ಹಾವೇರಿ: ನಗರದ ಹೊರವಲಯದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆಗೆ ನ್ಯಾಯ ಹಾಗೂ ಸೂಕ್ತ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂತ್ರಸ್ತೆಯ ಸಹೋದರ ಮನವಿ ಸಲ್ಲಿಸಿದರು.
ತಾಲೂಕಿನ ನರಸೀಪುರದಲ್ಲಿ ಸೋಮವಾರ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದಾಗ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಜ.8ರಂದು ಪರಿಚಿತ ವ್ಯಕ್ತಿಯೊಂದಿಗೆ ಹಾನಗಲ್ಲ ತಾಲೂಕಿನ ಕ್ರಾಸ್ ನಾಲ್ಕರ ಬಳಿಯ ಲಾಡ್ಜ್ ಗೆ ಬಂದಿದ್ದಾಗ ಅನಾಮಧೇಯ ಯುವಕರ ಗುಂಪು ಲಾಡ್ಜ್ ನಲ್ಲಿ ಹಲ್ಲೆ ನಡೆಸಿ, ದೈಹಿಕವಾಗಿ ಹಿಂಸೆ ಮಾಡಿ, ಸಾರ್ವಜನಿಕವಾಗಿ ಅವಮಾನಿಸಿದೆ. ಅಲ್ಲದೆ ಅವಾಚ್ಯ ಪದಗಳಿಂದ ನಿಂದಿಸಿ ಮಾನಹಾನಿ ಮಾಡಿದೆ. ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಯುವಕರ ಗುಂಪು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಬಳಿಕ ಅವಳನ್ನು ಶಿರಸಿ ಬಸ್ ಹತ್ತಿಸಿ ಹೋಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಹಾನಗಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ದರಿಂದ ತಾವುಗಳು ಈ ಪ್ರಕರಣದ ಗಂಭೀರವಾಗಿ ಪರಿಗಣಿಸಿ, ಸಮಗ್ರ ತನಿಖೆ ಮಾಡಿ, ಸಂತ್ರಸ್ತ ಸಹೋದರಿಗೆ ನ್ಯಾಯ ಒದಗಿಸಬೇಕು. ಜತೆಗೆ ಆಕೆಗೆ ಸರಕಾರಿ ಉದ್ಯೋಗ ಹಾಗೂ ಪರಿಹಾರ ನೀಡಬೇಕು ಎಂದು ಮನವಿ ಸಲ್ಲಿಸಿದರು.
ಮತ್ತಿಬ್ಬರು ಆರೋಪಿಗಳ ಸೆರೆ
ಸಾಮೂಹಿಕ ಅತ್ಯಾಚಾರ, ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಸಾದಿಕ್ ಬಾಬುಸಾಬ್ ಅಗಸಿಮನಿ (29) ಹಾಗೂ ಶೋಯೆಬ್ ನಿಯಾಜ್‌ಅಹ್ಮದ್ ಮುಲ್ಲಾ (19) ಬಂ ಧಿತರು. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಒಟ್ಟು 8 ಜನರನ್ನು ಬಂಧಿ ಸಲಾಗಿದೆ. ಅದರಲ್ಲಿ ಮಹ್ಮದಸೈಫ್ ಅಬ್ದುಲಸತ್ತಾನ ಸಾವಿಕೇರಿ ಎಂಬಾತ ಅಕ್ಕಿಆಲೂರಿನ ಬಾಳೂರ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ.