Advertisement

ಹಂಪನಾಳ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ

05:27 PM Jan 21, 2018 | Team Udayavani |

ಮಸ್ಕಿ: ತೆಲಂಗಾಣ ರಾಜ್ಯದ ಸಿಕಂದರಾಬಾದ್‌ ನಲ್ಲಿ ನಡೆದ ಆರು ರಾಜ್ಯಗಳ ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕರ್ನಾರಟಕವನ್ನು ಪ್ರತಿನಿಧಿಸಿದ ಸಮೀಪದ ಹಂಪನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರದರ್ಶಿಸಿದ ಬಹುಪಯೋಗಿ ರೈತ ಮಿತ್ರ ಯಂತ್ರಕ್ಕೆ ದ್ವಿತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದೆ.

Advertisement

ಹಂಪನಾಳ ಗ್ರಾಮದ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ಮನೋಜ್‌ಕುಮಾರ ಹಾಗೂ ಸುರೇಶ ಅವರು ಗಣಿತ ಶಿಕ್ಷಕ ಎಸ್‌.ಎಸ್‌. ರವೀಶ ಮಾರ್ಗದರ್ಶನದಲ್ಲಿ ತಯಾರಿಸಿದ ಬಹು ಉಪಯೋಗಿ ರೈತ ಮಿತ್ರ ಯಂತ್ರಕ್ಕೆ ಯಾವುದೇ ಇಂಧನ, ದೈಹಿಕ ಶ್ರಮ ಹಾಕದೇ ಬೆಳೆಗಳಿಗೆ ಔಷಧಿ ಸಿಂಪಡಿಸಬಹುದಾಗಿದೆ. ವಾಹನ ಚಲಿಸದೇ ಇರುವ ಜಾಗದಲ್ಲಿ ಹಾಗೂ ದಾಳಿಂಬೆ, ಸಪೋಟಾ ಹಾಗೂ ಮಾವಿನ ಫಸಲುಗಳಿಗೂ ಸಹಿತ ನಿಂತಲ್ಲಿಯೇ ಸೌರ ಶಕ್ತಿಯಿಂದ ಔಷಧಿ ಸಿಂಪಡಿಸುವ ವ್ಯವಸ್ಥೆಯೂ ಇದರಲ್ಲಿದೆ.

ಬೆಳೆಗಳಿಗೆ ಹಾನಿ ಮಾಡುವ ಕೀಟ ಗಳನ್ನುಆಕರ್ಷಿಸಿ ನಾಶ  ಮಾಡುವ ವಿಧಾನವನ್ನು ಸಹ ಇದರಲ್ಲಿರುವುದು ವಿಶೇಷ. ಅಲ್ಲದೇ ಜಮೀನುಗಳ ಬೆಳೆಗಳ ಸಾಲುಗಳಲ್ಲಿ ಕಳೆಗಳನ್ನು ಕೀಳುವ ಕುಂಠಿಯ ಅಥವಾ ಇತರ ಸಾಧನವನ್ನು ಸಹ ಅಳವಡಿಸಿ ರೈತರು ಉಪಯೋಗ ಪಡೆಯಬಹುದಾಗಿದೆ.
 
ಈ ಯಂತ್ರ ತಯಾರಿಗೆ ಹಳೆ ವಸ್ತು ಮತ್ತು ಕಡಿಮೆ ಬೆಲೆಯ ವಸ್ತುಗಳನ್ನು ಬಳಸಿದ್ದು, ಕೇವಲ 1500 ರೂ.ಗಳಲ್ಲಿ ಈ
ಯಂತ್ರ ತಯಾರಿಸಲಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು. ಸಿಕಂದರಾಬಾದ್‌ನಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕೇರಳ, ಪಾಂಡಿಚೇರಿ, ತಮಿಳುನಾಡು, ಸೀಮಾಂಧ್ರ, ತೆಲಂಗಾಣ ಹಾಗೂ ಕರ್ನಾಟಕದ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಹಂಪನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಕರ್ನಾಟಕವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ರಾಜ್ಯ ಮತ್ತು ಜಿಲ್ಲೆಗೆ ಕೀರ್ತಿ ತಂದಿದೆ. ಈ ಶಾಲೆ ಸತತ ಮೂರನೇ ಬಾರಿ ದಕ್ಷಿಣ ಭಾರತ ವಿಜ್ಞಾನ ಮೇಳದಲ್ಲಿ ಭಾಗವಹಿಸಿದ್ದು, ಎರಡು ಬಾರಿ ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next