಂಘದ ಉಳಿವು ಸಾಧ್ಯವೆಂದರೆ, ಮತ್ತೊರ್ವ ನಿರ್ದೇಶಕ ಲೋಕೆಶ್ ಸರಕಾರದಿಂದ ಸಾಲ ಮನ್ನಾ ಬಾಬ್ತು ಬಾಕಿ ಇದೆ. ಹಿಂದಿನ ಸಿಇಓ ಬೊಮ್ಮರಾಯಿ ಗೌಡ ದುರುಪಯೋಗಪಡಿಸಿಕೊಂಡಿರುವ ಸುಮಾರು 70 ಲಕ್ಷ ರೂ. ವಸೂಲಿಯಾಗದೆ ಸಂಘ ನಷ್ಟ ಹೊಂದುವಂತಾಗಿದೆ. ಐ.ಪಿ.ಸೆಟ್, ಹೊಸಬರಿಗೆ ಸಾಲ ನೀಡಲು ಆಗುತ್ತಿಲ್ಲವೆಂದರು.

ಸದಸ್ಯರಾದ ಪುಟ್ಟಸ್ವಾಮಪ್ಪ, ಈಗ ಬರಗಾಲವಿದ್ದು, ಸರಕಾರ ಕನಿಷ್ಟ ಬಡ್ಡಿ ಮನ್ನಾ ಮಾಡುವಂತೆ ನಿರ್ಣಯ ಕೈಗೊಳ್ಳುವಂತೆ ಮನವಿ ಮಾಡಿದರು.

ಸಿಇಓ. ಪುಷ್ಪಕಲಾ ಮಾತನಾಡಿ, ಸಂಘವು 2022-23 ನೇ ಸಾಲಿನ ಲೆಕ್ಕಪತ್ರ ಮಂಡಿಸಿ, ಸಂಘವು 1.05 ಲಕ್ಷ ರೂ. ಲಾಭದಲ್ಲಿದೆ ಎಂದು ತಿಳಿಸಿ, 2023-24 ನೇ ಸಾಲಿನ ಆಯವ್ಯಯದ ಅನುಮೋದನೆ ಪಡೆದುಕೊಂಡರು.

ಉಪಾಧ್ಯಕ್ಷೆ ಸರೋಜಮ್ಮ, ನಿರ್ದೇಶಕ ಜವರೇಗೌಡ, ಡಾ.ಗಣಪತಿ, ನೇರಳಕುಪ್ಪೆ ಮಹದೇವ್ ಮತ್ತಿತರ ಸದಸ್ಯರು ಮಾತನಾಡಿದರು. ನಿರ್ದೇಶಕರಾದ ರಾಮೇಗೌಡ, ಗೀತಾ,ಉಜ್ಜನಿಗೌಡ, ಮಹದೇವಯ್ಯ, ಚಂದ್ರನಾಯಕ, ಲೆಕ್ಕಾಧಿಕಾರಿ ಜಯರಾಂ, ಸಿಬ್ಬಂದಿ ರೂಪ, ಜಮೀಲ್‌ಪಾಷ, ಮನೋಜ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next