Advertisement

ಹಂಪಿ ಎಕ್ಸ್‌ಪ್ರೆಸ್‌ ಹುಡುಗ

09:08 AM Jun 27, 2019 | Team Udayavani |

ಕನ್ನಡಿಗರ ಮನದಾಳದಲ್ಲಿ ವಿಜಯನಗರದ ವೈಭವದ ಕತೆಗಳ ಕಹಳೆ ಇನ್ನೂ ಮೊಳಗುತ್ತಲೇ ಇದೆ. ಆಗಿನ ಕಾಲದಲ್ಲಿ ಅಲ್ಲಿನ ಬೀದಿಗಳಲ್ಲಿ ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನು ತೂಕಕ್ಕೆ ಹಾಕಿ ಮಾರುತ್ತಿದ್ದರೆಂಬ ಸಂಗತಿಯನ್ನಂತೂ ನಾವು ಹೆಮ್ಮೆಯಿಂದ ಉಲ್ಲೇಖೀಸುವುದುಂಟು. ಈವತ್ತಿನ ಹಂಪಿಯಲ್ಲಿ ಆಗಿನ ಕಾಲದಂತೆ ಇಲ್ಲದೇ ಇರಬಹುದು. ಆದರೆ, ಗತಕಾಲದ ವೈಭವವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಗೈಡ್‌ಗಳ ಜೋಶ್‌ ನಿಜಕ್ಕೂ ಸೋಜಿಗ. ಪದವಿ ಕೈಯಲ್ಲಿದ್ದರೂ, ಸಿಟಿ ಸೇರದೇ, ತಮ್ಮೂರಿನ ಕತೆ ಹೇಳುವ ಇಲ್ಲೊಬ್ಬ ಗೈಡ್‌ನ‌ ಅಂತರಾಳ ನಿಮ್ಮ ಸ್ಫೂರ್ತಿಗಾಗಿ…

Advertisement

ನೀವೇನು ಮಾಡುತ್ತಿದ್ದೀರಿ ಎಂಬ ಪ್ರಶ್ನೆಗೆ ಡಾಕ್ಟರ್‌, ಎಂಜಿನಿಯರ್‌, ಬ್ಯಾಂಕ್‌ ಮ್ಯಾನೇಜರ್‌, ಸೈಂಟಿಸ್ಟ್‌ ಎಂಬಿತ್ಯಾದಿ ಉತ್ತರಗಳು ಬರಬಹುದು. ಈ ಪ್ರಶ್ನೆಯನ್ನು ನನಗೇನಾದರೂ ಕೇಳಿದರೆ ನಾನು “ಮಾರ್ಗದರ್ಶಕ’ ಎಂದು ಹೇಳುತ್ತೇನೆ. ಹಾಗೆ ಹೇಳಿಕೊಳ್ಳಲು ನನಗೇನೋ ಹೆಮ್ಮೆ. ಓಹ್‌ ನನ್ನ ಹೆಸರು ಹೇಳ್ಳೋದನ್ನೇ ಮರೆತಿದ್ದೆ. ಹಾಯ್‌, ನಾನು ರವಿ ಕೆ. ಅಂತ. ಹಂಪಿಯ ಚರಿತೆ ಹಾಡುವ ಗೈಡ್‌. ಸಿಳ್ಳೇಕ್ಯಾತ ಸಮುದಾಯದವನಾದ ನಾನು ಹುಟ್ಟಿದ್ದು ಬೆಳೆದಿದ್ದೆಲ್ಲವೂ ಹಂಪಿಯಲ್ಲಿಯೇ. ಮೀನುಗಾರಿಕೆ ನಮ್ಮ ಕುಲ ಕಸುಬಾದರೂ ನನ್ನದೃಷ್ಟಕ್ಕೆ ಅದು ನನ್ನ ಕೈ ಹಿಡಿಯಲಿಲ್ಲ. ಹಂಪಿ ಕನ್ನಡ ವಿವಿಯಿಂದ ಬಿಎ., ಬಿ.ಎಡ್‌ ಪದವಿ ಪಡೆದೆ. ಪುರಾತತ್ವ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಸಂಸ್ಕೃತಿ ವಿಷಯದಲ್ಲಿ ಡಿಪ್ಲೋಮಾವನ್ನೂ ಮುಗಿಸಿ, ಈಗ ಎಂ.ಎ (ಇತಿಹಾಸ) ಅಧ್ಯಯನ ಮಾಡುತ್ತಿದ್ದೇನೆ. ಮದುವೆಯಾಗಿ ಐವರು ಹೆಣ್ಣುಮಕ್ಕಳ ತಂದೆ… ಇದಿಷ್ಟು ನನ್ನ ಸದ್ಯದ ಪ್ರವರ.

