ಹೊಸಪೇಟೆ: ವಿದೇಶಿ ಯುವತಿಯೊಬ್ಬಳು ಹಂಪಿ ಯುವಕನೊಂದಿಗೆ ಶುಕ್ರವಾರ ಸಪ್ತಪದಿ ತುಳಿದಿದ್ದಾರೆ.
ಹೌದು, ವಿಶ್ವವಿಖ್ಯಾತ ಹಂಪಿಯಲ್ಲಿ ಮಾರ್ಗದರ್ಶಕ ಹಾಗೂ ಆಟೋ ಚಾಲಕನಾಗಿ ಕೆಲಸ ಮಾಡುತ್ತಿರುವ ಅನಂತರಾಜ ಅವರನ್ನು ಬೆಲ್ಜಿಯಂನ ಕೆಮಿಲ್ ಎಂಬ ಯುವತಿ ಹಂಪಿ ವಿರೂಪಾಕ್ಷೇಶ್ವರ ದೇಗುಲದಲ್ಲಿ ಮದುವೆಯಾಗಿದ್ದಾರೆ.
ಹಂಪಿ ಜನತಾ ಪ್ಲಾಟಿನ ನಿವಾಸಿ ರೇಣುಕಮ್ಮ, ದಿ|| ಅಂಜಿನಪ್ಪ ಅವರ ಪುತ್ರ ಅನಂತರಾಜು, ಬೆಲ್ಜಿಯಂನ ಕೆಮಿಲ್‌ಳ ಪ್ರೇಮ ಪಾಶಕ್ಕೆ ಒಳಗಾಗಿದ್ದ. ಇವರಿಬ್ಬರೂ ಸೇರಿ ವಿದೇಶ ಪ್ರವಾಸ ಕೂಡ ಮಾಡಿದ್ದರು. ಇದೀಗ ಅವರಿಗೆ ಮದುವೆ ಮಾಡಿಸುವ ಮೂಲಕ ಇಬ್ಬರ ಪ್ರೇಮಕ್ಕೆ ಅವರ ಕುಟುಂಬಸ್ಥರು ಅಧಿಕೃತ ಮೊಹರು ಒತ್ತಿದ್ದಾರೆ.
ಹಂಪಿಗೆ ಬಂದಾಗ ಪ್ರೇಮಾಂಕುರ: ಮೂರು ವರ್ಷದ ಹಿಂದೆ ಬೆಲ್ಜಿಯಂ ದೇಶದಿಂದ ಹಂಪಿಗೆ ಆಗಮಿಸಿದ್ದ ಮರಿಯನ್ನೇ ಜೀಮ್ ಫಿಲಿಪ್ಪೆ ಅವರ ಪರಿವಾರಕ್ಕೆ ಹಂಪಿಯಲ್ಲಿ ಆಟೋ ಚಾಲಕ ಅನಂತರಾಜುವಿನ ಪರಿಚಯವಾಗಿದೆ. ಅನಂತರಾಜು ಪ್ರಾಮಾಣಿಕ ಆಟೋ ಚಾಲಕ ಹಾಗೂ ಉತ್ತಮ ಮಾರ್ಗದರ್ಶಕನಾಗಿಯೂ ಅವರ ಮನಗೆದ್ದಿದ್ದಾನೆ. ಮರಿಯನ್ನೇ ಶ್ರೀ ಜೀಮ್ ಫಿಲಿಪ್ಪೆ ಅವರ ತೃತೀಯ ಸುಪುತ್ರಿ ಕೆಮಿಲ್ ಹಂಪಿಯ ನಿಸರ್ಗದ ಸೊಬಗಿಗೆ ಮನಸೋತಿದ್ದಾರೆ. ಕೆಮಿಲ್ ಅವರ ಪರಿವಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಅನಂತರಾಜುವಿನ ಮೇಲೆ ಯುವತಿ ಕೆಮಿಲ್ ಪ್ರೇಮ ಅರಳಿದೆ.
ಮೂರು ವರ್ಷದ ಹಿಂದೆಯೇ ಪ್ರೇಮ ವಿವಾಹವಾಗಬೇಕಿದ್ದ ಜೋಡಿಗೆ ಕೊರೊನಾ ತಡೆಯೊಡ್ಡಿತ್ತು. ಕೆಮಿಲ್ ಕುಟುಂಬದವರಿಗೆ ಮಗಳ ವಿವಾಹವನ್ನು ಬೆಲ್ಜಿಯಂ ದೇಶದಲ್ಲಿ ಅದ್ಧೂರಿಯಿಂದ ಮಾಡಬೇಕೆಂಬ ಮನಸ್ಸಿದ್ದರೂ ಹಿಂದೂ ಸಂಪ್ರದಾಯದಂತೆ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸರಳವಾಗಿ ಮಾಡಿಕೊಳ್ಳಬೇಕೆಂಬ ಯುವಕನ ಆಸೆಗೆ ಸಹಮತ ಸೂಚಿಸಿ, 50ಕ್ಕೂ ಅಧಿಕ ಜನ ಬೆಲ್ಜಿಯಂ ದೇಶದಿಂದ ಆಗಮಿಸಿ ಗುರುವಾರ ಸಂಜೆ ಕುಟುಂಬ ಪರಿವಾರದೊಂದಿಗೆ ನಿಶ್ಚಿತಾರ್ಥ (ಎಂಗೇಜ್ಮೆಂಟ್) ನೆರವೇರಿಸಿದ್ದರು. ನ.25ರಂದು ಶುಕ್ರವಾರ ಬೆಳಗ್ಗೆ 8.30ರಿಂದ 9.30ರವರೆಗೆ ಸಲ್ಲುವ ಕುಂಭ ಲಗ್ನದ ಶುಭ ಮುಹೂರ್ತದಲ್ಲಿ ಮಾಂಗಲ್ಯಧಾರಣೆ ನಡೆದಿದೆ.
ಹಿಂದೂ ಸಂಪ್ರದಾಯದಂತೆ ಮದುವೆ: ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ನೆರವೇರಿದೆ. ಸಪ್ತಪದಿ ತುಳಿಯುವುದರಿಂದ ಹಿಡಿದು ಮಾಂಗಲ್ಯಧಾರಣೆ, ಅರುಂಧತಿ ನಕ್ಷತ್ರ ನೋಡುವುದೂ ಸೇರಿ ಎಲ್ಲವೂ ಹಿಂದೂ ಸಂಪ್ರದಾಯದಂತೆ ನಡೆದಿದೆ.
ಕಳೆದ ಮೂರು ವರ್ಷಗಳ ಹಿಂದೆ ನಮ್ಮಬ್ಬರಿಗೂ ಪ್ರೇಮಾಂಕುರವಾಗಿತ್ತು. ಇಬ್ಬರೂ ಸಹ ನಮ್ಮ ಮನೆ ಹಿರಿಯರ ಮನವೊಲಿಸಿ ಇದೀಗ ಮದುವೆಯಾಗಿದ್ದೇವೆ. ಸುಖವಾಗಿ ಬಾಳಲು ಎಲ್ಲರೂ ಹರಸಲಿ ಎನ್ನುವುದು ನನ್ನ ಪ್ರಾರ್ಥನೆ.
-ಅನಂತರಾಜು, ವಿದೇಶಿ ಯುವತಿ ವರಿಸಿದಾತ