Advertisement

ಹಾನಗಲ್ಲ:ಕಳಪೆ ಬಿತ್ತನೆ ಬೀಜ ತಡೆಗೆ ಕ್ಯೂಆರ್‌ ಕೋಡ್‌

04:49 PM May 30, 2024 | Team Udayavani |

ಉದಯವಾಣಿ ಸಮಾಚಾರ
ಹಾನಗಲ್ಲ: ಮುಂಗಾರು ಬಿತ್ತನೆಗೆ ಸಜ್ಜಾಗಿರುವ ರೈತರಿಗೆ ನಕಲಿ ಹಾಗೂ ಕಳಪೆ ಬಿತ್ತನೆ ಬೀಜಗಳು ಪೂರೈಕೆಯಾಗದಂತೆ ಕಠಿಣ ಕ್ರಮಕ್ಕೆ ಮುಂದಾಗಿರುವ ಸರ್ಕಾರ ಬಿತ್ತನೆ ಬೀಜಗಳ ಪಾಕೆಟ್‌ ಮೇಲೆ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ವ್ಯವಸ್ಥೆ ಜಾರಿಗೊಳಿಸಿದೆ.

Advertisement

ರಾಜ್ಯಾದ್ಯಂತ ಕೃಷಿ ಇಲಾಖೆ ಮೂಲಕ ಬಿತ್ತನೆ ಬೀಜ ವಿತರಿಸುವ ಕೇಂದ್ರಗಳಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ವ್ಯವಸ್ಥೆ
ಕಲ್ಪಿಸಲಾಗಿದೆ. ರೈತರು ಹಣ ಸಂದಾಯ ಮಾಡಿ ಬೀಜ ಪಡೆಯುವ ಮುನ್ನ ಕ್ಯೂಆರ್‌ ಕೋಡ್‌ ಮೂಲಕ ಬಿತ್ತನೆ ಬೀಜದ ಚೀಲವನ್ನು ಪರಿಶೀಲಿಸಿ ರೈತರಿಗೆ ನೀಡಲಾಗುತ್ತಿದೆ. ಇದಕ್ಕೂ ಮೊದಲು ಬೀಜಗಳನ್ನು ಕೃಷಿ ಇಲಾಖೆ ದಾಸ್ತಾನು ಮಾಡುವ ಮೊದಲೇ ಕ್ಯೂಆರ್‌ ಕೋಡ್‌ ಪರಿಶೀಲಿಸಿ, ತಮಗೆ ಬರಬೇಕಾದ  ಸರಿಯಾದ ಬೀಜ ಬಂದಿದೆಯೇ ಎಂದು ಪರೀಕ್ಷಿಸಿದ ನಂತರವೇ ದಾಸ್ತಾನು ಮಾಡಲಾಗುತ್ತಿದೆ.

ಜಿಲ್ಲಾ ಕೇಂದ್ರಗಳಿಗೆ ಆಗಮಿಸುವ ಬಿತ್ತನೆ ಬೀಜಗಳನ್ನು ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ದಾಸ್ತಾನು ಮಾಡುತ್ತಾರೆ. ಬಳಿಕ ವಿವಿಧ ಕೇಂದ್ರಗಳಿಗೆ ಅಗತ್ಯಕ್ಕೆ ತಕ್ಕಂತೆ ಪೂರೈಸಲಾಗುತ್ತಿದೆ. ಬೀಜ ವಿತರಣಾ ಕೇಂದ್ರಗಳಲ್ಲೂ ಕ್ಯೂಆರ್‌ ಕೋಡ್‌ ಮೂಲಕ ಪರಿಶೀಲಿಸಿಯೇ ದಾಸ್ತಾನು ಮಾಡಲಾಗುತ್ತಿದೆ. ಎರಡೆರಡು ಬಾರಿ ಪರಿಶೀಲನೆ ಮಾಡುವುದರಿಂದ ಕಳಪೆ ಬೀಜ ಪೂರೈಕೆಗೆ ಕಡಿವಾಣ ಹಾಕಲು ಅನುಕೂಲವಾಗುತ್ತದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಕಂಪ್ಯೂಟರ್‌ನಲ್ಲಿ ದಾಖಲು: ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಆದ ಬಳಿಕವೇ ರೈತರಿಗೆ ಖರೀದಿ ರಶೀದಿ ನೀಡಲಾಗುತ್ತಿದೆ. ಅಲ್ಲದೇ
ರೈತರಿಗೆ ನೀಡಿದ ಬಿತ್ತನೆ ಬೀಜದ ಪ್ಯಾಕೆಟ್‌ ನ ಎಲ್ಲ ವಿವರಗಳು ಕಂಪ್ಯೂಟರ್‌ನಲ್ಲಿ ದಾಖಲಿಸಲಾಗುತ್ತಿದೆ. ರಿಯಾಯ್ತಿ ದರದ
ಬೀಜಗಳನ್ನು ಹೆಚ್ಚುವರಿಯಾಗಿ ಕೊಡಲು ಸಹ ಇಲ್ಲಿ ಅವಕಾಶ ಇಲ್ಲ.