ಗೈಡ್‌ಗಳು ನಮ್ಮೂರಿನ ಬಗ್ಗೆ ತಪ್ಪು ತಪ್ಪು ಮಾಹಿತಿ ನೀಡಿ ಪ್ರವಾಸಿಗರ ದಾರಿ ತಪ್ಪಿಸುವುದನ್ನು ನೋಡಿದಾಗ ನಾನೇ ಯಾಕೆ ಗೈಡ್‌ ಆಗಿ ಕೆಲಸ ಮಾಡಬಾರದು ಅಂತ ಅನ್ನಿಸಿತ್ತು. ಆ ಕಾರಣಕ್ಕಾಗಿಯೇ, 2004ರಿಂದ ನಾನೇ ಗೈಡ್‌ ಆದೆ. ನೋಡ ನೋಡುತ್ತ 15 ವರ್ಷಗಳು ಸಂದು ಹೋದವು. ಈ ಅವಧಿಯಲ್ಲಿ ಬದುಕು ಸಾಕಷ್ಟು ಪಾಠ ಕಲಿಸಿದೆ. ಅನೇಕ ಏರಿಳಿತಗಳನ್ನು ಕಂಡಿದ್ದೇನೆ. ನಾನು ಮಾಡುತ್ತಿರುವ ಕೆಲಸ ಮನಸ್ಸು ತುಂಬಿಸುತ್ತಿದೆ ಆದರೆ ಹೊಟ್ಟೆ ತುಂಬಿಸುವುದಿಲ್ಲ ಎಂಬ ಕಹಿ ಸತ್ಯ ಈಗ ಅರಿವಾಗಿದೆ. ಆದರೆ, ಚರಿತ್ರೆ ಹಾಡುವಾಗ, ಆ ವೈಭವಯುತ ದಿನಗಳೊಳಗೆ ನಾನೂ ಕಳೆದುಹೋಗುತ್ತೇನೆ.

ಗೈಡ್‌ ಆಗುವ ಹಾದಿ ಅಷ್ಟೇನೂ ಸುಲಭವಲ್ಲ. ಪ್ರವಾಸೋದ್ಯಮ ಇಲಾಖೆ 2-3 ತಿಂಗಳ ಸ್ವ ಉದ್ಯೋಗ ತರಬೇತಿಯನ್ನಷ್ಟೇ ನೀಡಿ ಮುಂದಿನ ದಾರಿ ನೀವೇ ನೋಡಿಕೊಳ್ಳಿ ಎಂದು ಕೈಚೆಲ್ಲುತ್ತದೆ. ಗೌರವಧನ, ಕೆಲಸದ ಭದ್ರತೆ ಇರೋದಿಲ್ಲ. ನಮ್ಮ ತುತ್ತಿನ ಚೀಲವನ್ನು ನಾವೇ ಕಂಡುಕೊಳ್ಳಬೇಕು. ಸಾಲದ್ದಕ್ಕೆ 200ಕ್ಕೂ ಹೆಚ್ಚು ಗೈಡ್‌ಗಳು ಇರೋದ್ರಿಂದ ಪೈಪೋಟಿ ಜಾಸ್ತಿ. ಇದೊಂಥರಾ ಮಳೆ ಬಂದಾಗ ಬೆಳೆ ತೆಗೆಯುವ ಸ್ಥಿತಿ.

