Advertisement

ಹಂಪಿ ಉತ್ಸವ:  ಬೀದಿ ಬದಿಯ ವ್ಯಾಪಾರಸ್ಥರಿಗೆ ಸ್ಥಳಾಂತರದ ಭೀತಿ!

09:44 PM Jan 06, 2023 | Team Udayavani |

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಉತ್ಸವದ ದಿನಾಂಕ ಹತ್ತಿರ ಬರುತ್ತಿದಂತೇ ಇತ್ತ ಹಂಪಿಯ ಬೀದಿಬದಿಯ ವ್ಯಾಪಾರಸ್ಥರಿಗೆ ಸ್ಥಳಾಂತರದ ಭೀತಿ ಕಾಡುತ್ತಿದೆ. ಹೌದು! ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಹಂಪಿ ಗ್ರಾಮ ಪಂಚಾಯ್ತಿ ಎದುರಿನ ಪಾರ್ಕಿಂಗ್ ಸ್ಥಳದ ಗೂಡಂಗಡಿಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಲು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಮೌಖಿಕವಾಗಿ ಸೂಚನೆ ನೀಡಿರುವುದು ವ್ಯಾಪಾರಿಗಳ ಆತಂಕಕ್ಕೆ ಕಾರಣವಾಗಿದೆ.

Advertisement

ಈ ಸ್ಥಳದಲ್ಲಿ ಹೋಟೆಲ್, ಹೂ-ಹಣ್ಣು, ಕಾಯಿ, ಎಳನೀರು, ಬಾಳೆಹಣ್ಣು, ಬೊಂಬೆ ಮಾರಾಟ ಸೇರಿದಂತೆ ವಿವಿಧ ಬಗೆಯ ವ್ಯಾಪಾರದಿಂದ ಸ್ಥಳೀಯರು ಬದುಕು ಕಟ್ಟಿಕೊಂಡಿದ್ದಾರೆ. ಹಂಪಿ ಉತ್ಸವದಲ್ಲಿ ವ್ಯಾಪಾರ ನಡೆಸಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟರೆ, ಕೊರೊನಾ ಸಂಕಷ್ಠಕ್ಕೀಡಾದ ಸ್ಥಳೀಯರು ಕೈ ತುಂಬ ಹಣ ಗಳಿಸಬಹುದು ಎಂಬ ಆಸೆಯಲ್ಲಿದ್ದಾರೆ.

ರಥ ಬೀದಿ ವ್ಯಾಪಾರಿಗಳು
ಪೂರ್ವಜನರ ಕಾಲದಿಂದಲೂ ಹಂಪಿ ರಥ ಬೀದಿಯಲ್ಲಿ ವ್ಯಾಪಾರ ಮಾಡಿಕೊಂಡು ಬದುಕುಕಟ್ಟಿಕೊಂಡಿದ್ದ ಸಣ್ಣ-ಪುಟ್ಟ ವ್ಯಾಪಾರಿಗಳನ್ನು ಸರ್ಕಾರ ತೆರುವುಗೊಳಿಸಿತ್ತು. ಆಗ ಹಂಪಿ ಗ್ರಾಮ ಪಂಚಾಯ್ತಿ ಎದುರಿನ ಪಾರ್ಕಿಂಗ್ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದ ವ್ಯಾಪಾರಸ್ಥರು, ಸಣ್ಣ-ಪುಟ್ಟ ವ್ಯಾಪಾರದಿಂದ ಬದುಕುಕಟ್ಟಿಕೊಂಡಿದ್ದರು. ಇದೀಗ ಅವರನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ. ಹಂಪಿ ಉತ್ಸವದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಹಲವು ಸೌರ‍್ಯಗಳನ್ನು ಕಲ್ಪಿಸುವುದು ಜವಬ್ದಾರಿಯಾಗಿದ್ದರೂ ಹಂಪಿ ವ್ಯಾಪಾರಿಗಳಿಗೆ ಕೊನೆಯ ಪಕ್ಷ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಅವರನ್ನು ಸ್ಥಳಾಂತರ ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

ಅದ್ಧೂರಿ ಉತ್ಸವಕ್ಕೆ ಸಿದ್ಧತೆ
ಕೊರೊನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷದಿಂದ ಸ್ಥಗಿತಗೊಂಡಿದ್ದ ಹಂಪಿ ಉತ್ಸವವನ್ನು ಅದ್ಧೂರಿ ಆಚರಣೆಗೆ ಸಿದ್ಧತೆ ಮಾಡಿಕೊಂಡು ಹಂಪಿಯಲ್ಲಿ ಸಿದ್ಧತೆ ಕಾರ್ಯ ಕೂಡ ಈಗಾಗಲೇ ಆರಂಭವಾಗಿದೆ. ಇದಕ್ಕಾಗಿ ಗಾಯತ್ರಿ ಪೀಠದ ಬಳಿ ಇರುವ ಮೈದಾನ, ಎದುರು ಬಸವಣ್ಣ ಅಕ್ಕಪಕ್ಕದ ಮೈದಾನವನ್ನು ಸ್ವಚ್ಚಗೊಳಿಸಲಾಗುತ್ತಿದೆ.