ಆಯಾ ರೈತರ ಹೆಸರಿನಲ್ಲಿ ಬೀಜ ವಿತರಣೆಯಾಗಿರುವುದು ಕೂಡ ತಂತ್ರಾಂಶದಲ್ಲಿ ನಮೂದಾಗುತ್ತದೆ. ನಿಗದಿತ ಪ್ರಮಾಣದ ಬೀಜ ರೈತರಿಗೆ ನೀಡಿದ ನಂತರ ತಂತ್ರಾಂಶ ಲಾಕ್‌ ಆಗುತ್ತದೆ. ಅಲ್ಲದೇ ಬಿತ್ತನೆ ಬೀಜ ವಿತರಣೆ ಸಂದರ್ಭದಲ್ಲಿ ರೈತರಿಂದ ಅಗತ್ಯ ದಾಖಲೆ
ಪಡೆದು ಬೀಜ ವಿತರಣೆ ಮಾಡಲಾಗುತ್ತಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ರೈತರಿಗೂ ವಿಶ್ವಾಸ ಮೂಡುತ್ತಿದೆ ಕಳಪೆ ಬಿತ್ತನೆ ಬೀಜದಿಂದ ರೈತರಿಗಾಗುವ ನಷ್ಟ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ರೈತರಿಗೂ ವಿಶ್ವಾಸ ಮೂಡುತ್ತಿದೆ. ಬಿತ್ತನೆ ಬೀಜ ನೀಡಿದ ಸರಬರಾಜು ಕಂಪನಿಯ ಎಲ್ಲ ಮಾಹಿತಿ, ಆ ಬಗ್ಗೆ ಕೃಷಿ ಇಲಾಖೆಯಲ್ಲಿ ಎಲ್ಲ ದಾಖಲೆಗಳು ಇರುತ್ತದೆ. ಕಳಪೆ ಬೀಜ ನೀಡಿದರೆ ಸರಬರಾಜುದಾರರು ಕಠಿಣ ಕ್ರಮಕ್ಕೆ ಒಳಗಾಗುವ ಭೀತಿಯೂ ಇರುವುದರಿಂದ ಅಕ್ರಮ ಹಾಗೂ ಕಳಪೆ ಬೀಜ ಸರಬರಾಜು ಆಗುವ ಸಾಧ್ಯತೆ ಇಲ್ಲ.
●ಕೆ.ಮೋಹನಕುಮಾರ್‌, ಸಹಾಯಕ ಕೃಷಿ ನಿರ್ದೇಶಕ, ಹಾನಗಲ್ಲ

ರೈತನಿಗೆ ನ್ಯಾಯ ಒದಗಿಸಿದ ವ್ಯವಸ್ಥೆ
ರೈತರಿಗೆ ಸರ್ಕಾರ ರಿಯಾಯ್ತಿ ದರದಲ್ಲಿ ನೀಡುವ ಬಿತ್ತನೆ ಬೀಜ ಕಳಪೆ ಆಗಿರಬಾರದು ಎಂಬ ಒತ್ತಾಸೆ ನಮ್ಮದು. ಈ ಕ್ಯೂಆರ್‌ ಕೋಡ ಅಂತಹ ಅಕ್ರಮ, ಕಳಪೆ ಬಿತ್ತನೆ ಬೀಜ ವಿತರಣೆಗೆ ತಡೆ ಹಾಕಲಿದೆ. ಇದು ಹೊಸ ವ್ಯವಸ್ಥೆಯಾಗಿರುವುದರಿಂದ ಕಾದು ನೋಡಬೇಕು. ಮೋಸದ ಜಾಲಕ್ಕೆ ಆಗಾಗ ಸಿಕ್ಕು ಅನ್ಯಾಯಕ್ಕೊಳಗಾಗುವ ರೈತನಿಗೆ ಇಂತಹ ವ್ಯವಸ್ಥೆ ನ್ಯಾಯ ಒದಗಿಸಬಹುದು ಎಂಬ ವಿಶ್ವಾಸವಿದೆ.
●ಬಸಪ್ಪ ಪೂಜಾರ, ಸಮ್ಮಸಗಿ ರೈತ

■ ರವಿ ಲಕ್ಷ್ಮೇಶ್ವರ

Advertisement

Udayavani is now on Telegram. Click here to join our channel and stay updated with the latest news.

Next