ಹಂಪಿಯಲ್ಲಿ ಅಕ್ಟೋಬರ್‌ನಿಂದ ಫೆಬ್ರವರಿ ತನಕವಷ್ಟೆ ಪ್ರವಾಸಿಗರ ಜಾತ್ರೆ. ಅದರಲ್ಲೂ ಡಿಸೆಂಬರ್‌ನಿಂದ ಫೆಬ್ರವರಿ ತನಕವಂತೂ ಜನವೋ ಜನ. ವಿಶೇಷವಾಗಿ ಪ. ಬಂಗಾಳ, ದೆಹಲಿ, ಕೇರಳ ಮತ್ತಿತರ ಕಡೆಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಭೇಟಿ ನೀಡುತ್ತಾರೆ. ವಿದೇಶಿಯರಲ್ಲಿ ಫ್ರಾನ್ಸ್‌, ಇಟಲಿ, ಜರ್ಮನಿ, ರಷ್ಯಾ ರಾಷ್ಟ್ರಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರ್ತಾರೆ. ನಾನು ನೋಡಿದ ಹಾಗೆ ವಿದೇಶಿ ಪ್ರವಾಸಿಗರಲ್ಲಿ ಸ್ವತ್ಛತೆ ಮತ್ತಿತರ ವಿಚಾರಗಳ ಬಗ್ಗೆ ಜಾಗೃತಿ ಇರುತ್ತೆ.

Advertisement

ಹಂಪಿಗೆ ಬರುವ ಬಹುತೇಕರು ಇಂಗ್ಲಿಷ್‌ ಭಾಷೆಯಲ್ಲಿ ಮಾತನಾಡುವುದು ಹೆಚ್ಚು. ಹಾಗಾಗಿ, ಗೈಡ್‌ಗೆ ಇಂಗ್ಲಿಷ್‌ ಒಂದು ಬಂದರೆ ಸಂಭಾಳಿಸಬಲ್ಲ. ನಾನು ಇದಕ್ಕೆ ಮೇಲೆ ಕನ್ನಡ, ಹಿಂದಿ, ತೆಲುಗು, ಮರಾಠಿ ಭಾಷೆಗಳಲ್ಲಿಯೂ ಸಂವಹಿಸುತ್ತೇನೆ. ಫ್ರೆಂಚ್‌, ರಷ್ಯನ್‌ ಪ್ರವಾಸಿಗರು ಬಂದರೆ ಆ ಭಾಷೆ ಬಲ್ಲ ಸ್ನೇಹಿತರ ನೆರವು ಪಡೆಯುತ್ತೇನೆ. ವಿದೇಶಿ ಭಾಷೆ ಕಲಿಯುವ ಆಸಕ್ತಿ ಇದೆ ಆದರೆ, ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ.

ಚೌಕಾಸಿನೂ ಮಾಡ್ತಾರೆ, ಟಿಪ್ಸೂ ಕೊಡ್ತಾರೆ…
ಪ್ರವಾಸೋದ್ಯಮ ಇಲಾಖೆ ನಿಗದಿಪಡಿಸಿದ ಶುಲ್ಕವನ್ನಷ್ಟೇ ಪ್ರವಾಸಿಗರಿಂದ ನಾವು ಪಡೀತೇವೆ. ಹಾಗಿದ್ದೂ ನಿಗದಿತ ಶುಲ್ಕ ತೆರಲು ಚೌಕಾಸಿ ಮಾಡುತ್ತಾರೆ. ಇನ್ನು ಕೆಲವರು ನಮ್ಮಿಂದ ಎಲ್ಲಾ ಮಾಹಿತಿ ಪಡೆದುಕೊಂಡು ನಂತರ ಇಷ್ಟವಾಗಿಲ್ಲ ಎಂದು ಕೈ ಎತ್ತುತ್ತಾರೆ. ಕೆಲ ಸಲ ನಮ್ಮ ವಿವರಣೆಯಿಂದ ಖುಷಿಯಾಗಿ ನಿಗದಿತ ಶುಲ್ಕವನ್ನಲ್ಲದೆ ಎಕ್ಸ್‌ಟ್ರಾ ಟಿಪ್ಸ್‌ ಕೊಡುವವರೂ ಸಿಗುವುದುಂಟು. ಎಲ್ಲವನ್ನೂ ಕೇಳಿಸಿಕೊಂಡು ನಯಾಪೈಸೆ ಕೊಡದೇ ಹೋಗುವವರನ್ನು ಕಂಡ್ರೆ ಸಿಟ್ಟೂ ಬರುತ್ತೆ, ಬೇಸರವೂ ಆಗುತ್ತೆ. ಎಲ್ಲ ಹಣೆಬರಹ ಎಂದುಕೊಂಡು ಸುಮ್ಮನಾಗಿಬಿಡ್ತೀನಿ.