ಪಾರ್ಕಿಂಗ್ ಸಮಸ್ಯೆ
ಈ ಬಾರಿಯ ಹಂಪಿ ಉತ್ಸವದಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುವ ನೀರಿಕ್ಷೆಯಿದ್ದು ಆದರೆ, ಬಂದು ಹೋಗುವ ಪ್ರವಾಸಿಗರ ವಾಹನಗಳ ನಿಲುಗಡೆಗಾಗಿ ಪಾರ್ಕಿಂಗ್ ವ್ಯವಸ್ಥೆ ಸಮಸ್ಯೆ ಇದೀಗ ಎದುರಾಗಿದೆ. ಕೆಲ ವರ್ಷಗಳಿಂದ ಕಡ್ಡಿರಾಂಪುರ ಕ್ರಾಸ್ ಬಳಿಯಿದ್ದ ಖಾಸಗಿಯವರ ಖಾಲಿ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಆದರೆ, ಈ ಬಾರಿ ಜಾಗದಲ್ಲಿ ಹಸಿರು ಬೆಳಸಲಾಗಿದ್ದು, ಪಾರ್ಕಿಂಗ್‌ಗೆ ಈ ಜಾಗ ಈ ಬಾರಿ ಲಭ್ಯವಾಗುವುದಿಲ್ಲ ಎಂಬುದು ಖಚಿತ. ಇದರಿಂದಾಗಿ ಹೊಸಪೇಟೆ ಕಡೆಯಿಂದ ಬರುವ ಪ್ರವಾಸಿಗರಿಗೆ ಪಾರ್ಕಿಂಗ್ ಸಮಸ್ಯೆ ಎದುರಾಗಲಿದ್ದು, ಇದಕ್ಕೆ ಪರ್ಯಾಯ ಏನೆಂಬ ಚಿಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ಕಾಡುತ್ತಿದೆ.

Advertisement

ಹಂಪಿ ಗ್ರಾಮ ಪಂಚಾಯ್ತಿ ಎದುರಿನ ಪಾರ್ಕಿಂಗ್ ಸ್ಥಳದಲ್ಲಿರುವ ಗೂಡಂಗಡಿಗಳನ್ನು ತೆರುವುಗೊಳಿಸುವುದು ಅಥಾವ ಅವುಗಳನ್ನು ಹಿಂದಕ್ಕೆ ತಳ್ಳಿ ಅವರ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು ಎಂಬುದರ ಬಗ್ಗೆ ಅಧಿಕಾರಿಗಳೊಂದಿಗೆ ಚೆರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು.
-ಟಿ.ವೆಂಕಟೇಶ್, ಜಿಲ್ಲಾಧಿಕಾರಿಗಳು, ವಿಜಯನಗರ

ಹಂಪಿಯಲ್ಲಿ ಸಣ್ಣಪುಟ್ಟ ವ್ಯಾಪಾರದಿಂದ ಬದುಕುಕಟ್ಟಿಕೊಂಡಿರುವ ನಮಗೆ ಹಂಪಿ ಉತ್ಸವ ಸಂದರ್ಭದಲ್ಲಿ ಯಾವಾದಾದರೂ ಒಂದು ಮೂಲೆಯಲ್ಲಿ ವ್ಯಾಪಾರ-ವಹಿವಾಟು ನಡೆಸಲು ಜಿಲ್ಲಾಡಳಿತ ಅನುಕೂಲ ಮಾಡಿಕೊಡಬೇಕು. ಇದರಿಂದ ಸಾಲ-ಸೋಲ ಮಾಡಿಕೊಂಡು ಜೀವನ ಸಾಗಿಸುತ್ತಿರುವ ನಮಗೆ ಅನುಕೂಲವಾಗಲಿದೆ.
-ಗೂಡಂಗಡಿ ವ್ಯಾಪಾರಿ
====
ಪಿ.ಸತ್ಯನಾರಾಯಣ,ಹೊಸಪೇಟೆ.

Advertisement

Udayavani is now on Telegram. Click here to join our channel and stay updated with the latest news.

Next