ಮಂಡಿನೋವೇ ನಮ್ಮ ಶತ್ರು
ಗುಡ್ಡ ಬೆಟ್ಟಗಳನ್ನು ಹತ್ತಿಳಿಯಬೇಕು, ಎಲ್ಲ ಕಡೆ ಓಡಾಡುತ್ತಲೇ ಇರಬೇಕು… ಇದು ಗೈಡ್‌ನ‌ ದಿನಚರಿ. ಸೂರ್ಯೋದಯ- ಸೂರ್ಯಾಸ್ತಮಾನ ವೀಕ್ಷಣೆಗೆ ಅಂಜನಾದ್ರಿ ಬೆಟ್ಟ, ಮಾತಂಗ ಬೆಟ್ಟ, ಮಾಲ್ಯವಂತ ರಘುನಾಥ ಪರ್ವತ ಬೆಸ್ಟ್‌ ಪ್ಲೇಸ್‌. ಪ್ರವಾಸಿಗರೊಂದಿಗೆ ಅಲ್ಲೆಲ್ಲ ಓಡಾಡಿ ಬರುವಷ್ಟರಲ್ಲಿ ಹೈರಾಣಾಗಿರುತ್ತೇವೆ. ಬೆಟ್ಟ- ಪರ್ವತಗಳನ್ನು ಹತ್ತಿಳಿಯುವಾಗ ಮೈ ಕೈ ನೋವು ಶುರುವಾಗುತ್ತೆ. ಇನ್ನು 35 ವರ್ಷ ದಾಟಿದರಂತೂ ಮಂಡಿನೋವು ಕಾಣಿಸಿಕೊಳ್ಳುತ್ತೆ.

ಮೋದಿ ಸಹೋದರನಿಗೆ ಗೈಡ್‌ ಆಗಿದ್ದು!
ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ ದಾಮೋದರ ದಾಸ್‌ ಮೋದಿಯವರು ಒಮ್ಮೆ ಕುಟುಂಬ ಸಮೇತ ಹಂಪಿಗೆ ಭೇಟಿ ನೀಡಿದ್ರು. ಅವರಿಗೆ ಹಂಪಿ ಬಗ್ಗೆ ತಿಳಿಸಿಕೊಡುವ ಸೌಭಾಗ್ಯ ನನಗೆ ಒದಗಿ ಬಂದಿತ್ತು. ಆ ಕಾರ್ಯದಲ್ಲಿ ಯಶಸ್ವಿಯೂ ಆದೆ. ಅವರು ಬಂದು ಹೋದ 3 ತಿಂಗಳಿಗೆ ಕಾಕತಾಳೀಯ ಎಂಬಂತೆ ಕೇಂದ್ರ ಸರ್ಕಾರದಿಂದ ಹಂಪಿಯ ಅಭಿವೃದ್ಧಿಗೆ 35 ಕೋಟಿ ರೂ. ಬಿಡುಗಡೆಯಾಯಿತು. ಅಷ್ಟಲ್ಲದೆ 50 ರೂ. ನೋಟಿನಲ್ಲಿ ಹಂಪಿಯ ಕಲ್ಲಿನ ರಥದ ಚಿತ್ರ ಮೂಡಿತು.
ನರೇಂದ್ರ ಮೋದಿ ಒಮ್ಮೆ ಸಭೆಯಲ್ಲಿ ತಮ್ಮ ಸಹೋದ್ಯೋಗಿಗಳಿಗೆ “ರಜೆಯಲ್ಲಿ ಎಲ್ಲೆಲ್ಲೋ ಹೋಗುವುದಕ್ಕಿಂತ ಕರ್ನಾಟಕದ ಹಂಪಿಗೊಮ್ಮೆ ಹೋಗಿ ಬನ್ನಿ’ ಎಂದಿದ್ದರಂತೆ. ಅದನ್ನು ತಿಳಿದು ತುಂಬಾ ಸಂತಸವಾಯಿತು.

ನನ್ನ ವಿದೇಶಿ ಬೆಸ್ಟ್‌ ಫ್ರೆಂಡ್‌
15 ವರ್ಷಗಳ ಅವಧಿಯಲ್ಲಿ ಸಾವಿರಾರು ಮಂದಿಯನ್ನು ಭೇಟಿ ಮಾಡಿದ್ದೇನೆ. ಅವರಲ್ಲಿ ಜರ್ಮನಿಯ ಲೇಖಕ ಮಿಚೆಲ್‌ ಹಾಟ್ಸ್‌ನರ್‌ ನನ್ನ ಅಚ್ಚುಮೆಚ್ಚಿನ ಸ್ನೇಹಿತ. ನಾನು ಅವರನ್ನು ಪ್ರೀತಿಯಿಂದ ಮೈಕ್‌ ಎಂದೇ ಕರೆಯುತ್ತೇನೆ. ಅವರು ಒಂದು ತಿಂಗಳು ಹಂಪಿಯಲ್ಲಿ ವಾಸ್ತವ್ಯ ಮಾಡಿ ಶ್ರೀಕೃಷ್ಣದೇವರಾಯರ ಬಗ್ಗೆ ಕಾದಂಬರಿಯನ್ನೂ ಬರೆದಿದ್ದಾರೆ. ಭಾರತೀಯ ಮಹಿಳೆಯನ್ನೇ ಮದುವೆಯಾಗಿರುವ ಮೈಕ್‌ಗೆ, ಭಾರತ ಮತ್ತು ಭಾರತೀಯರೆಂದರೆ ಪ್ರೀತಿ.

ಗೈಡ್‌ ಆಗಲು ಗೈಡ್‌
1. 2-3 ವರ್ಷಕ್ಕೊಮ್ಮೆ ಪ್ರವಾಸೋದ್ಯಮ ಇಲಾಖೆ ಪ್ರವಾಸಿ ಮಾರ್ಗದರ್ಶಿ ಸ್ವಯಂ ಉದ್ಯೋಗ ಸ್ಕೀಂನಲ್ಲಿ ತರಬೇತಿಗೆ ಅರ್ಜಿ ಆಹ್ವಾನಿಸುತ್ತೆ. ಮೊದಲು ಪದವಿ, ದ್ವಿತೀಯ ಪಿಯುಸಿ ಅರ್ಹತೆ ಇತ್ತು. ಅದೀಗ ಎಸ್ಸೆಸ್ಸೆಲ್ಸಿಗೆ ಬಂದು ನಿಂತಿದೆ.
2. ವ್ಯಾಕರಣ, ಸ್ಪಷ್ಟ ಉಚ್ಛಾರ, ಪಾಂಡಿತ್ಯಪೂರ್ಣ ಮಾತುಗಾರಿಕೆ ಬೇಕು. ಪದಗಳ ಅರ್ಥ, ಜೋಡಣೆ, ಕ್ರಮಬದ್ಧವಾಗಿ, ಎಲ್ಲೂ ಬೋರಾಗದಂತೆ ತಿಳಿಸಿಕೊಡುವ ಕೌಶಲ್ಯ ಇರಬೇಕು.
3. ಗೈಡ್‌ ಆಗುವ ಸ್ಥಳದ ಇತಿಹಾಸದ ಆಳ ಜ್ಞಾನ.
4. ಪ್ರವಾಸಿಗರು ಅತಿಥಿಗಳೆಂದು ಭಾವಿಸಿ, ಗೌರವದಿಂದ ನಡೆದುಕೊಳ್ಳಬೇಕು.

– ನಿರೂಪಣೆ: ಅರವಿಂದ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next